ಕರಾವಳಿ

ಬೈಂದೂರಿನ ಮಾಜಿ ಶಾಸಕ ಕೆ. ಲಕ್ಷ್ಮೀನಾರಾಯಣ ನಿಧನ

Pinterest LinkedIn Tumblr

ಕುಂದಾಪುರ: ಬೈಂದೂರಿನ ಮಾಜಿ ಶಾಸಕ ಕೆ. ಲಕ್ಷ್ಮೀ ನಾರಾಯಣ (85) ಅವರು ಸೆ.27 ಶುಕ್ರವಾರ ಬೆಳಗ್ಗೆ ಬೆಂಗಳೂರಿನಲ್ಲಿ ನಿಧನರಾದರು.

ಲಕ್ಷ್ಮಿ ನಾರಾಯಣ ಅವರು ಕೆಲ ಸಮಯಗಳಿಂದ ಬೆಂಗಳೂರಿನಲ್ಲೇ ವಾಸವಿದ್ದರು. ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು ಎನ್ನಲಾಗಿದೆ.
ಮೃತರು ಓರ್ವ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಪತ್ನಿ ಕೆಲ ವರ್ಷಗಳ ಹಿಂದೆ ನಿಧನರಾಗಿದ್ದರು. ಅಂತಿಮ ದರ್ಶನಕ್ಕಾಗಿ ಬೆಂಗಳೂರಿನ ಡಾಲರ್ ಕಾಲನಿಯಲ್ಲಿರುವ ಮನೆಯಲ್ಲಿ ಬೆಳಗ್ಗೆ 10.30 ರಿಂದ ವ್ಯವಸ್ಥೆ ಮಾಡಲಾಗಿತ್ತು.

ಇವರು 2008 ರಲ್ಲಿ ಬೈಂದೂರು ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಶಾಸಕರಾಗಿ ಆಯ್ಕೆಯಾಗಿದ್ದರು. ಅದಕ್ಕೂ ಮೊದಲು ಎರಡು ಬಾರಿ ಬಿಜೆಪಿಯಿಂದ ಸ್ಪರ್ಧಿಸಿ ಸೋತಿದ್ದರು. ಸ್ನಾತಕೋತ್ತರ ಪದವಿಧದರಾಗಿರುವ ಇವರು ಉದ್ಯಮಿಯಾಗಿ ಹೆಸರು ಗಳಿಸಿದ್ದರು.

ಶಾಸಕ ಗಂಟಿಹೊಳೆ ಸಂತಾಪ
ಮಾಜಿ ಶಾಸಕರಾದ ಕೆ. ಲಕ್ಷ್ಮೀನಾರಾಯಣ ಅವರ ನಿಧನಕ್ಕೆ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಸಂತಾಪ ಸೂಚಿಸಿದ್ದಾರೆ. ಪಕ್ಷ ಸಂಘಟನೆಯಲ್ಲಿ ಮುಂಚೂಣಿಯಲ್ಲಿ ನಿಂತು ಕಾರ್ಯಕರ್ತರನ್ನು ಸಂಘಟಿಸಿದ್ದ ಲಕ್ಷ್ಮೀನಾರಾಯಣರು ಅವರು ಶಾಸಕರಾಗಿದ್ದ ಅವಧಿಯಲ್ಲಿ ಅಭಿವೃದ್ಧಿಯ ಶಕೆಯನ್ನು ಆರಂಭಿಸಿದವರು. ನಾವೆಲ್ಲ ಸಣ್ಣವರಿದ್ದಾಗಲೇ ನಮ್ಮನ್ನು ಸದೃಢ ಕಾರ್ಯಕರ್ತರನ್ನಾಗಿ ಬೆಳೆಸಿದ ಅವರು, ಬೈಂದೂರನ್ನು ಬಹಳವಾಗಿ ಪ್ರೀತಿಸುತ್ತಾ ಕ್ಷೇತ್ರದ ಕಾರ್ಯಕರ್ತರ ಹಾಗೂ ಜನರ ಪ್ರೀತಿಗೆ ಪಾತ್ರರಾಗಿದ್ದವರು. ಜೀವನದುದ್ದಕ್ಕೂ ಭ್ರಷ್ಟಾಚಾರವನ್ನು ವಿರೋಧಿಸುತ್ತಲೇ ಬದುಕಿದ್ದ ಅವರು, ಅನಾರೋಗ್ಯದ ಸಂದರ್ಭದಲ್ಲಿಯೂ ಕ್ಷೇತ್ರದ ಜನರ ಜೊತೆಗೆ ನಿರಂತರ ಸಂಪರ್ಕದಲ್ಲಿದ್ದವರು. ಅವರ ನಿಧನ ಬೈಂದೂರು ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಶಾಸಕ ಗುರುರಾಜ್ ಗಂಟಿಹೊಳೆ ತಿಳಿಸಿದ್ದಾರೆ.

Comments are closed.