ಕರ್ನಾಟಕ

ಬೆಂಗಳೂರು ನಿರ್ಮಾಣ ಹಂತದ ಕಟ್ಟಡ ಕುಸಿತ: ಸಾವಿನ ಸಂಖ್ಯೆ 8ಕ್ಕೆ ಏರಿಕೆ; ಮಾಲೀಕ, ಗುತ್ತಿಗೆದಾರನ ಬಂಧನ

Pinterest LinkedIn Tumblr

ಬೆಂಗಳೂರು: ನಗರದ ಬಾಬುಸಾಪಾಳ್ಯದಲ್ಲಿ ನಿರ್ಮಾಣ ಹಂತದ 6 ಅಂತಸ್ತಿನ ಕಟ್ಟಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿ ಮೃತಪಟ್ಟವರ ಸಂಖ್ಯೆ 8ಕ್ಕೆ ಏರಿಕೆಯಾಗಿದ್ದು, ಶೋಧ ಕಾರ್ಯಾಚರಣೆ ವೇಳೆ 13 ಮಂದಿಯ ರಕ್ಷಿಸಲಾಗಿದೆ. ಅವಶೇಷಗಳಡಿ ಸಿಲುಕಿದ್ದ ಮೃತದೇಹಗಳನ್ನು ಸಿಬ್ಬಂದಿ ಹೊರತೆಗೆದಿದ್ದಾರೆ.

ಮೃತರಲ್ಲಿ ಐವರನ್ನು ಹರ್ಮನ್ (26), ತ್ರಿಪಾಲ್ (35), ಮೊಹಮ್ಮದ್ ಸಾಹಿಲ್ (19), ಸತ್ಯರಾಜು (25) ಮತ್ತು ಶಂಕರ್ ಎಂದು ಗುರುತಿಸಲಾಗಿದೆ. ಒಟ್ಟು 13 ಮಂದಿಯಲ್ಲಿ ಆರು ಮಂದಿ ಬೆಂಗಳೂರು ಉತ್ತರ ಮತ್ತು ಹೊಸ್ಮಾಟ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮಂಗಳವಾರ ಮಧ್ಯಾಹ್ನ 3:40ರ ಸುಮಾರಿಗೆ ನಗರದಲ್ಲಿ ಸುರಿದ ಭಾರೀ ಮಳೆಯ ನಡುವೆಯೇ ಈ ಕಟ್ಟಡ ಕುಸಿತ ಸಂಭವಿಸಿತ್ತು. ದುರಂತ ನಡೆದ ಸಂದರ್ಭದಲ್ಲಿ ಬಿಹಾರ, ಆಂಧ್ರಪ್ರದೇಶದ ಚಿತ್ತೂರು ಮತ್ತು ಕರ್ನಾಟಕದ ಯಾದಗಿರಿಯ ಒಟ್ಟು 21 ಕಾರ್ಮಿಕರಿದ್ದರು ಎನ್ನಲಾಗಿದೆ. ಅವಶೇಷಗಳಡಿಯಲ್ಲಿ ಸಿಕ್ಕಿಬಿದ್ದಿರುವ ಕಾರ್ಮಿಕರನ್ನು ರಕ್ಷಿಸಲು ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್, ಪೊಲೀಸ್ ಮತ್ತು ಅಗ್ನಿಶಾಮಕ ತುರ್ತು ಸೇವಾ ಸಿಬ್ಬಂದಿ ನಿರಂತರ ಕಾರ್ಯಾಚರಣೆ ನಡೆಸಿದ್ದಾರೆ.

ಇಬ್ಬರು ಆರೋಪಿಗಳ ಬಂಧನ
ಕಟ್ಟಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಇಬ್ಬರು ಆರೋಪಿಗಳ ಬಂಧಿಸಿದ್ದಾರೆ. ಬಂಧಿತರ ಪೈಕಿ ಕಟ್ಟಡದ ಮಾಲೀಕ ಮತ್ತು ಕಟ್ಟಡ ನಿರ್ಮಾಣದ ಉಸ್ತುವಾರಿ ಕಂಟ್ರಾಕ್ಟರ್ ಸೇರಿದ್ದಾರೆ ಎನ್ನಲಾಗಿದೆ. ಬಿಎನ್‌ಎಸ್, ಬಿಬಿಎಂಪಿ ಆರ್‌ಇಆರ್‌ಎ ನಿಯಮದಡಿಯಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದ್ದು, ಕಾರ್ಮಿಕ ಮೊಹಮ್ಮದ್ ಹರ್ಷದ್ ನೀಡಿರೋ ದೂರಿನ ಮೇಲೆ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

Comments are closed.