ಮಂಗಳೂರು: ಕಿರಿಯ ವಯಸ್ಸಿನಲ್ಲೇ ಸ್ಯಾಕ್ಸೋಫೋನ್ ಬಗ್ಗೆ ಅತೀವ ಆಸಕ್ತಿ ಬೆಳೆಸಿಕೊಂಡ ವೈಷ್ಣವಿ ವಿ. ಭಟ್, ಅತ್ಯಾಕರ್ಷಕವಾಗಿ ಸ್ಯಾಕ್ಸೋಫೋನ್ ನುಡಿಸಲು ಆರಂಭಿಸಿ ಕಲಾಪ್ರೇಮಿಗಳ ಮನಗೆಲ್ಲುವಲ್ಲಿ ಸಫಲರಾಗಿದ್ದಲ್ಲದೆ ಸಾಧನೆ ಹಾದಿ ಹಿಡಿದಿದ್ದಾರೆ.
15ನೇ ವಯಸ್ಸಿನಲ್ಲೇ ಸಾರ್ವಜನಿಕ ವೇದಿಕೆಗಳಲ್ಲಿ ಸ್ಯಾಕ್ಸೋಫೋನ್ ಕಾರ್ಯಕ್ರಮಗಳನ್ನು ನೀಡಲು ಆರಂಭಿಸಿದ ವೈಷ್ಣವಿ ಮತ್ತೆ ಹಿಂದಿರುಗಿ ನೋಡಲಿಲ್ಲ. ರವಿಶಂಕರ್ ಗುರೂಜಿ ನೇತೃತ್ವದಲ್ಲಿ ಆರ್ಟ್ ಆಫ್ ಲಿವಿಂಗ್ ವತಿಯಿಂದ ನವದೆಹಲಿಯಲ್ಲಿ ನಡೆದ ವಿಶ್ವ ಸಾಂಸ್ಕೃತಿಕ ಉತ್ಸವದಲ್ಲಿ ವೈಷ್ಣವಿಯ ಸ್ಯಾಕ್ಸೋಫೋನ್ ಅಪಾರ ಜನಮೆಚ್ಚುಗೆಯನ್ನು ಗಳಿಸಿತು. ಇವರು ಮಂಗಳೂರಿನ ನಿವಾಸಿ ಎಂ. ವರದರಾಜ ಭಟ್ ಎಂ. ವಿಜಯಶ್ರೀ ಭಟ್ ದಂಪತಿ ಪುತ್ರಿ. ಬಿಕಾಂ ಪದವಿ ಪಡೆದಿರುವ ಇವರು, ಪ್ರಸ್ತುತ ಸಿಎ ಆರ್ಟಿಕಲ್ ಶಿಪ್ ಅಧ್ಯಯನ ನಡೆಸುತ್ತಿದ್ದಾರೆ. ಭಾರತ್ ಸ್ಕೌಟ್ಸ್ ಗೈಡ್ಸ್ ರಾಷ್ಟ್ರಪತಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದು, ಇಂಗ್ಲೆಂಡ್ ನಲ್ಲಿ ನಡೆದ ಜಾಂಬೂರಿಯಲ್ಲಿ ಭಾಗವಹಿಸಿದ್ದಾರೆ.
ಎಳೆ ವಯಸ್ಸಿನಲ್ಲೇ ಚಿಗುರಿದ ಕಲಾಸಕ್ತಿ:
ವೈಷ್ಣವಿ 3 ವರ್ಷ ವಯಸ್ಸಿನಲ್ಲೇ ಭರತನಾಟ್ಯ ತರಬೇತಿ ಪಡೆಯಲು ಆರಂಭಿಸಿದರು. ಕರ್ನಾಟಕ ಸೆಕಂಡರಿ ಎಜ್ಯುಕೇಷನ್ ಎಕ್ಸಾಮಿನೇಷನ್ ಬೋರ್ಡ್ ನಡೆಸಿದ ಜೂನಿಯರ್ ಪರೀಕ್ಷೆಯಲ್ಲಿ ಸುಮನ್ ರಾಜ್ ಅವರ ಮಾರ್ಗದರ್ಶನದಲ್ಲಿ ಉತ್ತೀರ್ಣರಾದ ವೈಷ್ಣವಿ ರಾಜ್ಯಾದ್ಯಂತ ಭರತನಾಟ್ಯ ಪ್ರದರ್ಶನ ನೀಡಿದ್ದಾರೆ. ಅವುಗಳಲ್ಲಿ ಹಂಪಿ ಉತ್ಸವ, ಬೀಚ್ ಉತ್ಸವಗಳು ಪ್ರಮುಖವಾಗಿವೆ. ದೇಶಾದ್ಯಂತ ಸ್ಯಾಕ್ಸೋಫೋನ್ ಕಾರ್ಯಕ್ರಮಗಳನ್ನು ನೀಡುವ ಜತೆಜತೆಗೆ, ಕಥಕ್, ಕುಚುಪುಡಿ, ಕಥಕಲಿ, ಮೋಹಿನಿ ಅಟ್ಟಮ್ ನಲ್ಲಿಯೂ ವೈಷ್ಣವಿ ತರಬೇತಿ ಪಡೆದಿದ್ದಾರೆ. ಇಷ್ಟು ಮಾತ್ರವಲ್ಲದೇ ವೈಷ್ಣವಿ ಅವರು ಚಿತ್ರಕಲೆಯಲ್ಲಿಯೂ ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಚಾರ್ಕೋಲ್, ಅಕ್ರಿಲಿಕ್ ಪೈಂಟಿಂಗ್, ತೈಲ ಚಿತ್ರ, ಪೆನ್ಸಿಲ್ ಸ್ಕೆಚ್ ನಲ್ಲಿಯೂ ವೈಷ್ಣವಿ ವಿಶಿಷ್ಟ ರೀತಿಯಲ್ಲಿ ಕಲಾಸಕ್ತಿಯನ್ನು ಪ್ರದರ್ಶಿಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಸಂಗೀತ ಕ್ಷೇತ್ರದಲ್ಲಿಯೂ ವೈಷ್ಣವಿಯ ಸಾಧನೆ ಅನನ್ಯ. ಕರ್ನಾಟಕ ಸೆಕಂಡರಿ ಎಜ್ಯುಕೇಷನ್ ಎಕ್ಸಾಮಿನೇಷನ್ ಬೋರ್ಡ್ ನಡೆಸಿದ ಕರ್ನಾಟಿಕ್ ಮ್ಯೂಸಿಕ್ ವಿಭಾಗದಲ್ಲಿ ಜೂನಿಯರ್ ಪರೀಕ್ಷೆಯಲ್ಲಿ ಜಯಲಕ್ಷ್ಮೀ ಭಟ್ ಮಾರ್ಗದರ್ಶನದಲ್ಲಿ ಉತ್ತೀರ್ಣರಾಗಿದ್ದಾರೆ. ವೈಷ್ಣವಿ ಭಟ್ ಸ್ಯಾಕ್ಸೋಫೋನ್ ಎಂಬ ಯೂಟ್ಯೂಬ್ ಚ್ಯಾನಲ್ ಹೊಂದಿರುವ ಇವರು, ತಮ್ಮ ರಚನೆಗಳನ್ನು ಅದರಲ್ಲಿ ಪ್ರಕಟಿಸಿದ್ದಾರೆ.
Comments are closed.