ಉಡುಪಿ: ಪ್ರಿಯಕರನ ಜೊತೆ ಸೇರಿ ಪತಿಯನ್ನೇ ಪತ್ನಿ ಹತ್ಯೆ ಮಾಡಿರುವ ಘಟನೆ ಉಡುಪಿಯ ಕಾರ್ಕಳ ತಾಲೂಕು ಅಜೆಕಾರು ಎಂಬಲ್ಲಿ ನಡೆದಿದ್ದು 44 ವರ್ಷದ ಬಾಲಕೃಷ್ಣ ಪೂಜಾರಿ ಕೊಲೆಯಾದ ದುರ್ದೈವಿಯಾಗಿದ್ದಾರೆ. ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಬಾಲಕೃಷ್ಣ ಅವರ ಪತ್ನಿ ಪ್ರತಿಮಾ ಹಾಗೂ ಆಕೆ ಪ್ರಿಯಕರ ಕಾರ್ಕಳದ ದಿಲೀಪ್ ಹೆಗ್ಡೆ ಎನ್ನುವಾತನನ್ನು ಪೊಲೀಸರು ಬಂಧಿಸಿದ್ದಾರೆ.
ಘಟನೆ ಹಿನ್ನೆಲೆ:
ಬಾಲಕೃಷ್ಣ ಅವರು ಅನಾರೋಗ್ಯದಿಂದ ಬಳಲುತ್ತಿದ್ದು ಆತನನ್ನು ಕಾರ್ಕಳ, ಮಣಿಪಾಲ ಕೆಎಂಸಿ, ಮಂಗಳೂರಿನ ವೆನ್‌ಲಾಕ್ ಮತ್ತು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಿದ್ದು, ಗುಣಮುಖರಾಗದೇ ಇರುವುದರಿಂದ ಬಾಲಕೃಷ್ಣರನ್ನು ಅ. 19 ರಂದು ರಾತ್ರಿ ವಾಸದ ಮನೆ ದೆಪ್ಪುತ್ತೆಗೆ ಕರೆದುಕೊಂಡು ಬಂದಿದ್ದು, ಮನೆಯಲ್ಲಿ ಆತನ ಹೆಂಡತಿ ಪ್ರತೀಮಾ ಹಾಗೂ ಮಕ್ಕಳು ಇದ್ದರು. ಅಂದು ತಡರಾತ್ರಿ ಸಮಯ ಸುಮಾರು 3:30 ಗಂಟೆಗೆ ಮನೆಯಲ್ಲಿ ಬೊಬ್ಬೆ ಕೇಳಿದ ತಕ್ಷಣ ತಾನು ಹೋಗಿ ಮಗ ಬಾಲಕೃಷ್ಣನ್ನು ನೋಡಿದ್ದು ಮಾತನಾಡದೇ ಇದ್ದರಿಂದ ಬೆಳಿಗ್ಗೆ 8 ಗಂಟೆಗೆ ಅಜೆಕಾರಿನ ಸರಕಾರಿ ಆಸ್ಪತ್ರೆಯ ವೈದ್ಯರನ್ನು ಕರೆಸಿ ಪರೀಕ್ಷಿಸಲಾಗಿ ಬಾಲಕೃಷ್ಣ ಮೃತ ಪಟ್ಟಿರುವುದಾಗಿ ತಿಳಿಸಿದ್ದರು. ಬಾಲಕೃಷ್ಣರವರು ಒಮ್ಮಲೇ ಅನಾರೋಗ್ಯದಿಂದ ಮೃತಪಟ್ಟಿರುವ ಕಾರಣ ಮೃತರ ಮರಣದಲ್ಲಿ ನಿಖರವಾದ ಕಾರಣದ ಬಗ್ಗೆ ಸಂಶಯ ಇರುವುದಾಗಿ ಮರುದಿನ (ಅ.20ರಂದು) ಕೊಲೆಯಾದ ಬಾಲಕೃಷ್ಣ ಅವರ ತಂದೆ ನೀಡಿದ ದೂರಿನಂತೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದರು.
ತನಿಖೆಯಲ್ಲಿ ಬಯಲಾದ ಸತ್ಯ:
ಪ್ರಕರಣದ ತನಿಖೆಯನ್ನು ನಡೆಸಿ ಬಾಲಕೃಷ್ಣ ಅವರ ಸಾವಿನ ಬಗ್ಗೆ ನಿಖರವಾದ ಕಾರಣ ತಿಳಿಯಲು ಆತನ ಹೆಂಡತಿ ಪ್ರತಿಮಾಳಲ್ಲಿ ವಿಚಾರಣೆ ನಡೆಸಿದ ಪೊಲೀಸರಿಗೆ ಸಿಕ್ಕ ಮಾಹಿತಿ ಬೆಚ್ಚಿಬೀಳಿಸುವಂತಿತ್ತು. ಪ್ರತಿಮಾಳು ಕಾರ್ಕಳದ ದಿಲೀಪ್ ಹೆಗ್ಡೆ ಎಂಬುವನ ಜೊತೆ ಸ್ನೇಹವನ್ನು ಹೊಂದಿದ್ದು, ಪ್ರತಿಮಾಳ ಗಂಡ ಬಾಲಕೃಷ್ಣ ಇವರಿಬ್ಬರ ಸ್ನೇಹಕ್ಕೆ ಅಡ್ಡಿ ಬರಬಹುದೆಂದು ಇಬ್ಬರೂ ಮಾತನಾಡಿಕೊಂಡು ಆತನನ್ನು ಕೊಲೆ ಮಾಡಬೇಕೆಂದು ಸಂಚು ಮಾಡಿದ್ದರು. ಈ ಸಂಚಿನಂತೆ ದಿಲೀಪ್ ಹೆಗ್ಡೆಯು ಪ್ರತಿಮಾಳಿಗೆ ವಿಷ ಪದಾರ್ಥವನ್ನು ತಂದು ಕೊಟ್ಟಿದ್ದು, ವಿಷ ಪದಾರ್ಥವನ್ನು ಬಾಲಕೃಷ್ಣರವರಿಗೆ ಊಟದಲ್ಲಿ ಸೇರಿಸಿ ಕೊಡುವಂತೆ ತಿಳಿಸಿದ್ದ. ಅದರಂತೆ ಪ್ರತಿಮಾ ಅದನ್ನು ಊಟದಲ್ಲಿ ಸೇರಿಸಿ ಗಂಡನಿಗೆ ಕೊಟ್ಟಿದ್ದಳು. ಅ.20ರಂದು ಪ್ರತಿಮಾ ಸ್ನೇಹಿತ ದಿಲೀಪ್ ಹೆಗ್ಡೆಯನ್ನು ಮನೆಗೆ ಬರಲು ಹೇಳಿದ್ದು ಮದ್ಯರಾತ್ರಿ 1:30ರ ಸುಮಾರಿಗೆ ಆತ ಪ್ರತಿಮಾಳ ಮನೆಗೆ ಬಂದಿದ್ದು, ದಿಲೀಪ್ ಹೆಗ್ಡೆ ಮತ್ತು ಪ್ರತೀಮಾ ಇಬ್ಬರೂ ಸೇರಿ ಮನೆಯಲ್ಲಿಯೇ ಇದ್ದ ಬೆಡ್ ಶೀಟ್ ಅನ್ನು ಬಾಲಕೃಷ್ಣರ ಮುಖಕ್ಕೆ ಒತ್ತಿ ಹಿಡಿದು ಕೊಲೆ ಮಾಡಿದ್ದರು. ಪೊಲೀಸ್ ತನಿಖೆಯಲ್ಲಿ ಈ ಪ್ರಕರಣವು ಅಸ್ವಾಭಾವಿಕ ಮರಣದಿಂದ ಕೊಲೆ ಪ್ರಕರಣಕ್ಕೆ ತಿರುವು ಪಡೆದುಕೊಂಡಿದ್ದು ಘಟನೆಯಂತೆ ಅಜೆಕಾರು ಪೊಲೀಸ್ ಠಾಣಾ ಕೊಲೆ ಪ್ರಕರಣವನ್ನು ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.
ಆರೋಪಿಗಳ ಬಂಧನ:
ಅ.25ರಂದು ಅಜೆಕಾರು ಪೊಲೀಸ್ ಠಾಣೆಯ ಪಿಎಸ್‌ಐ ರವಿ ಬಿ ಕೆ, ಹಾಗೂ ಪಿಎಸ್‌ಐ ಶುಭಕರ ಅವರು ಅಜೆಕಾರು ಪೊಲೀಸ್ ಠಾಣಾ ಸಿಬ್ಬಂದಿಗಳಾದ ನಾಗೇಶ್, ಸತೀಶ್, ಪ್ರದೀಪ್, ಅಶೋಕ, ಪ್ರವೀಣ, ಧಜಂಜಯ, ಸುನೀಲ್, ನಾಗರಾಜ, ಶಶಿ, ಪ್ರಶಾಂತ, ವಿಶ್ವನಾಥ ಅವರೊಂದಿಗೆ ಆರೋಪಿಗಳ ಪತ್ತೆ ಹಚ್ಚಿ ಪ್ರಕರಣದ ಆರೋಪಿ ದಿಲಿಪ್ ಹೆಗ್ಡೆ ಹಿರ್ಗಾನ ಗ್ರಾಮ ಕಾರ್ಕಳ ಆತನನ್ನು ವಶಕ್ಕೆ ಪಡೆದುಕೊಂಡಿದ್ದು, ಇನ್ನೊರ್ವ ಆರೋಪಿ ಮೃತ ಬಾಲಕೃಷ್ಣನ ಹೆಂಡತಿ ಪ್ರತೀಮಾಳನ್ನು ಮರ್ಣೆ ಗ್ರಾಮ ಅಜೆಕಾರಿನಲ್ಲಿ ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ
Comments are closed.