ಕರಾವಳಿ

ಕುಂದಾಪುರ: ಬೀಜಾಡಿ ಸಮುದ್ರದಲ್ಲಿ ಈಜಲು ತೆರಳಿದ ಯುವಕ ಮೃತ್ಯು, ನೀರುಪಾಲಾದ ಇನ್ನೋರ್ವನಿಗಾಗಿ ಶೋಧ

Pinterest LinkedIn Tumblr

ಕುಂದಾಪುರ: ಸ್ನೇಹಿತನ ಮದುವೆ ಕಾರ್ಯಕ್ರಮಕ್ಕಾಗಿ ಬೆಂಗಳೂರಿನಿಂದ‌ ಬಂದ ಯುವಕರ ತಂಡವೊಂದು ಸಮುದ್ರದಲ್ಲಿ ಈಜಲು ತೆರಳಿದ ವೇಳೆ ನೀರುಪಾಲಾದ ದಾರುಣ ಘಟನೆ ಶನಿವಾರ ಬೆಳಿಗ್ಗೆ ಬೀಜಾಡಿ ಬೀಚ್ ನಲ್ಲಿ ಸಂಭವಿಸಿದೆ.

ಬೆಂಗಳೂರು ದಾಸರಳ್ಳಿ ಮೂಲದ ಸಂತೋಷ್ (25) ಉಸಿರುಗಟ್ಟಿ ಸಾವನ್ನಪ್ಪಿದ್ದು, ಕುಂದಾಪುರ ಮೂಲದ ಅಜಯ್ (25) ನೀರುಪಾಲಾಗಿದ್ದಾರೆ.

ಸ್ನೇಹಿತನ ಮದುವೆ ಕಾರ್ಯಕ್ರಮಕ್ಕೆಂದು ನಾಲ್ವರು ಸ್ನೇಹಿತರು ಬೆಂಗಳೂರಿನಿಂದ ಕುಂದಾಪುರಕ್ಕೆ ಬಂದಿದ್ದು ಬೀಜಾಡಿ ಬೀಚ್ ಪಕ್ಕದ ರೆಸಾರ್ಟ್ ವೊಂದರಲ್ಲಿ ಉಳಿದುಕೊಂಡಿದ್ದರು. ಇಂದು ಬೆಳಿಗ್ಗೆ ಮೂವರು ಸಮುದ್ರದಲ್ಲಿ ಈಜಲು ತೆರಳಿದ ವೇಳೆ ಅವರ ಪೈಕಿ ಇಬ್ಬರು ಸಮುದ್ರಪಾಲಾಗಿದ್ದಾರೆ. ಬೆಂಗಳೂರು ಮೂಲದ ಮೋಕ್ಷಿತ್ ಮುಂದೆ ಹೋಗಬೇಡಿ ಎಂದು ಗೋಗರೆದರೂ ಕೇಳದೇ ನೀರಿನಲ್ಲಿ ಮುಂದೆ ಸಾಗಿರುವ ಸಂತೋಷ್ ಹಾಗೂ ಅಜಯ್ ನೀರಿನ‌ ಸೆಳೆತಕ್ಕೆ ಸಿಲುಕಿದ್ದರು. ಯುವಕರನ್ನು ಮೋಕ್ಷಿತ್ ರಕ್ಷಿಸಲು ಮುಂದಾಗಿದ್ದು, ಸಂತೋಷ್ ಅವರನ್ನು ದಡಕ್ಕೆ ತಂದು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯದಲ್ಲೇ ಅವರು ಕೊನೆಯುಸಿರೆಳೆದಿದ್ದಾರೆ‌. ಕುಂದಾಪುರ ಮೂಲದ‌ ಅಜಯ್ ನೀರಿನ‌ ಸೆಳೆತಕ್ಕೆ ಸಿಲುಕಿ ನೀರುಪಾಲಾಗಿದ್ದಾರೆ.

ಸ್ಥಳಕ್ಕೆ ಅಗ್ನಿಶಾಮಕ ದಳ, ಕರಾವಳಿ ಕಾವಲು ಪಡೆ, ಮುಳುಗು ತಜ್ಞರ ತಂಡ ಆಗಮಿಸಿದ್ದು, ಅಜಯ್‌ಗಾಗಿ‌ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ. ಹೆಚ್ಚಿನ ‌ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ.

ಇತ್ತೀಚೆಗಷ್ಟೇ ತಿಪಟೂರು ಮೂಲದ‌ ಯುವಕನೋರ್ವ ಸ್ನೇಹಿತನ ಮದುವೆಗೆ ಬಂದ ವೇಳೆ ಬೀಜಾಡಿ ಸಮುದ್ರದಲ್ಲಿ ಈಜಲು ಹೋಗಿ ಸಾವನ್ನಪ್ಪಿದ ಘಟನೆ ನೆನಪು‌ ಮಾಸುವ‌ ಮುನ್ನವೇ ಇದೀಗ ಇನ್ನೊಂದು ಘಟನೆ ನಡೆದಿದೆ.

Comments are closed.