ಕರಾವಳಿ

ಹೋಂ ನರ್ಸ್ ಆಗಿದ್ದ ಮನೆಯಿಂದ 31 ಲಕ್ಷದ ಚಿನ್ನ, ವಜ್ರಾಭರಣ ಕಳ್ಳತನ: ಆರೋಪಿಯನ್ನು ಬಂಧಿಸಿದ ಉಡುಪಿ ಪೊಲೀಸರು

Pinterest LinkedIn Tumblr

ಉಡುಪಿ: ಇಲ್ಲಿನ ನಗರ ಠಾಣೆ ವ್ಯಾಪ್ತಿಯ ಪ್ರಸಾದ ಎಸ್‌.ಎಸ್‌. ಅವರ ಮನೆಯಲ್ಲಿ ಹೋಂ ನರ್ಸ್ ಆಗಿ ಕೆಲಸ ಮಾಡಿಕೊಂಡಿದ್ದ ಕೊಪ್ಪಳ ತಾಲೂಕು ಕುಷ್ಟಗಿಯ ಸಿದ್ದಪ್ಪ ಕೆ. ಕೊಡ್ಲಿ (23) ಎಂಬಾತ ಕೆಲಸ ಮನೆಯಿಂದ ಲಕ್ಷಾಂತರ ಮೌಲ್ಯದ ಚಿನ್ನ, ವಜ್ರಾಭರಣ ಕಳವು ಮಾಡಿದ್ದು, ಆತನನ್ನು ಮೂರೇ ದಿನದಲ್ಲಿ ಉಡುಪಿ ಪೊಲೀಸರು ಬಂಧಿಸಿದ್ದಾರೆ.

ಆರೋಪಿಯು ನ.17ರಂದು ತಾನು ಕೆಲಸ ಮಾಡಿಕೊಂಡಿದ್ದ ಮನೆಯ ಹಾಲ್‌ ಗಾಜಿನ ಬೀರುವಿನಲ್ಲಿ ಹಾಗೂ ಮಲಗುವ ಕೋಣೆಯಲ್ಲಿ ಇರಿಸಿದ್ದ ಗ್ರಾಡ್ರೇಜ್ ಲಾಕರ್‌ ನಲ್ಲಿ ಇರಿಸಿದ್ದ ಸುಮಾರು 427 ಗ್ರಾಂ ತೂಕದ 31 ಲಕ್ಷ 17 ಸಾವಿರದ 100 ರೂ. ಮೌಲ್ಯದ ಚಿನ್ನ ಹಾಗೂ ವಜ್ರಾಭರಣಗಳನ್ನು ಕಳವು ಮಾಡಿಕೊಂಡು ಹೋದ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಪ್ರಕರಣದ ತನಿಖೆಯನ್ನು ಉಡುಪಿ‌ನಗರ ಠಾಣೆ ಇನ್ಸ್‌ಪೆಕ್ಟರ್ ರಾಮಚಂದ್ರ ನಾಯಕ್ ಕೈಗೊಂಡಿದ್ದು ಆರೋಪಿ ಮತ್ತು ಸ್ವತ್ತು ತನಿಖೆ ಪತ್ತೆಯ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣಾ ಪಿಎಸ್‌ಐ ಈರಣ್ಣ ಶಿರಗುಂಪಿ, ಉಡುಪಿ ಸೆನ್‌ ಪೊಲೀಸ್‌ ಠಾಣೆ ಪಿಎಸ್ಐ ಪವನ್‌ ಕುಮಾರ್‌, ಉಡುಪಿ ನಗರ ಠಾಣೆಯ ಪಿಎಸ್ಐ ಪುನೀತ್, ಉಡುಪಿ ನಗರ ಠಾಣೆಯ ಅಬ್ದುಲ್‌ ಬಶೀರ್‌, ಸಂತೋಷ, ಚೇತನ್‌ ಮತ್ತು ಸೆನ್ ಠಾಣೆಯ ಪ್ರವೀಣ ಕುಮಾರ್, ಪ್ರವೀಣ ಅವರ ತಂಡ ಆರೋಪಿ ಸಿದ್ದಪ್ಪ ಕೆ. ಕೊಡ್ಲಿಯನ್ನು ಬಂಧಿಸಿ ಆತ ಕಳವು ಮಾಡಿ ಅಡಗಿಸಿಟ್ಟಿದ್ದ ಸ್ಥಳದಿಂದ 30 ಲಕ್ಷ ಮೌಲ್ಯದ 374.45 ಗ್ರಾಮ್ ತೂಕದ ಚಿನ್ನ, ಬೆಳ್ಳಿ ಹಾಗೂ ವಜ್ರಾಭರಣಗಳನ್ನು ವಶಕ್ಕೆ ಪಡೆದು ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ.

Comments are closed.