ಕರಾವಳಿ

ಕೊಂಕಣ ರೈಲು ವಿಲೀನಕ್ಕೆ ರೈಲ್ವೆ ಸಚಿವರಿಂದ ಸಹಮತ: ಸಂಸದ ಕೋಟ ಶ್ರೀನಿವಾಸ ಪೂಜಾರಿ

Pinterest LinkedIn Tumblr

ಉಡುಪಿ: ಕೊಂಕಣ ರೈಲ್ವೆಯು ಸಚಿವಾಲಯದೊಂದಿಗೆ ವಿಲೀನಕ್ಕಾಗಿ ಈಗಾಗಲೇ ಕೇಂದ್ರ ಸರಕಾರಕ್ಕೆ ಪ್ರಸ್ತಾಪ ಸಲ್ಲಿಸಿದ್ದು, ಅದಕ್ಕೆ ರೈಲ್ವೆ ಸಚಿವರು ಸಹಮತವನ್ನೂ ವ್ಯಕ್ತಪಡಿಸಿದ್ದು, ಮುಂದಿನ ಹಂತದ ಬಗ್ಗೆ ಪಾಲುದಾರಿಕಾ ರಾಜ್ಯ ಸರಕಾರಗಳಾದ ಕರ್ನಾಟಕ, ಕೇರಳ, ಗೋವಾ, ಮಹಾರಾಷ್ಟ್ರ ರಾಜ್ಯಗಳ ಶೇರು ಮರು ಖರೀದಿಗೆ ಕಾರ್ಯಪ್ರವೃತ್ತರಾಗಲು ಮನವಿ ಮಾಡಲಾಯಿತು. ರೈಲ್ವೆ ಸಚಿವರು ಈ ಕುರಿತು ಮಹತ್ವದ ಸೂಚನೆಯ ಅಧಿಕಾರಿಗಳಿಗೆ ರವಾನಿಸಿದ್ದಾರೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಹೊಸದಿಲ್ಲಿಯ ರೈಲ್ ಭವನದಲ್ಲಿ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ರನ್ನು ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಉಡುಪಿ- ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ, ದಕ್ಷಿಣ ಕನ್ನಡ ಸಂಸದ ಕಾಪ್ಟನ್ ಬ್ರಿಜೇಶ್‌ ಚೌಟ, ಬೆಂಗಳೂರು ಗ್ರಾಮಾಂತರ ಸಂಸದ ಡಾ. ಸಿ.ಎನ್‌. ಮಂಜುನಾಥ್ ಭೇಟಿಯಾಗಿ ಕರಾವಳಿ ಭಾಗದ ಕಾರವಾರ, ಕುಂದಾಪುರ, ಉಡುಪಿ-ಮಂಗಳೂರು ನಡುವೆ ಜನರ ಬಯಕೆಯಂತೆ ಹೆಚ್ಚಿನ ರೈಲು ಓಡಿಸಲು ತೀವ್ರ ಅಡ್ಡಿ ಉಂಟು ಮಾಡುತ್ತಿರುವ ಸಕಲೇಶಪುರ ಘಾಟ್ ಸಮಸ್ಯೆಗೆ ಈಗಾಗಲೇ ಪರಿಣಿತರಿಂದ ಸೂಚಿಸಲ್ಪಟ್ಟ ಪರಿಹಾರದ ಬಗ್ಗೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ರಲ್ಲಿ ಸಂಸದರ ತಂಡ ಪ್ರಸ್ತಾಪಿಸಿತು.

ಸಕಲೇಶಪುರ-ಸುಬ್ರಹ್ಮಣ್ಯ ನಡುವೆ ಹಳಿ ದ್ವಿಗುಣ, ಸುಬ್ರಹ್ಮಣ್ಯ -ಪಡೀಲ್ ಮಾರ್ಗದ ವೇಗ ಹೆಚ್ಚಳ ಹಾಗೂ ಘಾಟ್ ಭಾಗದ ಹರೇ ಬೆಟ್ಟವನ್ನು ಕ್ರಾಸಿಂಗ್ ನಿಲ್ದಾಣವಾಗಿ ಬಳಸುವ ಕುರಿತು ವಿಸ್ತಾರವಾಗಿ ಚರ್ಚಿಸಿದರು. ಘಾಟ್ ಮಧ್ಯ ಭಾಗದ ಹರೇ ಬೆಟ್ಟ ಕ್ರಾಸಿಂಗ್ ನಿಲ್ದಾಣವಾಗಿ ಆರಂಭವಾದರೆ ಬೆಂಗಳೂರು-ಮಂಗಳೂರು- ಕುಂದಾಪುರ-ಕಾರವಾರ ನಡುವೆ ಹೊಸ ರೈಲು ಹಾಗೂ ಹೆಚ್ಚು ಬೋಗಿ ಅಳವಡಿಸಿ ಉತ್ತಮ ಸಮಯ ಪಟ್ಟಿ ರಚಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಕಾರವಾರ-ಕುಂದಾಪುರ -ಬೆಂಗಳೂರು ನಡುವೆ ಪಂಚಗಂಗಾ ಮಾದರಿಯಲ್ಲಿಯೇ ಆದರೆ ತಡವಾಗಿ ಬೆಂಗಳೂರಿನಿಂದ ಹೊರಡುವ ಹೊಸ ಪಡೀಲ್ ಬೈಪಾಸ್ ನೇರ ರೈಲಿಗಾಗಿ ಸಚಿವರಲ್ಲಿ ಮನವಿ ಮಾಡಲಾಗಿದೆ. ಕುಂದಾಪುರ ಉಡುಪಿ ನಿಲ್ದಾಣಗಳಿಗೆ ಈಗಾಗಲೇ ತಾತ್ವಿಕ ಒಪ್ಪಿಗೆ ಸಿಕ್ಕ ದಿಲ್ಲಿ ರೈಲುಗಳ ನಿಲುಗಡೆ ಬಗ್ಗೆ ಮತ್ತೊಮ್ಮೆ ಮನವಿ ಸಲ್ಲಿಸಲಾಗಿದ್ದು ,ಈ ಬಗ್ಗೆ ಶೀಘ್ರವೇ ಆದೇಶ ಪ್ರಕಟವಾಗಲಿದೆ. ಚಿಕ್ಕಮಗಳೂರು-ತಿರುಪತಿ- ಬೆಂಗಳೂರು ಮಾರ್ಗದ ಮೂಲಕ ಆರಂಭಿಸಲೂ ಸಂಸದರು ಮನವಿಯನ್ನೂ ಮಾಡಿದರು.

ರೈಲು ವಿಸ್ತರಣೆಗೆ ಮನವಿ:
ಬೆಂಗಳೂರು -ಮುರುಡೇಶ್ವರ ರೈಲಿನ ವಾಸ್ಕೋ ವಿಸ್ತರಣೆ ಮತ್ತು ಅದರಿಂದ ಕರಾವಳಿಗೆ ಸಿಗುವ ಗೋವಾ ವಿಮಾನ ನಿಲ್ದಾಣ ಹಾಗೂ ವೇಲಾಂಕಣಿ , ತಿರುಪತಿ, ಉತ್ತರ ಕರ್ನಾಟಕ ಸಂಪರ್ಕದ ಬಗ್ಗೆ, ಎಸ್ಎಂವಿಪಿ ಮುರ್ಡೇಶ್ವರ ಎಕ್ಸ್‌ಪ್ರೆಸ್‌ ವಾಸ್ಕೋವರೆಗೆ ವಿಸ್ತರಣೆ ಹಾಗೂ ರೈಲು ಸಂಖ್ಯೆ 17317/18 ಎಕ್ಸ್‌ಪ್ರೆಸ್‌ ಕಾರವಾರದವರೆಗೆ ವಿಸ್ತರಣೆ ಮತ್ತು ರೈಲು ಸಂಖ್ಯೆ 17317/18 ಖಾನಾಪುರ ರೈಲ್ವೆ ನಿಲ್ದಾಣದಲ್ಲಿ ನಿಲುಗಡೆ ಜೊತೆಗೆ ಹುಬ್ಬಳ್ಳಿ, ಅಂಕೋಲಾ ಹಾಗೂ ತಾಳಗುಪ್ಪ, ಹುಬ್ಬಳ್ಳಿ ರೈಲ್ವೆ ಮಾರ್ಗಗಳ ಕುರಿತು ಸಂಸದರ ತಂಡ ರೈಲ್ವೆ ಸಚಿವರಲ್ಲಿ ವಿನಂತಿಸಿತು.

Comments are closed.