ಕರ್ನಾಟಕ

ಜಮ್ಮು ಕಾಶ್ಮೀರದಲ್ಲಿ ಸೇನಾ ವಾಹನ ಅಪಘಾತ; ಕರ್ನಾಟಕದ ಮೂವರು ಯೋಧರು ಮೃತ್ಯು

Pinterest LinkedIn Tumblr

ಬೆಂಗಳೂರು: ಜಮ್ಮು ಮತ್ತು ಕಾಶ್ಮೀರದ ಪೂಂಫ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆ ಬಳಿ ಮಂಗಳವಾರ ಸಂಜೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಕರ್ನಾಟಕದ ಮೂವರ ಸಹಿತ ಐವರು ಯೋಧರು ಹುತಾತ್ಮರಾಗಿದ್ದಾರೆ.

ಘಟನೆಯಲ್ಲಿ ಐವರು ಯೋಧರು ಗಾಯಗೊಂಡಿದ್ದು ಅವರನ್ನು ಸೇನಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬೆಳಗಾವಿಯ ದಯಾನಂದ ತಿರಕಣ್ಣವರ (45), ಕುಂದಾಪುರ ಬಳಿಯ ಕೋಟೇಶ್ವರ ಬೀಜಾಡಿಯ ಅನೂಪ್ (31) ಬಾಗಲಕೋಟೆಯ ಮಹೇಶ್ ಮಾರಿಗೊಂಡ (25) ಮೃತ ಯೋಧರು. ಇನ್ನಿಬ್ಬರು ಮಹಾರಾಷ್ಟ್ರದವರು.

ಯೋಧರು ಸೇನಾ ವಾಹನದಲ್ಲಿ ಮೆಂಡರ್ ಎಂಬ ಪ್ರದೇಶಕ್ಕೆ ಕರ್ತವ್ಯಕ್ಕೆ ತೆರಳುತ್ತಿದ್ದ ವೇಳೆ ಕಿರಿದಾದ ರಸ್ತೆಯಲ್ಲಿ 150 ಅಡಿ ಆಳದ ಪ್ರಪಾತಕ್ಕೆ ವಾಹನ ಉರುಳಿ ಬಿದ್ದು ಅಪಘಾತ ಸಂಭವಿಸಿದೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.

ಉಡುಪಿ ಜಿಲ್ಲೆ ಕುಂದಾಪುರದ ಬೀಜಾಡಿಯ ಅನೂಪ್ ಪೂಜಾರಿ ಸೇನೆಗೆ ಸೇರಿ 13 ವರ್ಷವಾಗಿತ್ತು. ಅವರು ಮರಾಠ ಬೆಟಾಲಿಯನ್ ನಲ್ಲಿ ಸೇವೆ ಸಲ್ಲಿಸುತ್ತಿದ್ದರು. ಹುತಾತ್ಮರಾದ ಯೋಧ ಅನೂಪ್ ಅವರಿಗೆ ವಿವಾಹವಾಗಿದ್ದು 2 ವರ್ಷದ ಹೆಣ್ಣು ಮಗುವಿದೆ.

ಬಾಗಲಕೋಟೆ ಜಿಲ್ಲೆ ರಬಕವಿಬನಹಟ್ಟಿ ತಾಲ್ಲೂಕಿನ ಮಹಾಲಿಂಗಪುರ ನಿವಾಸಿ ಮಹೇಶ್ ನಾಗಪ್ಪ ಮಾರಿಗೊಂಡ ಅವರು 11 ನೆ ಮರಾಠ ರೆಜಿಮೆಂಟ್ ನಲ್ಲಿ ಸೇವೆ ಸಲ್ಲಿಸುತ್ತಿದ್ದರು.

ಬೆಳಗಾವಿಯ ಸಾಂಬ್ರಾ ಗ್ರಾಮದ ಯೋಧ ಸುಬೇದಾ‌ರ್ ದಯಾನಂದ ಅವರು, ಕೆಲವು ವರ್ಷಗಳಿಂದ ಸೇನೆಯಲ್ಲಿ ದೇಶದ ವಿವಿಧ ಭಾಗಗಳಲ್ಲಿ ಸೇವೆ ಸಲ್ಲಿಸಿದ್ದರು.

Comments are closed.