ಕುಂದಾಪುರ: ತಾಲೂಕಿನ ಬೀಜಾಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಜ.5 ರಂದು ಬೆಳಗ್ಗಿನ ಜಾವದ ಸುಮಾರಿಗೆ ಕಾರಿನಲ್ಲಿ ಬಂದ ಅಪರಿಚಿತರು ಜಾನುವಾರು ಕಳವು ಮಾಡಲು ಯತ್ನಿಸಿದ್ದು ಸಾರ್ವಜನಿಕರನ್ನು ನೋಡಿ ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿ ಓರ್ವ ಆರೋಪಿಯನ್ನು ಕುಂದಾಪುರ ಪೊಲೀಸರು ಬಂಧಿಸಿದ್ದಾರೆ.
ಸುರತ್ಕಲ್ ಮೂಲದ ಅಶ್ರಫ್ (40) ಬಂಧಿತ ಆರೋಪಿ. ಈತನಿಂದ 1 ಲಕ್ಷ 30 ಸಾವಿರ ರೂ. ಮೌಲ್ಯದ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಉಳಿದಿಬ್ಬರು ಆರೋಪಿಗಳ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ.
ಘಟನೆ ವಿವರ:
ಜ.5ರಂದು ಬೆಳಿಗ್ಗೆನ ಜಾವ 3 ಗಂಟೆ ಆಸುಪಾಸಿನಲ್ಲಿ ಕಾರಿನಲ್ಲಿ ಬಂದ ಬೀಜಾಡಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ 66 ಜಂಕ್ಷನ್ ಬಳಿಯ ಸರ್ವಿಸ್ ರಸ್ತೆಯಲ್ಲಿ ಜಾನುವಾರನ್ನು ಹಿಡಿದು ಹಗ್ಗದಿಂದ ಕಟ್ಟುತ್ತಿದ್ದಾಗ ಸಾರ್ವಜನಿಕರನ್ನು ನೋಡಿ ಓಡಿ ಹೋಗಿದ್ದರು. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣಾ ಕರ್ನಾಟಕ ಜಾನುವಾರು ಪ್ರತಿಬಂಧಕ ಮತ್ತು ಸಂರಕ್ಷಣ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು.
ಸಿಸಿ ಟಿವಿ ಮೂಲಕ ತಪ್ಪಿದ್ದ ಕಳ್ಳತನ:
ಕುಂದಾಪುರದ ಅಂಕದಕಟ್ಟೆಯಲ್ಲಿ ಕಾರ್ಯಚರಿಸುವ ಸೈನ್ ಇನ್ ಸೆಕ್ಯೂರಿಟಿ ಸಂಸ್ಥೆಯ ಸಿಸಿ ಟಿವಿ ಲೈವ್ ಮಾನಿಟರಿಂಗ್ ಸಿಬ್ಬಂದಿಗಳು ರಾತ್ರಿ ದೃಶ್ಯಾವಳಿಗಳನ್ನು ನೇರವಾಗಿ ವೀಕ್ಷಣೆ ಮಾಡುತ್ತಿದ್ದ ವೇಳೆ ಕಾರಿನಲ್ಲಿ ಬಂದು ಗೋ ಕಳವಿಗೆ ಮುಂದಾಗುವುದು ತಿಳಿದಿದ್ದು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಪೊಲೀಸರು ಹಾಗೂ ಸಾರ್ವಜನಿಕರು ಬರುವುದನ್ನು ಅರಿತ ಕಳ್ಳರು ಜಾನುವಾರು ಬಿಟ್ಟು ಕಾರಿನಲ್ಲಿ ಪರಾರಿಯಾಗಿದ್ದರು.
ಆರೋಪಿಗಳ ಪತ್ತೆಗೆ ಕುಂದಾಪುರ ಉಪವಿಭಾಗದ ಡಿವೈಎಸ್ಪಿ ಬೆಳ್ಳಿಯಪ್ಪ ಕೆ.ಯು ಹಾಗೂ ಕುಂದಾಪುರ ಪೊಲೀಸ್ ಠಾಣಾ ನಿರೀಕ್ಷಕ ನಂಜಪ್ಪ ಎನ್. ಅವರ ಉಸ್ತುವಾರಿಯಲ್ಲಿ ವಿಶೇಷ ಪತ್ತೆತಂಡವನ್ನು ರಚಿಸಲಾಗಿತ್ತು. ವಿಶೇಷ ಪತ್ತೆ ತಂಡದಲ್ಲಿ ಕುಂದಾಪುರ ನಗರ ಠಾಣೆ ಪಿಎಸ್ಐ ನಂಜಾ ನಾಯ್ಕ , ತನಿಖಾ ಪಿಎಸ್ಐ ಪುಷ್ಪ, ಕೊಲ್ಲೂರು ಠಾಣಾ ಪಿಎಸ್ಐ ವಿನಯ್ ಎಂ. ಕೊರ್ಲಹಳ್ಳಿ, ಹಾಗೂ ಸಿಬ್ಬಂದಿಗಳಾದ ಮೋಹನ, ಸಂತೋಷ, ರಾಮ ಪೂಜಾರಿ, ನಾಗೇಂದ್ರ, ಘನಶ್ಯಾಮ, ಸಂತೋಷ ಕುಲಾಲ್ ಕಾರ್ಯಚರಣೆಯಲ್ಲಿ ಭಾಗವಹಿಸಿದ್ದರು.
Comments are closed.