ವರದಿ- ಯೋಗೀಶ್ ಕುಂಭಾಸಿ
ಕುಂದಾಪುರ: ಕಣ್ಣಿಗೆ ಮುದ ನೀಡುವ ಆಕರ್ಷಕ ಹಳದಿ ಬಣ್ಣ, ಘಮಘಮ ಸುವಾಸನೆ ಹಾಗೂ ನಿರ್ದಿಷ್ಟ ಗಾತ್ರ ಹೊಂದುವ ಮೂಲಕ ಕುಂದಾಪುರ-ಬೈಂದೂರು ಭಾಗದಲ್ಲಿ ಹೆಸರುವಾಸಿಯಾಗಿದ್ದ ‘ಹೆಮ್ಮಾಡಿ ಸೇವಂತಿಗೆ’ ಈ ಬಾರಿ ಹೆಚ್ಚು ಅರಳಿಲ್ಲ. ವಾತಾವರಣದ ಏರುಪೇರು, ಆಗ್ಗಾಗೆ ಮಳೆ, ಸೆಕೆ ಜಾಸ್ಥಿ, ಚಳಿ ಕಡಿಮೆ ಹಾಗೂ ಇಬ್ಬನಿ ಬೀಳದೆ ಇರುವುದರಿಂದ ಈ ಹೊತ್ತಿಗೆ ಅರಳಬೇಕಿದ್ದ ಸೇವಂತಿಗೆ ಇನ್ನೂ ಮೊಗ್ಗಾಗಿಯೇ ಇದೆ.
ಸಾಂಪ್ರದಾಯಿಕ ಬೆಳೆ:
ತಾಲೂಕಿನ ಹೆಮ್ಮಾಡಿ, ಹಾಗೂ ಇಲ್ಲಿಗೆ ಸಮೀಪದ ಕಟ್ಟು, ಹೊಸ್ಕಳಿ, ಸುಳ್ಸೆ, ಹರೆಗೋಡು ಮೊದಲಾದೆಡೆ ಹಲವಾರು ಮಂದಿ ಪ್ರತಿವರ್ಷ ಸೇವಂತಿಗೆ ಬೆಳೆಯುತ್ತಾರೆ. ನೂರಾರು ವರ್ಷಗಳಿಂದಲೂ ಇಲ್ಲಿ ಸೇವಂತಿಗೆ ಬೆಳೆಯುವ ಮೂಲಕ ಕೃಷಿಕರು ಇದನ್ನೊಂದು ಸಾಂಪ್ರದಾಯಿಕ ಬೆಳೆಯನ್ನಾಗಿಸಿಕೊಂಡಿದ್ದು ಒಂದಷ್ಟು ಗದ್ದೆಗಳನ್ನು ಇದಕ್ಕೋಸ್ಕರ ಬಿಟ್ಟಿದ್ದಾರೆ. ಜುಲೈ-ಆಗಸ್ಟ್ (ಸೋಣೆ) ತಿಂಗಳಿಂದ ಸೇವಂತಿ ಗಿಡಗಳನ್ನು ಒಗ್ಗು ಹಾಕಬೇಕು. ಬೇರುಬಂದ ಬಳಿಕ ಅಕ್ಟೋಬರ್ ತಿಂಗಳಿನಲ್ಲಿ ನೆಟ್ಟು, ನೀರುಣಿಸಿ ಹಗಲಿರುಳು ತಮ್ಮ ಗದ್ದೆಗಳಲ್ಲಿ ಗಿಡಗಳನ್ನು ಪೋಣಿಸಿ ಬೇಕಾದ ರಸಗೊಬ್ಬರಗಳನ್ನು ಹಾಕಿ ಬೆಳೆಸಿದ ಸೇವಂತಿ ಕೃಷಿಯ ಫಸಲು ಚೆನ್ನಾಗಿ ಬೆಳೆಯಲು ಇಲ್ಲಿನ ಜನರು ಬಿಸಿಲು, ಮಳೆ ಗಾಳಿ ಎನ್ನದೇ ನಿತ್ಯ ಪರಿಶ್ರಮ ಪಡುತ್ತಾರೆ. ಅಂದಾಜು ನಾಲ್ಕು ತಿಂಗಳ ಕಾಲ ಗಿಡಗಳ ಬೆಳೆಇದಾಗಿದ್ದು ಜನವರಿ ತಿಂಗಳಿನಲ್ಲಿ ಮೊಗ್ಗು ಹಳದಿ ಹೂವಾಗಿ ಅರಳುವುದನ್ನು ನೋಡುವುದೆ ಚೆಂದ. ಸ್ಥಳೀಯ ಹಬ್ಬ-ಕೆಂಡ ಸೇವೆ ಮೊದಲಾದ ಉತ್ಸವಗಳಲ್ಲಿ ಈ ಸೇವಂತಿ ಬಾರೀ ಹೆಸರುವಾಸಿಯಾಗಿದೆ. ಈ ಬಾರಿ ನಿರೀಕ್ಷೆಯಷ್ಟು ಹೂ ಅರಳಿಲ್ಲ. ವಾತಾವರಣದಲ್ಲಿನ ಹವಮಾನ ಕೊರತೆ ಇದಕ್ಕೆ ಕಾರಣ. ಕಳೆದ 50 ವರ್ಷಗಳಿಂದ ನಾನು ಕೂಡ ಬೆಳೆ ಬೆಳೆದಿದ್ದು ಅನಿವಾರ್ಯ ಕಾರಣದಿಂದ ಕಳೆದ ವರ್ಷದಿಂದ ಬಿಟ್ಟಿದ್ದೇನೆ ಎನ್ನುತ್ತಾರೆ ಹಿರಿಯ ಕೃಷಿಕ ಶೀನ ದೇವಾಡಿಗ ಮೇಲ್ಮನೆ.
ಮಾರಣಕಟ್ಟೆ ಬ್ರಹ್ಮಲಿಂಗೇಶ್ವರನಿಗೆ ಪ್ರಿಯವಾದ ಸೇವಂತಿ:ಐತಿಹಾಸಿಕ ಪುರಾಣ
ಹೆಮ್ಮಾಡಿಯಲ್ಲಿ ಬೆಳೆಯುವ ಅಪರೂಪದ ಸೇವಂತಿಗೆ ಹೂವಿಗೆ ಐತಿಹಾಸಿಕ ಪುರಾಣವಿದೆ. ತುಳುನಾಡ ಜಿಲ್ಲೆಯವರು ಸಹಿತ ಜಿಲ್ಲೆ-ಹೊರಜಿಲ್ಲೆಯವರು ನಂಬುವ ಕಾರಣಿಕ ಕ್ಷೇತ್ರವಾದ ಶ್ರೀ ಮಾರಣಕಟ್ಟೆ ಬ್ರಹ್ಮಲಿಂಗೇಶ್ವರನಿಗೆ ಸೇವಂತಿಗೆ ಪ್ರಿಯ ಎನ್ನಲಾಗುತ್ತದೆ. ಜನವರಿ ತಿಂಗಳಿನ 14 ನೇ ತಾರಿಖಿನಂದು ಜರುಗುವ ಮಕರ ಸಂಕ್ರಮಣ ಕಾಲದಲ್ಲಿ ಶ್ರೀ ಬ್ರಹ್ಮಲಿಂಗ ದೇವರ ಕೆಂಡಸೇವೆಯ ಸಮಯದಲ್ಲಿ ಸೇವಂತಿಗೆ ಪುಷ್ಪವನ್ನು ಶ್ರೀ ದೇವರಿಗೆ ಅರ್ಪಿಸಿದರೆ ಇಷ್ಟಾರ್ಥ ನೆರವೇರುತ್ತದೆ ನಂಬಿಕೆಯಿದೆ. ಮಕರ ಸಂಕ್ರಮಣದಂದು ಬ್ರಹ್ಮಲಿಂಗನಿಗೆ ಹೂವು ಅರ್ಪಿಸಿದ ನಂತರ ಹೆಮ್ಮಾಡಿ ಸೇವಂತಿ ರಾಜ್ಯದ ವಿವಿದೆಡೆಗಳಿಗೆ ಮಾರಾಟಕ್ಕಾಗಿ ಕಳುಹಿಸಲಾಗುತ್ತೆ. ತಮ್ಮ ಗದ್ದೆಗಳಲ್ಲಿ ಮೊದಲು ಬೆಳೆದ ಹೂವನ್ನು ಇಲ್ಲಿಗೆ ಸಮರ್ಪಿಸಿದ ಬಳಿಕವೇ ವಿವಿಧ ದೈವಸ್ಥಾನಗಳ ಕೆಂಡಸೇವೆ ಮೊದಲಾದ ಉತ್ಸವಗಳಿಗೆ ಮಾರಾಟ ಮಾಡುವುದು ಇಲ್ಲಿನ ಕೃಷಿಕರ ರೂಢಿ.
‘ಹೆಮ್ಮಾಡಿ ಶ್ಯಾವಂತಿ’ ಬಾರೀ ಫೇಮಸ್!
ಪಕ್ಕಾ ನಾಟಿ ಸೇವಂತಿ ಹೂ ಇದಾಗಿದ್ದು ಗಾತ್ರದಲ್ಲಿ ಸಣ್ಣದಾಗಿ, ಪರಿಮಳದಲ್ಲಿ ವೈಶಿಷ್ಟ್ಯವಾಗಿರುತ್ತದೆ. ಸ್ಥಳೀಯ ಆಡು ಭಾಷೆ ಕುಂದಾಪುರ ಕನ್ನಡದಲ್ಲಿ ಈ ಹೂವನ್ನು ’ಹೆಮ್ಮಾಡಿ ಶ್ಯಾವಂತಿ’ ಎಂದು ಕರೆಯಲಾಗುತ್ತದೆ.ಹೂಗಳನ್ನು ಸೂಜಿ ಹಾಗೂ ಬಾಳೆ ಬಳ್ಳಿ ದಾರದಿಂದ ಪೋಣಿಸಿ ಹೂಮಾಲೆ ಮಾಡಿ ಹೂವಿಗೆ ಇನ್ನಷ್ಟು ಅಂದ ನೀಡುವ ಮಹಿಳೆಯರ ಕುಸುರಿ ಕೆಲಸ ಮತ್ತೊಂದು ಅಪರೂಪದ ಕೈಚಳಕ. ಗದ್ದೆಯಿಂದ ಹೂವನ್ನು ಆರಿಸಿ (ಕೊಯ್ದು ತಂದು) 1000 ಹೂಗಳ ಮಾಲೆ ತಯಾರಿಸಿದರೆ 40-50 ರೂ. ಹಣ ನೀಡಲಾಗುತ್ತದೆ. 20 ಗಂಟುಗಳಿಗೆ 1000 ಹೂವಿನ ಮಾಲೆಯಂತೆ ಮಾರಾಟ ಮಾಡಲಾಗುತ್ತದೆ. ಕರಾವಳಿಯ ಬೇರೆಡೆಗಳಲ್ಲಿ ಎಲ್ಲಿಯೂ ಕಂಡುಬರದ ಈ ಸೇವಂತಿಗೆ ಹೂವಿನ ಬೆಳೆ ಹೆಮ್ಮಾಡಿಯಲ್ಲಿ ಹೇರಳವಾಗಿ ಸಿಗುತ್ತದೆ. ಪ್ರತಿವರ್ಷ ಜನವರಿ ತಿಂಗಳಿನಲ್ಲಿ ಅರಳುವ ಹೂಗಳನ್ನು ನೋಡಲು ಬಹಳಷ್ಟು ಮಂದಿ ಗದ್ದೆಗಳಿಗೆ ಆಗಮಿಸುತ್ತಾರೆ.
ಬೇರೆ ಕಡೆಯ ಸೇವಂತಿಗೆ ಬೆಳೆಯುವ, ಖರೀದಿಯ ಅನಿವಾರ್ಯತೆ:
ಸುಮಾರು 1 ಎಕ್ರೆ ಜಾಗದಲ್ಲಿ ಹೆಮ್ಮಾಡಿಯ ಕಸ್ತೂರಿ, ಚಿತ್ರದುರ್ಗದ ಚಾಂದಿನಿ, ಬೆಂಗಳೂರು ಮೂಲದ ಸೆಂಟೆಲ್ಲೋ ಎಂಬ ಹೆಸರಿನ ಸೇವಂತಿಗೆ ಗಿಡಗಳನ್ನು ಬೆಳೆದಿದ್ದು ಸೇವಂತಿ ಫಸಲು ಚಳಿಯ ಕೊರತೆಯಿಂದ ಕಡಿಮೆಯಾಗಿದೆ. ಈ ಸಂಕ್ರಾಂತಿ ಹಬ್ಬಕ್ಕೆ ಬೇರೆ ಜಿಲ್ಲೆಗಳಿಂದ ಹೂ ತರಿಸಿ ವ್ಯಾಪಾರ ಮಾಡಬೇಕಿದ್ದು 1000 ಹೂಗಳ ಮಾಲೆಗೆ 450 ರೂಪಾಯಿ ಖರ್ಚು ಬರಲಿದೆ. ಮಾರಣಕಟ್ಟೆ ಜಾತ್ರೆಯಲ್ಲಿ ನಾವು ನಿರೀಕ್ಷಿಸಿದ ಉತ್ತಮ ದರ ಸಿಕ್ಕರೆ ನಾವು ಬೆಳೆದ ಹೂವುಗಳ ಸಹಿತ ದುಬಾರಿ ಹಣ ನೀಡಿ ಬೇರೆಡೆಯಿಂದ ತಂದ ಹೂಗಳನ್ನು ಮಾರಿದರೆ ನಷ್ಟವಾಗದು. ಕಳೆದ ಬಾರಿ ಜಾತ್ರೆಯಲ್ಲಿ ಒಳ್ಳೆ ಬೆಲೆಯಿದ್ದು ನಂತರ ಗಣನೀಯವಾಗಿ ದರ ಕಮ್ಮಿಯಾಗಿತ್ತು. ವಿವಿಧ ಸಮಸ್ಯೆಗಳಿಂದ ಸೇವಂತಿಗೆ ಬೆಳೆಯಲು ಜನರು ಹಿಂದೇಟು ಹಾಕುತ್ತಿದ್ದಾರೆ. ಈ ಬಾರಿ ನಮ್ಮ ಗದ್ದೆಗಳಿಗೆ ಹಂದಿಗಳು ಲಗ್ಗೆಯಿಟ್ಟು ಬೆಳೆ ಹಾನಿ ಮಾಡಿದೆ. ಹೆಮ್ಮಾಡಿಯ ಬೇರೆಡೆಯೂ ಕೂಡ ಹೂಗಳ ಅರಳುವಿಕೆ ಕಮ್ಮಿಯಾಗಿದೆ. ಹೀಗಾದರೆ ಘಾಟಿ ಸೇವಂತಿಗೆ ನಮ್ಮ ಮಾರುಕಟ್ಟೆ ಆಕ್ರಮಿಸುತ್ತದೆ.
– ಪ್ರಶಾಂತ್ ಭಂಡಾರಿ ಹೆಮ್ಮಾಡಿ (ಸೇವಂತಿ ಬೆಳೆಗಾರ)
Comments are closed.