ಕರಾವಳಿ

ಕಲ್ಲಂಗಡಿ ಹಣ್ಣು ಬೆಳೆಯಲು ಬೈಂದೂರು ರೈತರ ಅತ್ಯುತ್ಸಾಹ | ಬೈಂದೂರು ಕ್ಷೇತ್ರದಲ್ಲಿ 183 ಎಕ್ರೆ |  ನಾಗೂರು‌ ವ್ಯಾಪ್ತಿಯೊಂದರಲ್ಲೇ 80 ಎಕ್ರೆ ‘ಕರಗುಂಜಿ’ ಬೆಳೆದ ರೈತರು!

Pinterest LinkedIn Tumblr

ವರದಿ- ಯೋಗೀಶ್ ಕುಂಭಾಸಿ

ಕುಂದಾಪುರ: ಉಡುಪಿ ಜಿಲ್ಲೆಯಲ್ಲಿ ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಒಂದಷ್ಟು ಕಡೆಯಲ್ಲಿ ಪ್ರತಿವರ್ಷ ಬೆಳೆಯುವ ಕಲ್ಲಂಗಡಿ ಹಣ್ಣು ಜಿಲ್ಲೆ, ಹೊರಜಿಲ್ಲೆ ಸಹಿತ ಹೊರರಾಜ್ಯಗಳಿಗೂ ರಫ್ತಾಗುತ್ತದೆ. ಮೂರ್ನಾಲ್ಕು ತಿಂಗಳು ಮಕ್ಕಳಂತೆ ಸಲುಹಿ, ಪೋಷಿಸಿ ಬೆಳೆಸುವ ಕಲ್ಲಂಗಡಿ ಹಣ್ಣುಗಳು ಅದೆಷ್ಟೋ ಜನರಿಗೆ ಜೀವನಾಧಾರವೂ ಆಗಿದೆ.

ಬೇಸಿಗೆಯ ಬಿರುಬಿಸಿಲ ಝಳ ಹೋಗಲಾಡಿಸಲು, ಹಬ್ಬಹರಿದಿನದ ಸುತ್ತಾಟದ ದಣಿವಾರಿಸಲು, ಶುಭ ಸಮಾರಂಭದಲ್ಲಿ ಹಣ್ಣಿನ ರಸವಾಗಿ ನೀಡಲು ಕಲ್ಲಂಗಡಿ ಹಣ್ಣು ಉಪಯೋಗಕಾರಿ. ಬೈಂದೂರು ವಿಧಾನಸಭಾ ಕ್ಷೇತ್ರದ ಕಿರಿಮಂಜೇಶ್ವರ, ನಾಗೂರು, ನಾವುಂದ, ಕಂಬದಕೋಣೆ, ಹೇರಂಜಾಲು, ಕೆರ್ಗಾಲು, ಉಪ್ಪುಂದ, ಬಿಜೂರು, ನಾಯ್ಕನಕಟ್ಟೆ, ಶಿರೂರು, ನೂಜಾಡಿ, ಹೇರೂರು, ನಂನದವನ, ಪಡುಕೋಣೆ, ನಾಡ, ಹಕ್ಲಾಡಿ ಮತ್ತಿತರ ಭಾಗದಲ್ಲಿ ಕಲ್ಲಂಗಡಿ ಬೆಳೆಯನ್ನು ಬೆಳೆಯುತ್ತಿದ್ದಾರೆ. ಇಲ್ಲೆಲ್ಲ ಪ್ರದೇಶ ಜಾಸ್ತಿಯಾಗಿದೆ. ಈ ಬಾರಿ ಆಲೂರು ಭಾಗದಲ್ಲೂ ರೈತರು ಕಲ್ಲಂಗಡಿ ಬೆಳೆದಿದ್ದಾರೆ. ಹೀಗಾಗಿ ಈ ಬಾರಿ ಕಲ್ಲಂಗಡಿ ಬೆಳೆಯುವ ಪ್ರದೇಶ ಶೇ.20ರಷ್ಟು ವಿಸ್ತರಣೆಯಾಗಿದೆ. ಕಳೆದ ವರ್ಷ ಉಭಯ ತಾಲೂಕಿನಲ್ಲಿ 147 ಎಕರೆ ಪ್ರದೇಶಗಳಲ್ಲಿ ಬೆಳೆಯಲಾಗಿದ್ದರೆ, ಈ ಬಾರಿ 183 ಎಕರೆ ಪ್ರದೇಶದಲ್ಲಿ ಕಲ್ಲಂಗಡಿ ಬೆಳೆ ಬೆಳೆಯಲಾಗಿದೆ. ಬಿಸಿಲಿನ ತಾಪ ಹೆಚ್ಚುತ್ತಿರುವುದರಿಂದ ಬೇಸಗೆಯಲ್ಲಿ ಕಲ್ಲಂಗಡಿ ಹಣ್ಣಿಗೆ ಬೇಡಿಕೆ ಹೆಚ್ಚಾಗಬಹುದು ಅನ್ನುವ ಕಾರಣಕ್ಕೆ ಹೆಚ್ಚಿನ ಪ್ರದೇಶದಲ್ಲಿ ಬೆಳೆಯಲು ಬೆಳೆಗಾರರು ಮುಂದಾಗಿದ್ದಾರೆ. ಬೈಂದೂರು ಹೋಬಳಿಯ ಬಹುಭಾಗ ಕಲ್ಲಂಗಡಿ ಬೆಳೆಯಲಾಗುತ್ತದೆ. ವಂಡ್ಸೆ, ಕುಂದಾಪುರ ಹೋಬಳಿಯ ಕೆಲವೇ ಪ್ರದೇಶದಲ್ಲಿ ಮಾತ್ರ ಬೆಳೆಯುತ್ತಾರೆ.

ಉತ್ತಮ ದರ ಸಿಗುವ ನಿರೀಕ್ಷೆ: ಕಲ್ಲಂಗಡಿ ಹಣ್ಣು ಉತ್ತಮವಾಗಿ ಬೆಳೆಯಲು ಒಳ್ಳೆಯ ಬಿಸಿಲಿನ ಅಗತ್ಯವಿದೆ. ಗದ್ದೆಯ ಮಣ್ಣಿನ ಗುಣವೂ ಹಣ್ಣಿನ ಬೆಳವಣಿಗೆ ಮೇಲೆ ಪಾತ್ರ ವಹಿಸುತ್ತದೆ. ಇಬ್ಬನಿ(ಮಂಜು), ಚಳಿ ಇಲ್ಲದಿದ್ದರೂ ಬೆಳೆಗೆ ತೊಂದರೆಯಿಲ್ಲ. ಮೋಡ ಮಾತ್ರ ಇರಬಾರದು. ಮೋಡವಿದ್ದರೆ ಹೂವು ಮೊಗ್ಗಿನಲ್ಲಿಯೇ ಕರಟಿ ಹೋಗುತ್ತದೆ. ಅಲ್ಲದೆ ಸಣ್ಣಸಣ್ಣ ಕಾಯಿಗಳು ಉದುರುತ್ತದೆ. ಹಿಂದಿನ ಕೆಲ ವರ್ಷಗಳಿಗಿಂತ ಕಳೆದ ಬಾರಿ ಒಳ್ಳೆಯ ಇಳುವರಿ ಬಂದಿತ್ತು. ದರವೂ ಒಳ್ಳೆಯದಿತ್ತು. ಈ ಬಾರಿ ಆರಂಭದಲ್ಲಿ ಮೆಲೋಡಿ ಕಿ.ಲೋಗೆ ಗದ್ದೆಯ ದರ 12 ರೂ. ತನಕವಿದ್ದರೆ ನಾಮಧಾರಿ ಹಣ್ಣು 15-16 ರೂ. ದರ ಸಿಗಲಿದೆ. ಮಾರುಕಟ್ಟೆ ಹಾಗೂ ಬೇಡಿಕೆಯ ಅನುಸಾರ ದರದಲ್ಲಿ ವ್ಯತ್ಯಾಸವಾಗಲಿದೆ ಎನ್ನುತ್ತಾರೆ ಕಲ್ಲಂಗಡಿ ಬೆಳೆಗಾರರು.

 

ಬೈಂದೂರು ಭಾಗದಲ್ಲಿ 183 ಎಕರೆ ಪ್ರದೇಶದಲ್ಲಿ ಕಲ್ಲಂಗಡಿ ಬೆಳೆ!

ಬೈಂದೂರು ತಾಲೂಕಿನಲ್ಲಿ 183 ಎಕರೆ ಪ್ರದೇಶದಲ್ಲಿ ಈ ಬಾರಿ ರೈತರು ಕಲ್ಲಂಗಡಿ ಬೆಳೆದಿದ್ದಾರೆ. ಈ ಪೈಕಿ ನಾಗೂರು ಒಂದರಲ್ಲೇ 80 ಎಕರೆಯಲ್ಲಿ ಬೆಳೆಯಲಾಗಿದೆ. ಉಳಿದಂತೆ ಹೇರೂರಿನಲ್ಲಿ 25 ಎಕರೆ, ಹೆರಂಜಾಲು-20 ಎಕರೆ, ಬಿಜೂರು-15, ಉಪ್ಪುಂದ-10, ಶಿರೂರು-12, ನಾಡ-6, ನಂದನವನ-10 ಹಾಗೂ ಪಡುವರಿಯಲ್ಲಿ 5 ಎಕರೆ ಪ್ರದೇಶದಲ್ಲಿ ಕಲ್ಲಂಗಡಿ ಬೆಳೆಯಲಾಗಿದೆ.

ಕೋಟ ಭಾಗದಲ್ಲೂ ಕಲ್ಲಂಗಡಿ ಬೆಳೆ:

ಬ್ರಹ್ಮಾವರ ತಾಲೂಕಿನ ವಿವಿದೆಡೆ ಇತ್ತಿಚೆಗೆ ಕೆಲವು ವರ್ಷದಿಂದ ಕಲ್ಲಂಗಡಿ ಹಣ್ಣು ಬೆಳೆಯಲಾಗುತ್ತಿದೆ. ಕೋಟ, ಗಿಳಿಯಾರು, ಮಣೂರು, ಸಾಲಿಗ್ರಾಮ, ವಡ್ಡರ್ಸೆ ಭಾಗದಲ್ಲಿ ಅಂದಾಜು 15 ಹೆಕ್ಟೇರ್ (37 ಎಕ್ರೆ) ಪ್ರದೇಶದಲ್ಲಿ ನಾಮಧಾರಿ, ಮೆಲೋಡಿ ತಳಿಯ ಹಣ್ಣು ಬೆಳೆಯಲಾಗುತ್ತಿದೆ. ಇನ್ನು ಹಿರಿಯಡ್ಕದ ಸುರೇಶ್ ನಾಯಕ್ ಎನ್ನುವವರು ಕೆಲ ವರ್ಷದಿಂದ ಥೈವಾನ್ ಎನ್ನುವ ಹಳದಿ ತಿರುಳಿನ ಕಲ್ಲಂಗಡಿ ಬೆಳೆಯುತ್ತಿದ್ದಾರೆ ಎಂದು ಉಡುಪಿ ಜಿ.ಪಂ ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ ಹೇಮಂತ್ ಕುಮಾರ್ ಎಲ್. ಅವರು ಮಾಹಿತಿ ನೀಡಿದ್ದಾರೆ.

10 ವರ್ಷಗಳಿಂದ ಕಲ್ಲಂಗಡಿ ಬೆಳೆಯುತ್ತಿದ್ದು ಈ ವರ್ಷ ಕಿರಿಮಂಜೇಶ್ವರದಲ್ಲಿ ಬೇರೆಯವರ ಜಾಗ ಲೀಸ್ ಪಡೆದು 3.5 ಎಕ್ರೆ ಜಾಗದಲ್ಲಿ 1.5 ಎಕ್ರೆ ನಾಮಧಾರಿ ತಳಿ, 2 ಎಕ್ರೆಯಲ್ಲಿ ಮೆಲೋಡಿ ತಳಿ ಕಲ್ಲಂಗಡಿ ಬೆಳೆದಿದ್ದು ಈ ವಾರದಲ್ಲಿ ಕಟಾವು ನಿರೀಕ್ಷಿಸಲಾಗಿದೆ. ಅಲ್ಲದೆ ಹಳಗೇರಿಯ ಮನೆ ಸಮೀಪದಲ್ಲಿ 3.5 ಎಕ್ರೆ ಜಾಗದಲ್ಲಿ ಬೆಳೆದ ಕಲ್ಲಂಗಡಿ ಮುಂದಿನ ತಿಂಗಳ ಮೊದಲ ವಾರದಲ್ಲಿ ಕಟಾವಿಗೆ ಬರಲಿದೆ. ಸಮಗ್ರ ಕೃಷಿ, ಹೈನುಗಾರಿಕೆ ನಮ್ಮ ಜೀವನಾಧಾರ. ಟ್ರಾಕ್ಟರ್ ಮೊದಲಾದವುಗಳನ್ನು ಬಳಸಿ ನಾನು, ಮನೆಯವರ ಸಹಕಾರದಲ್ಲಿ ಈ ಬೆಳೆಯುತ್ತಿದ್ದು ಬೇಸಿಗೆಯ ಮಾರುಕಟ್ಟೆಯಲ್ಲಿ ಬೇಡಿಕೆ ಸಿಗುವ ನಿರೀಕ್ಷೆಯಲ್ಲಿ ಮತ್ತೊಂದು ಹಂತದ ಬೆಳೆಗಾಗಿ ಇನ್ನೊಂದು ಎಕರೆಯಲ್ಲಿ ಕಳೆದ ವಾರ ಗಿಡ ಹಾಕಿರುವೆ. 

-ಸುಧಾ ಬಳೆಗಾರ್ ಹಳಗೇರಿ, ಕಲ್ಲಂಗಡಿ ಬೆಳೆಗಾರ

ಕಲ್ಲಂಗಡಿ ಬೆಳೆಗೆ ಉತ್ತೇಜನ ನೀಡಲು ಕ್ರಮ

ಕಳೆದ ವರ್ಷ ಬೇಸಿಗೆಯಲ್ಲಿ ಕಲ್ಲಂಗಡಿ ಹಣ್ಣು ಹಾಗೂ ಎಳನೀರಿಗೆ ಭಾರೀ ಬೇಡಿಕೆ ಇತ್ತು. ಆದ್ದರಿಂದ ಈ ಬಾರಿ ಕಲ್ಲಂಗಡಿ ಬೆಳೆಯುವ ಪ್ರದೇಶವೂ ವಿಸ್ತರಣೆಯಾಗಿದೆ. ಕಲ್ಲಂಗಡಿ ಬೆಳೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಬೆಳೆಗಾರರಿಗೆ ತೋಟಗಾರಿಕೆ ಇಲಾಖೆಯಿಂದ ಹೆಕ್ಟೇರ್‌ ಗೆ   20 ಸಾವಿರ ರೂ. ಸಹಾಯಧನ ಮತ್ತು ಪ್ಲಾಸ್ಟಿಕ್‌ ಮಲ್ಚಿಂಗ್‌ ಗೆ 16 ಸಾವಿರ ರೂ. ಸಹಾಯಧನ  ಪ್ರತ್ಯೇಕವಾಗಿ ನೀಡಲಾಗುತ್ತಿದೆ. ತಾಲೂಕಿಗೆ ಪ್ರದೇಶ ವಿಸ್ತರಣೆಯಡಿ 10 ಹೆಕ್ಟೇರ್‌ ಗುರಿ ಇದ್ದು ಈಗಾಗಲೇ 8 ಹೆಕ್ಟೇರ್‌ ಪ್ರದೇಶಕ್ಕೆ ಅರ್ಜಿ ಬಂದಿದ್ದು ಸಹಾಯಧನ ನೀಡಲಾಗುತ್ತಿದೆ. ಪ್ಲಾಸ್ಟಿಕ್‌ ಮಲ್ಚಿಂಗ್‌ ಗೆ 5 ಹೆಕ್ಟೇರ್‌ ಗುರಿಯಿದ್ದು ಅರ್ಹ ರೈತರು ಸಹಾಯಧನ ಪಡೆಯಬಹುದಾಗಿದೆ. ನಿಗದಿತ ಗುರಿಗಿಂತ ಹೆಚ್ಚುವರಿಯಾಗಿ ರೈತರ ಅರ್ಜಿಗಳು ಬಂದಲ್ಲಿ ಸಹಾಯಧನ ನೀಡಲು ಪ್ರತ್ಯೇಕ ಪ್ರಸ್ತಾವನೆಯನ್ನು ಮೇಲಾಧಿಕಾರಿಗಳಿಗೆ ನೀಡಲಾಗುವುದು.

– ನಿಧೀಶ್ ಕೆ.ಜೆ., ಹಿರಿಯ ಸಹಾಯಕ ನಿರ್ದೇಶಕ, ತೋಟಗಾರಿಕಾ ಇಲಾಖೆ

Comments are closed.