ಉಡುಪಿ: ಡಿಜಿಟಲ್ ಅರೆಸ್ಟ್ ಮಾಡಿರುವುದಾಗಿ ಬೆದರಿಸಿ ಉಡುಪಿಯ ವ್ಯಕ್ತಿಯೊಬ್ಬರಿಗೆ 89 ಲಕ್ಷ ರೂ. ವಂಚಿಸಿರುವ ಪ್ರಕರಣದ ಆರೋಪಿಯನ್ನು ಉಡುಪಿ ಸೆನ್ ಪೊಲೀಸರು ಧಾರವಾಡದಲ್ಲಿ ಬಂಧಿಸಿದ್ದಾರೆ. ಯಾದಗಿರಿ ಜಿಲ್ಲೆಯ ಶಹಾಪುರ್ ನಿವಾಸಿ ಕಿರಣ್ (24) ಬಂಧಿತ ಆರೋಪಿ. ಈತನಿಂದ ಒಟ್ಟು ಏಳು ಲಕ್ಷ ರೂ. ನಗದು ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಉಡುಪಿಯ ಜ್ಯುವೆಲ್ಲರಿ ಅಂಗಡಿ ಮಾಲಕರೊಬ್ಬರಿಗೆ ಸೆ.11ರಂದು ಅಪರಿಚಿತರು ಕರೆ ಮಾಡಿ, ಅಕ್ರಮ ಜಾಹೀರಾತು, ಸಂದೇಶ ಕಳುಹಿಸುವುದಕ್ಕೆ ನಿಮ್ಮ ಮೇಲೆ ಒಟ್ಟು 17 ಪ್ರಕರಣಗಳು ದಾಖಲಾಗಿದ್ದು, ನಿಮ್ಮ ಮೇಲೆ ಅರೆಸ್ಟ್ ವಾರಂಟ್ ಆಗಿರುವುದಾಗಿ ಬೆದರಿಸಿದರು. ನಂತರ ಪೊಲೀಸ್ ಅಧಿಕಾರಿ ಸಮವಸ್ತ್ರದಲ್ಲಿ ವಾಟ್ಸಪ್ ವಿಡಿಯೋ ಕರೆ ಮಾಡಿ, ಮನಿ ಲಾಂಡ್ರಿಂಗ್ ಕೇಸ್ನಲ್ಲಿ ಭಾಗಿಯಾಗಿ ರುವುದಾಗಿ ತಿಳಿಸಿ ಆದಾಯದ ಮೂಲ ಪರಿಶೀಲನೆ ಮಾಡುವುದಾಗಿ ಹೇಳಿ, ವರ್ಚುವಲ್ ಅರೆಸ್ಟ್ ಮಾಡುವುದಾಗಿ ಬೆದರಿಸಿದರು. ಅದರಂತೆ ಸಂತೋಷ್ ಕುಮಾರ್ರನ್ನು ಬೆದರಿಸಿ ಅವರಿಂದ 89,00,000ರೂ. ಹಣವನ್ನು ತಮ್ಮ ಖಾತೆಗೆ ವರ್ಗಾಯಿಸಿ ಕೊಂಡು ವಂಚನೆ ಎಸಗಿದ್ದರು. ಈ ಬಗ್ಗೆ ಸಂತೋಷ ಕುಮಾರ್ ನೀಡಿದ ದೂರಿನಂತೆ ಉಡುಪಿ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಕುರಿತು ಸೆನ್ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕ ರಾಮಚಂದ್ರ ನಾಯಕ್ ನೇತೃತ್ವದ ತಂಡವು ಕೇರಳ ರಾಜ್ಯ ಮತ್ತು ಮಹಾರಾಷ್ಟ ರಾಜ್ಯದ ಪುಣೆ ಕಡೆಗಳಲ್ಲಿ ಕಾರ್ಯಾಚರಣೆ ನಡೆಸಿ ಕಿರಣ್ನನ್ನು ಧಾರವಾಡದಲ್ಲಿ ಬಂಧಿಸಿ, ಒಂದು ಮೊಬೈಲ್ ಫೋನ್ ಹಾಗೂ 5 ಲಕ್ಷ ರೂ. ನಗದನ್ನು ವಶಪಡಿಸಿಕೊಂಡಿತು. ಈ ಹಿಂದೆ ಕೇರಳ ರಾಜ್ಯದ ಮೊಹಮ್ಮದ್ ನಿಶಾಮ್ ಸಿ.ಕೆ. ಎಂಬವರ ಖಾತೆಗೆ ಈ ಪ್ರಕರಣಕ್ಕೆ ಸಂಬಂಧಿಸಿ ಜಮೆ ಆಗಿರುವ 2 ಲಕ್ಷ ರೂ. ಹಣವನ್ನು ಕೂಡ ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
Comments are closed.