ಕರಾವಳಿ

ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಗ್ರಾಮ ಆಡಳಿತ ಅಧಿಕಾರಿಗಳಿಂದ ಧರಣಿ 

Pinterest LinkedIn Tumblr

ಕುಂದಾಪುರ: ಇತ್ತೀಚೆಗೆ ಧರಣಿ, ಸತ್ಯಾಗ್ರಹ ನಡೆಸಿ ಸರಕಾರದಿಂದ ಭರವಸೆ ಪಡೆದು ಮುಷ್ಕರ ಕೈಬಿಟ್ಟಿದ್ದ ಗ್ರಾಮ ಆಡಳಿತ ಅಧಿಕಾರಿಗಳು ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸೋಮವಾರದಿಂದ ಮತ್ತೆ ಧರಣಿ ಆರಂಭಿಸಿದ್ದಾರೆ. ಕುಂದಾಪುರದ ಮಿನಿ ವಿಧಾನಸೌಧದ ಎದುರು ಕುಂದಾಪುರ ತಾಲೂಕು ಗ್ರಾಮ ಆಡಳಿತ ಅಕಾರಿಗಳ ಸಂಘದ ವತಿಯಿಂದ ನಡೆದ ಮುಷ್ಕರದಲ್ಲಿ 36 ಮಂದಿ ಭಾಗವಹಿಸಿದ್ದರು.

ತಾಲೂಕು ಸಂಘ ಅಧ್ಯಕ್ಷ ಪ್ರಕಾಶ್ ರಾಥೋಡ್, ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂಘದ ವತಿಯಿಂದ ಕಳೆದ ವರ್ಷ ಸೆ.22ರಂದು ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಭಾ ಭವನ ಚಿತ್ರದುರ್ಗದಲ್ಲಿ ನಡೆದ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ರಾಜ್ಯದ ಎಲ್ಲಾ ಜಿಲ್ಲಾಧ್ಯಕ್ಷರು, ಪದಾಽಕಾರಿಗಳು, ತಾಲೂಕು ಅಧ್ಯಕ್ಷರು, ಹಾಗೂ ಸರ್ವ ಸದಸ್ಯರ ಒಪ್ಪಿಗೆಯಂತೆ ಸರ್ವಾನುಮತದಿಂದ ಸೆ.26ರಿಂದ ಅ.3ರವರೆಗೆ ರಾಜ್ಯಾದ್ಯಂತ ಮುಷ್ಕರ ನಡೆಸಲಾಗಿತ್ತು. ಸರಕಾರದ ಕಂದಾಯ ಇಲಾಖೆ  ಪ್ರಧಾನ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಗ್ರಾಮ ಆಡಳಿತ ಅಧಿಕಾರಿಗಳ ಎಲ್ಲಾ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದ್ದರು. ಅದರಂತೆ ರಾಜ್ಯವ್ಯಾಪಿ ಮುಷ್ಕರ  ಹಿಂಪಡೆಯಲಾಗಿತ್ತು. ಆದರೆ ಸರಕಾರವು ಈ ವೃಂದದ ನೌಕರರ ಬೇಡಿಕೆಗಳ ವಿಚಾರವಾಗಿ ಯಾವುದೇ ತೃಪ್ತಿಕರ ಕ್ರಮಗಳನ್ನು ಕೈಗೊಂಡಿಲ್ಲ. ಬೇಡಿಕೆಗಳನ್ನು ಈಡೇರಿಸಿಲ್ಲ. ಬದಲಾಗಿ, ಮುಷ್ಕರದ ಪೂರ್ವದ ಅವಧಿಗಿಂತಲೂ ಹೆಚ್ಚಿನ ಕಾರ್ಯದ ಒತ್ತಡ ಉಂಟಾಗಿದೆ. ಆದ್ದರಿಂದ ಮುಷ್ಕರದ ಬೇಡಿಕೆಗಳ ಈಡೇರಿಕೆಗಾಗಿ ಅನಿರ್ದಿಷ್ಟಾವಧಿಗೆ ಕೆಲಸಗಳನ್ನು ಸ್ಥಗಿತಗೊಳಿಸಿ ಮುಷ್ಕರ ನಡೆಸಲು ತೀರ್ಮಾನಿಸಲಾಗಿದೆ ಎಂದರು.

ಎಲ್ಲಾ ಬಗೆಯ ಮೊಬೈಲ್ ಆಪ್ ಹಾಗೂ ವೆಬ್ ಅಪ್ಲಿಕೇಷನ್ ಅನ್ನು ಸ್ಥಗಿತಗೊಳಿಸಿ, ಲೇಖನಿ ಸ್ಥಗಿತಗೊಳಿಸುವ ಮೂಲಕ ಅನಿರ್ದಿಷ್ಟಾವಧಿ ಮುಷ್ಕರವನ್ನು ರಾಜ್ಯವ್ಯಾಪಿ ಹಮ್ಮಿಕೊಳ್ಳಲಾಗಿದೆ. ಮೂರು ದಿನಗಳ ಕಾಲ ತಾಲೂಕು ಹಂತದಲ್ಲಿ ನಡೆದು ಬಳಿಕ ಜಿಲ್ಲಾ ಹಂತದಲ್ಲಿ ಪ್ರತಿಭಟನೆ ನಡೆಯಲಿದೆ.

ತಾಲೂಕು ಸಂಘದ ಉಪಾಧ್ಯಕ್ಷ ಆನಂದ ಕುಮಾರ್, ಕಾರ್ಯದರ್ಶಿ ವಿಶ್ವನಾಥ, ರಾಜ್ಯ ಸಂಘ ಮಾಧ್ಯಮ ವಕ್ತಾರ ಆನಂದ್, ಜಿಲ್ಲಾ ಉಪಾಧ್ಯಕ್ಷ ಶಿವರಾಯ್, ಉಪಾಧ್ಯಕ್ಷೆ ದೀಪಿಕಾ ಶೆಡ್ತಿ ಮೊದಲಾದವರು ಇದ್ದರು.

Comments are closed.