ಕರ್ನಾಟಕ

ಹಣಕಾಸಿನ ಪರಿಸ್ಥಿತಿ ಅವಲೋಕಿಸಿ, ಗುತ್ತಿಗೆದಾರರ ಬಾಕಿ ಬಿಲ್‌ ಪಾವತಿಗೆ ಕ್ರಮ : ಸಿಎಂ ಸಿದ್ದರಾಮಯ್ಯ

Pinterest LinkedIn Tumblr

ಬೆಂಗಳೂರು: ಸರ್ಕಾರದಲ್ಲಿನ ಹಣಕಾಸಿನ ಪರಿಸ್ಥಿತಿಯನ್ನು ಅವಲೋಕಿಸಿ, ಗುತ್ತಿಗೆದಾರರ ಬಾಕಿ ಬಿಲ್ಲುಗಳ ಪಾವತಿ ಬಗ್ಗೆ ಪರಿಶೀಲಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ರಾಜ್ಯ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳೊಂದಿಗೆ ಇಂದು ಸುದೀರ್ಘ ಮಾತುಕತೆ ನಡೆಸಿದ ಸಿಎಂ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಗುತ್ತಿಗೆದಾರರ ಸಂಘದವರು ಬಾಕಿಯಿರುವ ಬಿಲ್ ಪಾವತಿಗೆ ಮನವಿ ಮಾಡಿದ್ದಾರೆ. ಸರ್ಕಾರದಲ್ಲಿ ಲಭ್ಯವಿರುವ ಹಣಕಾಸನ್ನು ಅವಲೋಕಿಸಿ, ಗುತ್ತಿಗೆದಾರರ ಬಾಕಿ ಬಿಲ್ಲುಗಳ ಪಾವತಿ ಬಗ್ಗೆ ಪರಿಶೀಲಿಸಲಾಗುವುದು. ಏಪ್ರಿಲ್ ಮಾಹೆಯಲ್ಲಿ ಸಾಧ್ಯವಾದಷ್ಟು ಬಾಕಿ ಬಿಲ್ಲುಗಳನ್ನು ಪಾವತಿಸಲು ಪ್ರಯತ್ನಿಸಲಾಗುವುದು. ಹಿಂದಿನ ಸರ್ಕಾರದ ಅವಧಿಯಲ್ಲಿ ಅನುದಾನವಿಲ್ಲದಿದ್ದರೂ, ಟೆಂಡರ್ ಪ್ರಕ್ರಿಯೆಯನ್ನು ಕೈಗೊಂಡು, ಕಾಮಗಾರಿ ಪ್ರಾರಂಭಿಸಿದ ಕಾರಣದಿಂದಾಗಿ ಬಾಕಿ ಬಿಲ್ಲುಗಳು ಹೆಚ್ಚಿವೆ. ಇದಕ್ಕೆ ನಮ್ಮ ಸರ್ಕಾರ ಹೊಣೆಯಾಗಲು ಸಾಧ್ಯವೇ?.

ಹಿಂದಿನ ಬಿಜೆಪಿ ಸರ್ಕಾರದವರು ಬಜೆಟ್‌ ನಲ್ಲಿ ಅನುದಾದ ಇಡದೆ ಬೇಕಾಬಿಟ್ಟಿ ಟೆಂಡರ್‌ ಕರೆದು, ಕೆಲಸ ಆರಂಭಿಸಿ, ಗುತ್ತಿಗೆದಾರರಿಗೆ ಬಿಲ್‌ ಹಣ ನೀಡದೆ ಸುಮಾರು ರೂ.30,000 ಕೋಟಿ ಬಾಕಿ ಮೊತ್ತವನ್ನು ನಮ್ಮ ಸರ್ಕಾರದ ತಲೆಯ ಮೇಲೆ ಹೊರಿಸಿ ಹೋಗಿದ್ದಾರೆ. ಇದಕ್ಕೆ ಯಾರು ಹೊಣೆ?

ಯಾರೇ ಆಗಿರಲಿ ಲಂಚ ಪಡೆಯುವುದು ಹಾಗೂ ಲಂಚ ನೀಡುವುದು ಸಹ ಅಪರಾಧ. ಈ ರೀತಿಯ ಕೃತ್ಯದಲ್ಲಿ ಯಾರು ತೊಡಗಬಾರದು. ನಾನು ಇದುವರೆಗೂ ಬಿಲ್ ಬಿಡುಗಡೆ ಮಾಡಲು ಯಾರಿಂದಲೂ ನಯಾಪೈಸೆ ದುಡ್ಡು ಪಡೆದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

Comments are closed.