ಕರಾವಳಿ

ಮರವಂತೆ | ಹ್ಯಾಚರಿಯಿಂದ ಮೊಟ್ಟೆ ಒಡೆದು ಸುರಕ್ಷಿತವಾಗಿ ಕಡಲು ಸೇರಿದ 115ಕ್ಕೂ ಅಧಿಕ ಕಡಲಾಮೆ ಮರಿಗಳು!

Pinterest LinkedIn Tumblr

ಉಡುಪಿ: ಕಳೆದ 40 ದಿನಗಳ ಹಿಂದೆ ಮರವಂತೆ ಸಮುದ್ರ ತೀರ ಹಾಗೂ ಬೈಂದೂರಿನ ತಾರಾಪತಿ ಕಡಲ ಕಿನಾರೆಯಲ್ಲಿ ಕಡಲಾಮೆಗಳ ಮೊಟ್ಟೆ ಸಂರಕ್ಷಣೆ ಕಾರ್ಯ ನಡೆಯುತ್ತಿದ್ದು ಈ ಪೈಕಿ ಮರವಂತೆ ‘ಹ್ಯಾಚರಿ’ಯಲ್ಲಿ ಗುರುವಾರ ರಾತ್ರಿ ಮೊಟ್ಟೆಗಳು ಒಡೆದು ಅಂದಾಜು 115 ಮರಿಗಳು ಹೊರಬಂದು ಕಡಲು ಸೇರಿದೆ.

ಜನವರಿ ತಿಂಗಳ ಅಂತ್ಯದಲ್ಲಿ ಮರವಂತೆ, ತಾರಾಪತಿ ಕಡಲ ತೀರದಲ್ಲಿ ಕಡಲಾಮೆಗಳು ಮೊಟ್ಟೆಗಳನ್ನಿಟ್ಟಿದ್ದವು. ಅದನ್ನು ಗಮನಿಸಿದ ಸ್ಥಳೀಯರು ಅರಣ್ಯ ಇಲಾಖೆ ಸಹಿತ ಈ ಬಗ್ಗೆ ಮುತುವರ್ಜಿ ವಹಿಸಲು ಆಸಕ್ತ ಸಂಘ- ಸಂಸ್ಥೆಗಳ ಗಮನಕ್ಕೆ ತಂದಿದ್ದು ಅಳಿವಿನಂಚಿನಲ್ಲಿರುವ ಕಡಲಾಮೆ ಮೊಟ್ಟೆಗಳನ್ನು ಅಲ್ಲಲ್ಲೇ ನೈಸರ್ಗಿಕವಾಗಿ ಹ್ಯಾಚರಿ ನಿರ್ಮಿಸುವ ಮೂಲಕ ಸಂರಕ್ಷಿಸಲಾಗಿತ್ತು. ಇನ್ನು ತಾರಾಪತಿಯಕ್ಲಿ ಪ್ರತ್ಯೇಕ 2 ಹ್ಯಾಚರಿ ನಿರ್ಮಿಸಲಾಗಿದ್ದು ಮುಂದಿನ ವಾರದಲ್ಲಿ ಮರಿಗಳು ಬರುವ ನಿರೀಕ್ಷೆಯಿದೆ.

ಗುರುವಾರ ರಾತ್ರಿ ಮರವಂತೆ ಹ್ಯಾಚರಿಗಳಿಂದ ಒಟ್ಟು 115 ಕಡಲಾಮೆ‌ ಮರಿಗಳು ಹೊರಕ್ಕೆ ಬಂದಿದ್ದು ಹೊರಕ್ಕೆ ಬಂದ ಕಡಲಾಮೆ ಮರಿಗಳು ನೈಸರ್ಗಿಕವಾಗಿ ಕಡಲು ಸೇರಲು ಅರಣ್ಯ ಇಲಾಖೆ ಅಧಿಕಾರಿಗಳು, ಸ್ಥಳೀಯ ಮೀನುಗಾರರು ಒಗ್ಗೂಡಿ ಅನುವು ಮಾಡಿಕೊಟ್ಟರು. ಸಮುದ್ರದಿಂದ ಹೊರಬಂದು ದಡದಲ್ಲಿ ಕಡಲಾಮೆಗಳು ಮೊಟ್ಟೆಯಿಟ್ಟ 48-60 ದಿನದಲ್ಲಿ ಮರಿಗಳು ಹೊರಬರುತ್ತದೆ. ಮೊಟ್ಟೆಗಳ ಸಂರಕ್ಷಣೆ, ವೀಕ್ಷಣೆ ಹಾಗೂ ಅಂತಿಮ ಫಲಿತಾಂಶದ ನಿಟ್ಟಿನಲ್ಲಿ 40ಕ್ಕೂ ಅಧಿಕ ದಿನಗಳಿಂದ ಮುತುವರ್ಜಿ ವಹಿಸಿದ್ದು ಮಾತ್ರವಲ್ಲದೇ ಮರಿಯೊಡೆಯುವ ರಾತ್ರಿ ತನಕವೂ ನಿಗಾವಹಿಸಿದ್ದ ಅರಣ್ಯ ಇಲಾಖೆ,  ಸ್ಥಳೀಯರ ಕಾರ್ಯ ಸಾರ್ವಜನಿಕವಾಗಿ ಪ್ರಶಂಸೆಗೆ ಪಾತ್ರವಾಗಿದೆ.

ಕುಂದಾಪುರ ವಿಭಾಗದ ಉಪ‌ಅರಣ್ಯ ಸಂರಕ್ಷಣಾಧಿಕಾರಿ ಗಣಪತಿ ಕೆ., ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪ್ರಕಾಶ್ ಪೂಜಾರಿ ಮಾರ್ಗದರ್ಶನಲ್ಲಿ ಬೈಂದೂರು ವಲಯ ಅರಣ್ಯಾಧಿಕಾರಿ ಸಂದೇಶ್ ಕುಮಾರ್ ಹಾಗೂ ಸಿಬ್ಬಂದಿಗಳು ಸ್ಥಳೀಯ ಮೀನುಗಾರ ಕೊರಗು ಖಾರ್ವಿ, ಇತರ ಮೀನುಗಾರರು ಇದ್ದರು.

ಬೀಚ್ ಸ್ವಚ್ಚತೆಯಿಂದ ಸಾಧ್ಯ: ಇದೇ ಮೊದಲ ಬಾರಿಗೆ ಬೈಂದೂರು ವಲಯದಲ್ಲಿ ಕಡಲಾಮೆ ಮೊಟ್ಟೆಗಳು ಪತ್ತೆಯಾಗಿ ಹ್ಯಾಚರಿ ನಿರ್ಮಿಸಲಾಗಿದೆ. ಸಾಮಾನ್ಯವಾಗಿ ಕಡಲಾಮೆಗಳು ಮೊಟ್ಟೆ ಇಡಲು ಸ್ವಚ್ಚ ತೀರವನ್ನು ಹಾಗೂ ಅಡೆತಡೆಯಿಲ್ಲದ ಪ್ರದೇಶವನ್ನು ಅರಸಿಬರುತ್ತದೆ. ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ನೇತೃತ್ವದ ಕ್ಲೀನ್ ಕಿನಾರ ತಂಡದ ಸದಸ್ಯರಿಂದ ವರ್ಷಗಳಿಂದ ನಡೆಯುತ್ತಿರುವ ಬೀಚ್ ಸ್ವಚ್ಚತಾ ಕಾರ್ಯವೂ ಕೂಡ ಮರವಂತೆ, ತಾರಾಪತಿಯಲ್ಲಿ ಕಡಲಾಮೆ ಮೊಟ್ಟೆ ಇಡಲು ಪೂರಕ ಕಾರಣವಾಗಿದೆ ಎನ್ನಲಾಗಿದೆ‌.

 

Comments are closed.