ಕುಂದಾಪುರ: ಮನೆಯಲ್ಲಿ ನಡೆಯುವ ಶುಭಕಾರ್ಯಗಳು, ಊರಿನಲ್ಲಿ ನಡೆಯುವ ಧಾರ್ಮಿಕ ಕಾರ್ಯಗಳಿಗೆ ಕೋಟ್ಯಾಂತರ ರೂ. ಹಣ ವ್ಯಯಿಸುವಾಗ ಆ ಊರಿನ ಬಡ, ನಿರ್ಗತಿಕ ಕುಟುಂಬಕ್ಕೆ ಮನೆ ನಿರ್ಮಿಸಿಕೊಡುವ ಇಚ್ಛಾಶಕ್ತಿ ಹೊಂದಿದರೆ ಊರು ಸಮೃದ್ಧವಾಗುತ್ತದೆ ಎಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಹೇಳಿದರು.
ತಾಲೂಕಿನ ಉಳ್ಳೂರು-74 ಗ್ರಾಮದ ಉಳ್ಳೂರು ಕೊರಗ ಕಾಲನಿಯಲ್ಲಿ ಡಾ. ಎಚ್.ಎಸ್. ಶೆಟ್ಟಿ ನೇತೃತ್ವದಲ್ಲಿ ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಮೂಲಕ 2.5 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ 14 ಮನೆಗಳಿಗೆ ಎ.7 ಸೋಮವಾರದಂದು ಭೂಮಿಪೂಜೆ, ಶಿಲಾನ್ಯಾಸ ನೆರವೇರಿಸಿ ಅವರು ಆಶೀರ್ವಚನ ನೀಡಿದರು.
ಗುಡಿ-ಗೋಪುರಗಳಲ್ಲಿ ಭಗವಂತನನ್ನು ಕಾಣುವ ನಾವು ಬಡವನ ಅಂತರಾಳದ ನೋವನ್ನು ಅರಿಯುವ ಮನಸ್ಥಿತಿ ಬೆಳೆಸಿಕೊಳ್ಳಬೇಕಿದೆ. ಕಷ್ಟದಲ್ಲಿರುವರಿಗೆ ಸ್ಪಂದಿಸುವ ಉದಾರತೆ ಬೆಳೆಸಿಕೊಂಡು ಸಮಾಜದಲ್ಲಿ ಜಲರಾಶಿಯಂತೆ ಬದುಕಬೇಕು. ಈ ನಿಟ್ಟಿನಲ್ಲಿ ಎಚ್.ಎಸ್. ಶೆಟ್ಟಿಯವರು ಕೊರಗ ಸಮುದಾಯಕ್ಕೆ ಗೃಹ ನಿರ್ಮಿಸಿಕೊಡುತ್ತಿರುವುದು ಸಹಿತ ವಿವಿಧ ಸಮಾಜಮುಖಿ ಮೌಲ್ಯಯುತ ಕಾರ್ಯಕ್ರಮಗಳು ಮೇಲ್ಫಂಕ್ತಿಯಾಗಿದೆ ಎಂದರು.
ಕೊರಗಾಭಿವೃದ್ಧಿ ಸಂಸ್ಥೆಗಳು ಕರ್ನಾಟಕ ಮತ್ತು ಕೇರಳದ ಅಧ್ಯಕ್ಷೆ ಸುಶೀಲಾ ನಾಡ ಮಾತನಾಡಿ, ಅಸ್ಪ್ರಶ್ಯರಲ್ಲಿ ಅಸ್ಪ್ರಶ್ಯರಾಗಿರುವ ಕೊರಗ ಸಮುದಾಯದವರನ್ನು ಸಮಾಜ ಮನುಷ್ಯರೆಂದು ಪರಿಗಣಿಸುವವರೆಗೆ ಅಸ್ಪ್ರಶ್ಯತೆ ತೊಲಗುವುದಿಲ್ಲ. ನಮ್ಮ ಸಮುದಾಯದ ಅಭ್ಯುದಯಕ್ಕೆ ಎಚ್.ಎಸ್. ಶೆಟ್ಟಿಯವರು ಮುನ್ನುಡಿ ಬರೆದಿದ್ದು ಇದು ಎಲ್ಲರಿಗೂ ಪ್ರೇರಣೆಯಾಗಬೇಕು. ಮನೆಗೆ ತಳಪಾಯ ಹಾಕಲು ಆಗದ ಪರಿಸ್ಥಿತಿಯಲ್ಲಿರುವ ಕೊರಗ ಸಮುದಾಯದವರಿಗೆ ಸುಸಜ್ಜಿತ ಮನೆ ನಿರ್ಮಿಸಿಕೊಡುವ ಮೂಲಕ ಅವರ ಬದುಕು ಕಟ್ಟಿಕೊಳ್ಳಲು ಸಹಕಾರ ನೀಡುತ್ತಿರುವುದು ಮಾದರಿ ಕಾರ್ಯ ಎಂದರು.
ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ, ಕುಂದಾಪುರ ಶಾಸಕ ಎ. ಕಿರಣ್ ಕುಮಾರ್ ಕೊಡ್ಗಿ, ಉಡುಪಿ ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರುಳಿ ಕಡೆಕಾರ್ ಮಾತನಾಡಿದರು.
ಭೂಮಿಪೂಜೆಯಲ್ಲಿ ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಭಾಗವಹಿಸಿದರು. ಈ ಸಂದರ್ಭ ಉಳ್ಳೂರು-74 ಗ್ರಾ.ಪಂ ಅಧ್ಯಕ್ಷೆ ಕುಸುಮಾ ಶೆಟ್ಟಿ, ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಡಾ. ಎಚ್.ಎಸ್. ಶೆಟ್ಟಿ, ಉಪಾಧ್ಯಕ್ಷ ಹಾಲಾಡಿ ನಾಗರಾಜ ಶೆಟ್ಟಿ, ಪ್ರಮುಖರಾದ ಸಂಪಿಗೇಡಿ ಸಂಜೀವ ಶೆಟ್ಟಿ, ಟ್ರಸ್ಟ್‌ನ ಪದಾಧಿಕಾರಿಗಳಿದ್ದರು. ದಾಮೋದರ ಶರ್ಮಾ ನಿರೂಪಿಸಿ, ವಂದಿಸಿದರು.
ಸಮಾಜದಲ್ಲಿ ಉಳ್ಳವರಿಂದ ತುಳಿತಕ್ಕೊಳಗಾಗಿ ದುರ್ಬಲರೆಂದು ಗುರುತಿಸಿಕೊಂಡ ಕೊರಗ ಸಮುದಾಯ ಮುಂದಕ್ಕೆ ಬರಬೇಕು ಎಂಬುದು ಗೃಹ ನಿರ್ಮಾಣದ ಉದ್ದೇಶ. ಈಗಾಗಾಲೇ ಜನ್ನಾಡಿಯಲ್ಲಿ 14 ಮನೆ ನಿರ್ಮಿಸಿಕೊಟ್ಟಿದ್ದು ಎರಡನೇ ಹಂತದಲ್ಲಿ ಉಳ್ಳೂರು ಕೊರಗ ಕಾಲನಿಯಲ್ಲಿ 14 ಮನೆಗಳನ್ನು 2.5 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತದೆ. ನಮ್ಮ ಟ್ರಸ್ಟ್ ನಡೆಸುವ ಕಾರ್ಯದಲ್ಲಿ ಯಾವುದೇ ಮದ್ಯವರ್ತಿಗಳು, ಹಸ್ತಕ್ಷೇಪವಿಲ್ಲದೆ ಫಲಾನುಭವಿಗಳಿಗೆ ನೇರವಾಗಿ ಅನುಕೂಲ ಕಲ್ಪಿಸಲಾಗುತ್ತಿದೆ.-ಡಾ. ಎಚ್.ಎಸ್ ಶೆಟ್ಟಿ (ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ)
Comments are closed.