ಮೆಕ್ಕಾ: ಪವಿತ್ರ ಮೆಕ್ಕಾ ಮಸೀದಿಯಲ್ಲಿ ನಮಾಜ್ ವೇಳೆ ಕಣ್ಣು ಬಂತು ಎಂದು ಹೇಳಿ ವಿಶ್ವಾದ್ಯಂತ ಸುದ್ದಿಗೆ ಗ್ರಾಸವಾಗಿದ್ದ ದೃಷ್ಟಿಹೀನ ವ್ಯಕ್ತಿಯ ಅಸಲೀಯತ್ತು ಇದೀಗ ಬಯಲಾಗಿದ್ದು, ಅಸಲಿಗೆ ಆತ ದೃಷ್ಟಿ ಹೀನನೇ ಅಲ್ಲ ಎಂದು ಕೆಲವರು ಪತ್ತೆ ಮಾಡಿದ್ದಾರೆ.
ರಂಜಾನ್ ಪ್ರಯಕ್ತ ಪವಿತ್ರಾ ಮೆಕ್ಕಾದಲ್ಲಿ ಉಪವಾಸ ಆರಂಭವಾಗಿದ್ದು, ನಿತ್ಯ ಲಕ್ಷಾಂತರ ಮಂದಿ ನಮಾಜ್ ನಲ್ಲಿ ಪಾಲ್ಗೊಳ್ಳುತ್ತಾರೆ. ಹೀಗೆ ರಂಜಾನ್ ಆರಂಭವಾದ ಮೊದಲ ದಿನದಂದು ಈಜಿಪ್ಟ್ ಮೂಲದವನು ಎಂದು ಹೇಳಲಾಗುತ್ತಿದ್ದ ವ್ಯಕ್ತಿಯೊಬ್ಬ ನಮಾಜ್ ಬಳಿಕ ಇದ್ದಕ್ಕಿದ್ದಂತೆಯೇ ತನಗೆ ದೃಷ್ಟಿ ಬಂತು ಎಂದು ಕೂಗಿಕೊಂಡಿದ್ದಾನೆ. ಇದು ದೇವರ ಪವಾಡ ಎಂದು ಕೂಗಿದ ಆತ, ದೇವರಿಗೆ ಧನ್ಯವಾದ ಹೇಳಿದ್ದ. ಅಲ್ಲದೆ ಈ ಬಗ್ಗೆ ಆತನ ಮಗ ಎಂದು ಹೇಳಿದ್ದ ವ್ಯಕ್ತಿ ಕೂಡ ತನ್ನ ತಂದೆ ದೃಷ್ಟಿ ಹೀನ ಎಂದು ವಿವಿಧ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದ. ಈ ವಿಡಿಯೋ ವಿಶ್ವಾದ್ಯಂತ ಕಾಡ್ಗಿಚ್ಚಿನಂತೆ ಹಬ್ಬಿತ್ತು.
ಕೆಲ ಮಾಧ್ಯಮಗಳಂತೂ ಈ ಬಗ್ಗೆ ವರದಿ ಬರೆದು ಮೆಕ್ಕಾದ ಪವಾಡ ಎಂದು ಹೇಳಿದ್ದವು. ಆದರೆ ಇದೀಗ ಆ ಪವಾಡದ ಹಿಂದಿನ ಅಸಲೀಯತ್ತು ಬಯಲಾಗಿದ್ದು, ಅಸಲಿಗೆ ಅಂದು ತನಗೆ ದೃಷ್ಟಿ ಬಂತು ಎಂದು ಹೇಳಿದ ವ್ಯಕ್ತಿಯ ಕಣ್ಣು ಚೆನ್ನಾಗಿಯೇ ಇತ್ತು ಎಂಬ ಸತ್ಯ ಹೊರಬಿದ್ದಿದೆ. ಅಂದು ವೈರಲ್ ಆಗಿದ್ದ ವಿಡಿಯೋವನ್ನು ಸೂಕ್ಷ್ಮವಾಗಿ ಪರಿಶೀಲಿಸಿರುವ ಕೆಲ ತೀಕ್ಷ್ಣ ವೀಕ್ಷಕರು ಈ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದು, ಅಂಧ ವ್ಯಕ್ತಿಯ ಕೈಯಲ್ಲಿ ವಾಚ್ ಇದೆ. ಕಣ್ಣು ಕಾಣದ ವ್ಯಕ್ತಿ ಸಾಮಾನ್ಯ ವಾಚ್ ನಿಂದ ಹೇಗೆ ಸಮಯ ತಿಳಿದುಕೊಳ್ಳಲು ಸಾಧ್ಯ ಎಂದು ಪ್ರಶ್ನಿಸಿದ್ದಾರೆ.
ತೀಕ್ಷ್ಣ ವೀಕ್ಷಕರ ಪ್ರಶ್ನೆಗಳ ಸುರಿಮಳೆ ಎದುರಾಗುತ್ತಿದ್ದಂತೆಯೇ ಪವಾಡದ ಸುದ್ದಿ ಬರೆದಿದ್ದ ಮಾಧ್ಯಮಗಳು ಆ ಸುದ್ದಿಯನ್ನೇ ತಿರುಚಿ ಹಾಕಿವೆ. ಅಂದು ಪವಾಡ ನಡೆದಿದೆ ಎಂದು ಹೇಳಿದ್ದ ಅಂಧಹೀನ ಅಸಲಿಗೆ ದೃಷ್ಟಿ ಹೀನನೇ ಅಲ್ಲ. ಆತನ ಕಣ್ಣು ಚೆನ್ನಾಗಿಯೇ ಕಾಣುತ್ತಿತ್ತು ಎಂದು ವರದಿ ಮಾಡಿವೆ. ಆತ ವೃತ್ತಿಪರ ಜೇಬುಗಳ್ಳನಾಗಿದ್ದು, ಮೆಕ್ಕಾದಲ್ಲಿ ನೆರೆದಿದ್ದ ಅಪಾರ ಪ್ರಮಾಣದ ಮುಸ್ಲಿಂ ಬಾಧವರ ಗಮನ ಬೇರೆಡೆ ಸೆಳೆದು ಅಲ್ಲಿ ಜೇಬುಗಳ್ಳತನ ನಡೆಸಲು ಆತ ಈ ಪವಾಡದ ನಾಟಕವಾಡಿದ್ದ ಎಂದು ಪತ್ರಿಕೆಗಳು ಹೇಳಿವೆ.
ಇನ್ನು ಈ ಪ್ರಕರಣ ಮಾಧ್ಯಮಗಳಲ್ಲಿ ವ್ಯಾಪಕ ಪ್ರಚಾರ ಪಡೆಯುತ್ತಿದ್ದಂತೆಯೇ ಮೆಕ್ಕಾದ ಪ್ರವಾಸೋಧ್ಯಮ ಪೊಲೀಸರು ಜೇಬುಗಳ್ಳ ಅಪ್ಪ-ಮಗನ ವಿಚಾರಣೆ ನಡೆಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
Comments are closed.