ದಮಾಮ್ : ದಮಾಮ್ : ಅನಿವಾಸಿ ಭಾರತೀಯರ ಸಂಕಷ್ಟಗಳಿಗೆ ನಿರಂತರವಾಗಿ ಸ್ಪಂದಿಸುತ್ತಾ ಸಕ್ರಿಯ ಸಾಮಾಜಿಕ ಸೇವೆಯಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ಇಂಡಿಯನ್ ಸೋಶಿಯಲ್ ಫೋರಮ್ ಕರ್ನಾಟಕ ರಾಜ್ಯ ಸಮಿತಿಯು ಕಳೆದ ನಾಲ್ಕೈದು ತಿಂಗಳಲ್ಲಿ ಒಟ್ಟು 94 ಪ್ರಕರಣಗಳನ್ನು ಕೈಗೆತ್ತಿಕೊಂಡಿದ್ದು, ಅವುಗಳ ಪೈಕಿ 60 ಪ್ರಕರಣಗಳನ್ನು ಇತ್ಯರ್ಥಗೊಳಿಸಿದೆ. ಇವುಗಳ ಪೈಕಿ ಕಳೆದ ವಾರವೊಂದರಲ್ಲೇ ಕೈಗೆತ್ತಿಕೊಂಡು ಬಗೆಹರಿಸಿದ ಮೂರು ಪ್ರಕರಣಗಳು ಗಮನಾರ್ಹವಾದದ್ದು.
ಪ್ರಾಯೋಜಕನ ಕಿರುಕುಳ ತಾಳಲಾರದೆ ನೌಕರಿಯ ಸ್ಥಳದಿಂದ ತಪ್ಪಿಸಿಕೊಂಡು ನೆರವಿಗಾಗಿ ಅಲೆದಾಡುತ್ತಿದ್ದ ಉತ್ತರಪ್ರದೇಶ ಮೂಲದ ಯುವಕನನ್ನು ಮರಳಿ ಊರಿಗೆ ತಲುಪಿಸುವಲ್ಲಿ ಇಂಡಿಯನ್ ಸೋಶಿಯಲ್ ಫೋರಮ್ ಕರ್ನಾಟಕ ರಾಜ್ಯ- ದಮಾಮ್ ತಂಡವು ಯಶಸ್ವಿಯಾಗಿದೆ. ಸಂತ್ರಸ್ತ ಯುವಕ 25ರ ಹರೆಯದ ಗುಲ್ಜ಼ಾರ್ ಕೆಲವು ತಿಂಗಳ ಹಿಂದೆಯಷ್ಟೇ ರೂಪಾಯಿ 90000 ಮೊತ್ತವನ್ನು ಏಜೆಂಟಿಗೆ ಪಾವತಿಸಿ ದಮಾಮ್ ನಾ ಹೋಟೆಲ್ ಗೆ ವೇಟರ್ ಕೆಲಸಕ್ಕೆಂದು ಬಂದಿದ್ದನು. ಆದರೆ ಇಲ್ಲಿ ಆತನಿಗೆ ಈ ಮೊದಲು ಭರವಸೆ ನೀಡಿದ್ದ ಕೆಲಸವಾಗಲೀ, ವೇತನವಾಗಲೀ ನೀಡದೆ ಕಿರುಕುಳ ನೀಡಲಾಗಿತ್ತು. ಶೌಚಾಲಯ ಮತ್ತು ಇತರ ಶುಚಿಗೊಳಿಸುವ ಕೆಲಸವನ್ನು ನೀಡಿದ್ದಲ್ಲದೆ ದೈಹಿಕ ಹಿಂಸೆಯನ್ನೂ ಪ್ರಾಯೋಜಕನಿಂದ ಅನುಭವಿಸಬೇಕಾಯಿತು.
ಬೇರೆ ದಾರಿಕಾಣದೆ ಪ್ರಾಯೋಕನಿಂದ ತಪ್ಪಿಸಿಕೊಂಡು ಬಂದಿದ್ದ ಗುಲ್ಜಾರ್ ನನ್ನು ಪ್ರಾಯೋಜಕ ಪತ್ತೆಹಚ್ಚಿ ಮತ್ತೆ ಇನ್ನಷ್ಟು ಕಿರುಕುಳ ನೀಡಿ ಬೆದರಿಸುತ್ತಿದ್ದನು. ಎರಡನೆಯ ಬಾರಿಯೂ ಆತ ತಪ್ಪಿಸಿಕೊಂಡು ಅಪರಿಸಿತವಾಗಿರುವ ನಾಡಿನಲ್ಲಿ ಸಹಾಯ ಯಾಚಿಸುತ್ತಾ ಅಲೆದಾಡುತ್ತಿದ್ದಾಗ, ಸೋಶಿಯಲ್ ಫೋರಂ ಕಾರ್ಯಕರ್ತರಾದ ಸಂಸುದ್ದೀನ್ ಕರ್ನಿರೆ, ಅಬ್ದುಲ್ ಖಾದರ್ ಕೈಗೆ ಸಿಕ್ಕಿದ್ದು, ಬಳಿಕ ಇದರ ಪರಿಹಾರ ಮಾರ್ಗಕ್ಕಾಗಿ ಭಾರತೀಯ ರಾಯಭಾರಿ ಕಚೇರಿಯ ಮೂಲಕ ಪ್ರಾಯೋಜಕನನ್ನು ಸಂಪರ್ಕಿಸಿದರು. ಪ್ರಕರಣದ ಗಂಭೀರತೆಯನ್ನು ಪರಿಗಣಿಸಿದ ಪ್ರಾಯೋಜಕನು ನಿರ್ವಾಹವಿಲ್ಲದೆ ಯುವಕನನ್ನು ಊರಿಗೆ ಕಳುಹಿಸಿಕೊಡಲು ಬೇಕಾಗಿರುವ ದಾಖಲೆ ಪತ್ರ, ಪಾಸ್ಪೋರ್ಟ್ ಹಾಗೂ ಟಿಕೆಟನ್ನೂ ಒದಗಿಸಿದನು.
ಪರಿಹಾರಕ್ಕಾಗಿ ಕಾರ್ಯನಿರ್ವಹಿಸಿದ ಸಂಸುದ್ದೀನ್, ಜ಼ಕರಿಯಾ, ಅಬ್ದುಲ್ ಖಾದರ್ ಮುಂತಾದವರು ಸಂತ್ರಸ್ತ ಯುವಕ ಗುಲ್ಜಾರ್ ನನ್ನು ದಮಾಮ್ ವಿಮಾನ ನಿಲ್ದಾಣದವರೆಗೆ ಬೀಳ್ಕೊಟ್ಟು ಶುಭಹಾರೈಸಿದರು.
ನಕಲಿ ದಾಖಲೆ ಪ್ರಕರಣ : ನಾಸಿರ್ ಕ್ರಷ್ಣಾಪುರ ಎಂಬವರು ಸೌದಿಅರೇಬಿಯದ ಹೈಲ್ ಎಂಬಲ್ಲಿ ದುಡಿಯುತ್ತಿದ್ದು, ಅವರು ಹೊಂದಿರುವ ಇಖಾಮವು (ಗುರುತು ಪತ್ರ) ನಕಲಿ ಎಂಬುದಾಗಿ ಅವರ ಮೇಲೆ ಪ್ರಕರಣ ದಾಖಲಾಗಿತ್ತು. ಇದೊಂದು ಗಂಭೀರ ಪ್ರಕರಣವಾಗಿದ್ದು, ನೌಶಾದ್ ಕಾಟಿಪಳ್ಳ ನೇತ್ರತ್ವದಲ್ಲಿ ಪ್ರಕರಣದ ಸತ್ಯಾಸತ್ಯತೆಯನ್ನು ಅರಿಯುವುದಕ್ಕಾಗಿ ಹೈಲ್ ಮತ್ತು ದಮಾಮ್ ನ್ಯಾಯಾಲಯಗಳನ್ನು ಸಂಪರ್ಕಿಸಲಾಯಿತು. ಬಳಿಕ ನಡೆದ ತನಿಖೆಯಲ್ಲಿ ನಾಸಿರ್ ಹೊಂದಿರುವ ಇಖಾಮವು ಅಸಲಿ ಎಂಬುದು ಸಾಬೀತಾಗಿದ್ದು, ಪ್ರಕರಣವು ಸುಖಾಂತ್ಯಗೊಂಡಂತಾಗಿದೆ. ಇದೀಗ ನಾಸಿರ್ ಬೇರೊಂದು ಕಂಪೆನಿಯಲ್ಲಿ
ಒಳ್ಳೆಯ ಉದ್ಯೋಗ ಪಡೆಯುವಲ್ಲಿ ದಾರಿಯು ಸುಗಮಗೊಂಡಿದೆ. ಸಮಸ್ಯೆಗೆ ತಕ್ಷಣವೇ ಸ್ಪಂದಿಸಿದ ಸೋಶಿಯಲ್ ಫೋರಮ್ ಗೆ ನಾಸಿರ್ ಕ್ರತಜ್ವತೆ ಸಲ್ಲಿಸಿದ್ದಾರೆ.
ಭೂಮಾನಂದನ್ ಸಾವು ಪ್ರಕರಣ : ಪೈಂಟ್ ಕೆಲಸ ಮಾಡುತ್ತಿದ್ದಾಗ ಕಟ್ಟಡದಿಂದ ಬಿದ್ದು ಗಂಭೀರ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿರುವ ತೆಲಂಗಾಣ ನಿವಾಸಿ ಭೂಮಾನಂದನ್ ಎಂಬವರ ಮ್ರತದೇಹವನ್ನು ವಿಲೇವಾರಿ ಮಾಡುವ ಕಾರ್ಯವನ್ನು ಸೋಶಿಯಲ್ ಫೋರಂ ಕೈಗೆತ್ತಿಕೊಂಡಿದ್ದು, ಶೀಘ್ರದಲ್ಲೇ ಪ್ರಕರಣವು ಇತ್ಯರ್ಥವಾಗಲಿದೆ ಎಂದು ಫೋರಂ ನ ಕಮ್ಯುನಿಟಿ ವೆಲ್ಫೇರ್ ವಿಭಾಗದ ಮುಖ್ಯಸ್ಥ ನೌಶಾದ್ ಕಾಟಿಪಳ್ಳ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದೊಂದು ತೀರಾ ಅಪರೂಪದ ಪ್ರಕರಣವಾಗಿದ್ದು, ಜಟಿಲವಾಗಿದೆ. ಆದಾಗ್ಯೂ ಆಸ್ಪತ್ರೆಯ ವೈದ್ಯ ಡಾ. ಅಭಿಜಿತ್ ಅವರ ನೆರವಿನಿಂದ ದಾಖಲೆಪತ್ರಗಳನ್ನು ಸಂಗ್ರಹಿಸುವಲ್ಲಿ ಮಹತ್ವದ ಪ್ರಗತಿಯಾಗಿದೆ ಎಂದು ನೌಶಾದ್ ವಿವರಿಸಿದ್ದಾರೆ.
ಘಟನೆಯ ವಿವರ : ತೆಲಂಗಾಣ ಮೂಲದ ನಂದನ್ ತನ್ನ ಪ್ರಾಯೋಜಕನ ಕೈಕೆಳಗೆ ದುಡಿಯದೆ ವೈಯಕ್ತಿಕವಾಗಿ ಹೊರಗಡೆ ದುಡಿಯುತ್ತಿದ್ದರು. ಈ ಸಂದರ್ಭದಲ್ಲಿ ದುರಂತ ಸಂಭವಿಸಿ ಸಾವನ್ನಪ್ಪಿರುವುದರಿಂದ ಅಪರಾಧ ಪ್ರಕರಣವಾಗಿ ದಾಖಲಾಗಿ ಪ್ರಾಯೋಜಕನು ಕೂಡ ದಂಡ ಹಾಗೂ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ. ದುರಂತದ ಸುದ್ದಿ ತಿಳಿದಾಕ್ಷಣ ಪ್ರಾಯೋಜಕನು ನಂದನ್ ಮೇಲೆ ”ನಾಪತ್ತೆ” ಕೇಸು ದಾಖಲಿಸಿದ್ದು ಇದರಿಂದ ಭೂಮಾನಂದನ್ ಜೀವಂತವಿದ್ದರೂ ಸ್ವದೇಶಕ್ಕೆ ಮರಳಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಇದೀಗ ಭೂಮಾನಂದನ್ ಸಾವನ್ನಪ್ಪಿರುವುದರಿಂದ ಅವರ ಮ್ರತದೇಹವನ್ನು ಸ್ವದೇಶಕ್ಕೆ ಮರಳಿಸುವುದು ಅಥವಾ ಇಲ್ಲೇ ದಫನ ಮಾಡುವುದಾದರೂ ಹಲವು ಕಾನೂನು ನಿಯಮಗಳನ್ನು ಎದುರಿಸಬೇಕಾಗಿದೆ. ಈ ಪ್ರಕರಣವನ್ನು ಕೈಗೆತ್ತಿಕೊಂಡಿರುವ ಸೋಶಿಯಲ್ ಫೋರಮ್ ಇಲ್ಲಿನ ಕಾನೂನು ಸಲಹೆಗಾರರ ನೆರವು ಪಡೆದು ಆ ಮೂಲಕ ಪ್ರಕರಣವನ್ನು ಶೀಘ್ರವೇ ಇತ್ಯರ್ಥಗೊಳಿಸಲು ಹಗಲಿರುಳು ಶ್ರಮಿಸುತ್ತಿದೆ. ಮಾತ್ರವಲ್ಲದೆ, ಈಗಾಗಲೇಆಸ್ಪತ್ರೆಯಲ್ಲಿ ಸಾಕಷ್ಟು ಚಿಕಿತ್ಸೆಯ ಖರ್ಚು ಕೂಡಾ ಆಗಿದ್ದು, ಅದನ್ನು ಕೂಡ ಭರಿಸಬೇಕಾಗಿದೆ.
ವಿದೇಶಕ್ಕೆ ಬರುವ ಅನಿವಾಸಿ ಭಾರತೀಯರು ಸಾಕಷ್ಟು ಮುಂಜಾಗ್ರತೆ ವಹಿಸಿ ತಮ್ಮ ಉದ್ಯೋಗ ಮತ್ತು ಕಂಪೆನಿಯ ಬಗ್ಗೆ ನಿಖರ ಮಾಹಿತಿಯನ್ನು ಪಡೆದು ತೀರ್ಮಾನ ತೆಗೆದುಕೊಳ್ಳುವಂತೆ ಸೋಶಿಯಲ್ ಫೋರಮ್ ಅನಿವಾಸಿ ಭಾರತೀಯರಲ್ಲಿ ವಿನಂತಿಸುತ್ತಿದೆ.
ತುರ್ತು ಚಿಕಿತ್ಸೆಗೆ ನೆರವು : ದಮಾಮ್ ಸಮೀಪದ ಕುದ್ರಿಯಾ ಎಂಬಲ್ಲಿ ಡೆಂಟಿಂಗ್ ಕೆಲಸ ಮಾಡುತ್ತಿದ್ದ ಕಂದಾವರ ನಿವಾಸಿ ಅಜೀಜ್ ಎಂಬವರ ತುರ್ತು ಚಿಕಿತ್ಸೆಗೆ ಬೇಕಾದ ಎಲ್ಲ ಸೌಕರ್ಯ, ವ್ಯವಸ್ಥೆಗಳನ್ನು ಒದಗಿಸುವುದರೊಂದಿಗೆ ಹೆಚ್ಚಿನ ಚಿಕಿತ್ಸೆಗಾಗಿ ಸ್ವದೇಶಕ್ಕೆ ತಲುಪಿಸಿ, ಆಸ್ಪತ್ರೆಗೆ ದಾಖಲಿಸುವವರೆಗಿನ ನೆರವನ್ನು ಇಂಡಿಯನ್ ಸೋಶಿಯಲ್ ಫೋರಮ್ ಒದಗಿಸಿ ಸಾರ್ವತ್ರಿಕ ಶ್ಲಾಘನೆಗೆ ಪಾತ್ರವಾಗಿದೆ. ಪವಿತ್ರ ಉಮ್ರಾ ನಿರ್ವಹಿಸುತ್ತಿದ್ದ ಸಂದರ್ಭದಲ್ಲೇ ಅಜೀಜ್ ಅವರಿಗೆ ಬ್ರೈನ್ ಹೆಮೋರೆಜ್ ಕಾಣಿಸಿಕೊಂಡಿದ್ದು, ತಕ್ಷಣವೇ ಅವರನ್ನು ಮಕ್ಕಾ- ಮದೀನಾ ಆಸುಪಾಸಿನ ಆಸ್ಪತ್ರೆಗಳಿಗೆ ದಾಖಲಿಸುವ ಪ್ರಯತ್ನ ನಡೆಸಲಾಯಿತಾದರೂ ಅದು ಫಲಪ್ರದವಾಗಲಿಲ್ಲ. ಬಳಿಕ ದಮಾಮ್ ಸೆಂಟ್ರಲ್ ಆಸ್ಪತ್ರೆಯಲ್ಲಿಯೂ ತುರ್ತು ಶಸ್ತ್ರಚಿಕಿತ್ಸೆಯ ಸೌಲಭ್ಯ ಇಲ್ಲದೇ ಇದ್ದುದರಿಂದ ಕಿಂಗ್ ಫಹದ್ ಎಂಬ ದುಬಾರಿ ಆಸ್ಪತ್ರೆಗೆ ದಾಖಲಿಸಬೇಕಾಯಿತು. ಇಂತಹ ಆಸ್ಪತ್ರೆಗೆ ದಾಖಲಿಸಲು ಸೌದಿ ಪ್ರಾಯೋಜಕನ ಶಿಫಾರಸ್ಸು ಅಗತ್ಯವಿದ್ದು, ಆ ಕುರಿತ ಮಾತುಕತೆಯನ್ನು ಸೋಶಿಯಲ್ ಫೋರಮ್ ನಡೆಸಿತು. ಬ್ರೈನ್ ಹೆಮೋರೆಜ್ ನಿಂದಾಗಿ ದೇಹದ ಒಂದು ಭಾಗ ನಿರ್ಜೀವಗೊಂಡಿದ್ದು, ಶಸ್ತ್ರ ಚಿಕಿತ್ಸೆಗೊಳಗಾಗಿದ್ದ ಅಜೀಜ್ ಅವರಿಗೆ ಮುಂದಿನ ಚಿಕಿತ್ಸೆಗಾಗಿ ಸ್ವದೇಶದ ಆಸ್ಪತ್ರೆಗೆ ದಾಖಲಿಸುವುದು ಅನಿವಾರ್ಯವಾಗಿತ್ತು. ಅಲ್ಲದೆ ಸೌದಿಅರೇಬಿಯದಲ್ಲಿ ಚಿಕಿತ್ಸೆಯ ವೆಚ್ಚವೂ ದುಬಾರಿಯಾಗಿದ್ದು, ಮಲಗಿದ್ದ ಸ್ಥಿತಿಯಲ್ಲೇ ಸ್ಟ್ರೆಚರ್ ವ್ಯವಸ್ಥೆಯೊಂದಿಗೆ ನೇರವಾಗಿ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಕಳುಹಿಸಿಕೊಡಲು ಬೇಕಾದ ಎಲ್ಲ ವ್ಯವಸ್ಥೆಯನ್ನು ಸೋಶಿಯಲ್ ಫೋರಮ್ ಸೌದಿ ಪ್ರಾಯೋಜಕನ ಮೂಲಕ ಮಾಡಿಸಿದೆ.
ಮಾತ್ರವಲ್ಲದೆ ಬೆಂಗಳೂರು ವಿಮಾನ ನಿಲ್ದಾಣದಿಂದ ಮಂಗಳೂರಿನ ಅಡ್ಯಾರ್ ನಲ್ಲಿರುವ ನೆರೋಲಜಿ ಸ್ಪೆಷಲ್ ಆಸ್ಪತ್ರೆಗೆ ದಾಖಲಿಸುವುದಕ್ಕಾಗಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಆಂಬುಲೆನ್ಸ್ ವ್ಯವಸ್ಥೆಯನ್ನು ಮೊದಲೇ ಮಾತುಕತೆ ನಡೆಸಿ ಸಿದ್ಧಗೊಳಿಸಲಾಗಿತ್ತು. ಇದೀಗ ಖ್ಯಾತ ನರರೋಗ ವೈದ್ಯ ಡಾ. ರಾಜೇಶ್ ಶೆಟ್ಟಿ ರವರಿಂದ ಚಿಕಿತ್ಸೆ ಪಡೆಯುತ್ತಿರುವ ಅಜೀಜ್ ಅವರು ಚೇತರಿಸಿಕೊಳ್ಳುತ್ತಿದ್ದಾರೆ. ಅವರು ಶೀಘ್ರವೇ ಗುಣಮುಖರಾಗಲಿ ಎಂದು ಇಂಡಿಯನ್ ಸೋಶಿಯಲ್ ಫೋರಮ್ ಕರ್ನಾಟಕ ರಾಜ್ಯ- ದಮಾಮ್ ತಂಡವು ಹಾರೈಸುತ್ತದೆ.
ವರದಿ: ಸಂಸುದ್ದೀನ್ ಕರ್ನಿರೆ, ದಮಾಮ್
Comments are closed.