ಬಹರೈನ್ ; ಕನ್ನಡಿಗರು ,ತುಳುವರು ಸಾಹಸಿಗರು ,ಸಾಧಕರು ,ಹೃದಯವಂತರು ಎನ್ನುವುದರಲ್ಲಿ ಎರಡು ಮಾತಿಲ್ಲ. ದೇಶ ಬಿಟ್ಟು ಬದುಕನ್ನು ಕಟ್ಟಿಕೊಳ್ಳಲು ಯಾವ ನೆಲಕ್ಕೆ ಕಾಲಿಟ್ಟರೂ ಅಲ್ಲಿ ಬದುಕನ್ನು ಕಟ್ಟಿಕೊಳ್ಳುವುದರ ಜೊತೆಗೆ ವಿವಿಧ ರಂಗಗಳಲ್ಲಿ ವಿಶೇಷ ಸಾಧನೆ ಮಾಡಿ ತಮ್ಮತನವನ್ನು ಮೆರೆಯುತ್ತಾರೆ . ಅದಕ್ಕೆ ಉತ್ತಮ ನಿದರ್ಶನ ಕೊಲ್ಲಿಯ ತುಳುವ, ಕನ್ನಡಿಗ ಸಮುದಾಯದವರು . ಹೊಟ್ಟೆಪಾಡಿಗಾಗಿ ,ತಮ್ಮನ್ನು ಅವಲಂಬಿಸಿರುವ ಕುಟುಂಬಕ್ಕಾಗಿ ತಾಯ್ನಾಡನ್ನು ಬಿಟ್ಟು ಸಾವಿರಾರು ಮೈಲು ದೂರ ಬದುಕನ್ನು ಕಟ್ಟಿಕೊಳ್ಳಲು ಬಂದು ಬದುಕನ್ನು ಕಟ್ಟಿಕೊಳ್ಳುವುದರ ಜೊತೆಗೆ ತಮ್ಮ ಮಣ್ಣು ,ಸಂಸ್ಕ್ರತಿ ,ಸಂಪ್ರದಾಯಗಳನ್ನೂ ಮರೆಯದೆ ಆ ನೆಲದಲ್ಲೂ ಕೂಡ ತಮ್ಮ ಭಾಷೆ ,ಕಲೆ,ಸಂಸ್ಕ್ರತಿಯನ್ನು ಉಳಿಸಿ, ಬೆಳೆಸಿ ,ಪಸರಿಸುವುದರಲ್ಲಿ ಕೊಲ್ಲಿಯ ತುಳುವ,ಕನ್ನಡಿಗ ಸಮುದಾಯ ಯಾವತ್ತೂ ಮುಂಚೂಣಿಯಲ್ಲಿರುತ್ತದೆ ಎಂದರೆ ಖಂಡಿತವಾಗಿ ಉತ್ಪ್ರೇಕ್ಷೆಯಾಗಲಿಕ್ಕಿಲ್ಲ .
ಇದಕ್ಕೆ ಕೊಲ್ಲಿಯ ಸುಂದರ ದ್ವೀಪ ರಾಷ್ಟ್ರವಾದ ಬಹರೈನ್ ಕೂಡ ಹೊರತಾಗಿಲ್ಲ . ಇಲ್ಲಿ ನಿರಂತರವಾಗಿ ಕನ್ನಡ ,ತುಳು ಸಾಂಸ್ಕ್ರತಿಕ ಕಾರ್ಯಕ್ರಮಗಳು ಜರುಗುತ್ತಾ ನಮ್ಮ ನಾಡಿನ ಕಲೆ,ಭಾಷೆ ,ಸಂಸ್ಕ್ರತಿಗಳು ಹುಲುಸಾಗಿ ಬೆಳೆಯುತ್ತಿದೆ . ದ್ವೀಪದ ಕನ್ನಡಿಗ,ತುಳುವ ಸಮುದಾಯಕ್ಕೆ ಭಾಷೆ,ಮಣ್ಣು ,ಕಲೆಯ ಬಗೆಗಿರುವ ತುಡಿತ ,ಅಭಿಮಾನ ,ಪ್ರೀತಿ ,ಪ್ರೋತ್ಸಾಹ ಅನನ್ಯ . ಇದರಿಂದಾಗಿಯೇ ದ್ವೀಪದಲ್ಲಿ ಕಳೆದ ಅನೇಕ ದಶಕಗಳಿಂದ ಒಂದಲ್ಲ ಒಂದು ಸಾಂಸ್ಕ್ರತಿಕ ಕಾರ್ಯುಕ್ರಮ ಯಶಸ್ವಿಯಾಗಿ ಜರುಗುತ್ತಿರುತ್ತದೆ .
ಇದೀಗ ಮತ್ತೊಮ್ಮೆ ದ್ವೀಪದಲ್ಲಿ ಎರಡು ದಿನಗಳ ಬ್ರಹತ್ ತುಳು ಸಾಂಸ್ಕ್ರತಿಕ ಕಾರ್ಯಕ್ರಮಕ್ಕೆ ವೇದಿಕೆ ಸಿದ್ಧವಾಗುತ್ತಿದೆ . ದ್ವೀಪದ ಸಂಘಟಕರಾದ ಶ್ರೀ ಕರ್ಮಾರ್ ನಾಗೇಶ್ ಶೆಟ್ಟಿ ಯವರು ಅವರ ಕನಸಿನ ಕೂಸಾದ “ರೋಯಲ್ ತುಳು ಕೂಟ ಫೌಂಡೇಶನ್ ಬಹರೇನ್ “ನ ಆಶ್ರಯದಲ್ಲಿ ಎರಡು ದಿನಗಳ ” ತುಳು ಪರ್ಬ” ವನ್ನು ಇದೆ ಅಕ್ಟೋಬರ್ ತಿಂಗಳ 27 ಹಾಗು 28 ರಂದು ಸ್ಥಳೀಯ ಮನಾಮದಲ್ಲಿರುವ ಇಂಡಿಯನ್ ಕ್ಲಬ್ಬಿನ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದು ಬಹರೈನ್ ನ ತುಳು ಪ್ರೇಮಿಗಳಿಗೆ ಇದೊಂದು ಎರಡು ದಿನಗಳ ಸಾಂಸ್ಕ್ರತಿಕ ಜಾತ್ರೆಯಾಗಿ ಮನರಂಜನೆ ನೀಡುವುದರಲ್ಲಿ ಎರಡು ಮಾತಿಲ್ಲ .
ಅಕ್ಟೋಬರ್ 27
ಇದೆ ಅಕ್ಟೋಬರ್ ತಿಂಗಳ 27ರಂದು ಸಂಜೆ ಸರಿಯಾಗಿ 6ಘಂಟೆಗೆ ನಾಡಿನ ಖ್ಯಾತ ಪ್ರಸಂಗಕರ್ತ ಡಿ . ಮನೋಹರ್ ಕುಮಾರ್ ವಿರಚಿತ “ಗೆಜ್ಜೆ ಪೂಜೆ ” ಎನ್ನುವ ಜನಪ್ರಿಯ ತುಳು ಯಕ್ಷಗಾನ ಪ್ರಸಂಗ ಪ್ರದರ್ಶನಗೊಳ್ಳಲಿದೆ . ಇದರ ನಿರ್ದೇಶನ ಖ್ಯಾತ ಕಲಾವಿದ ಶ್ರೀ ದೀಪಕ ಪೇಜಾವರ ರವರದ್ದಾಗಿದ್ದರೆ ಶ್ರೀ ದೂಮಣ್ಣ ರೈ ಯವರ ನಿರ್ವಹಣೆ ಇದಕ್ಕಿದೆ . ನಾಡಿನ ಖ್ಯಾತ ಭಾಗವತರಾದ ಶ್ರೀ ಗಿರೀಶ್ ರೈ ಕಕ್ಕೆಪದವು ರವರು ಭಾಗವತರಾಗಿ ತಮ್ಮ ಕಂಠಮಾಧುರ್ಯದಿಂದ ದ್ವೀಪದ ಯಕ್ಷ ಪ್ರೇಮಿಗಳನ್ನು ರಂಜಿಸಲಿದ್ದರೆ ,ಚೆಂಡೆಯಲ್ಲಿ ಶ್ರೀ ದೇಲಂತ ಮಜಲು ಸುಬ್ರಮಣ್ಯ ಭಟ್ ,ಮದ್ದಳೆಯಲ್ಲಿ ಶ್ರೀ ವಿನಯ ಆಚಾರ್ಯ ,ನಾಗನ ಪಾತ್ರದಲ್ಲಿ ಡಿ ಮನೋಹರ್ ಕುಮಾರ್ ,ಕೀರ್ತಿಯ ಪಾತ್ರದಲ್ಲಿ ಸರಪಾಡಿ ಅಶೋಕ್ ಶೆಟ್ಟಿ ,ತುಳಸಿಯ ಪಾತ್ರದಲ್ಲಿ ದೀಪಕ್ ರಾವ್ ಪೇಜಾವರ ಇವರ ಜೊತೆಗೆ ದ್ವೀಪದ ಹವ್ಯಾಸಿ ಯಕ್ಷಗಾನ ಕಲಾವಿದರುಗಳು ರಂಗದಲ್ಲಿ ತಮ್ಮ ಪ್ರತಿಭೆಯನ್ನು ಮೆರೆದು ಯಕ್ಷ ಪ್ರೇಮಿಗಳ ಮನಸೂರೆಗೊಳ್ಳಲಿದ್ದಾರೆ .
ಅಕ್ಟೋಬರ್ 28
ಮರುದಿನ ಅಂದರೆ ಅಕ್ಟೋಬರ್ 28 ದ್ವೀಪದ ನಾಟಕ ಪ್ರೇಮಿಗಳು ಕಾತರದಿಂದ ಕಾಯುತ್ತಿರುವ ದಿನ . ಸಂಜೆ ಸರಿಯಾಗಿ 6ಘಂಟೆಗೆ ತುಳು ರಂಗಭೂಮಿಯಲ್ಲಿ ದಾಖಲೆ ಬರೆದು ,ಸಂಚಲನ ಸೃಷ್ಟಿಸಿದ ಜನಪ್ರಿಯ ಸಾಮಾಜಿಕ ತುಳು ನಾಟಕ “ಬಯ್ಯಮಲ್ಲಿಗೆ ” ಪ್ರದರ್ಶನಗೊಳ್ಳಲಿರುವುದು . ಶ್ರೀ ಸಂಜೀವ ದಂಡಕೇರಿ ವಿರಚಿತ ಈ ನಾಟಕವನ್ನು ದ್ವೀಪದ ಪ್ರತಿಭಾವಂತ ನಿರ್ದೇಶಕ ಮೋಹನದಾಸ್ ರೈ ಎರಂಬು ರವರು ನಿರ್ದೇಶಿಸಲಿದ್ದಾರೆ . ಶ್ರೀಗಳಾದ ಯಕ್ಷಿತ್ ಶೆಟ್ಟಿ ಹಾಗು ದಿವ್ಯರಾಜ್ ರಾಯ್ ಯವರ ಸಂಗೀತ ಈ ನಾಟಕಕ್ಕಿದೆ . ದ್ವೀಪದ ಹವ್ಯಾಸಿ ನಾಟಕ ಕಲಾವಿದರುಗಳ ಜೊತೆಗೆ ಈ ನಾಟಕದ ಪ್ರಧಾನ ಪಾತ್ರವಾದ ದುರಂತ ನಾಯಕಿ ಶಾಂತಿಯ ಪಾತ್ರದಲ್ಲಿ ತುಳು ರಂಗಭೂಮಿಯ ಜನಪ್ರಿಯ ಪ್ರತಿಭಾವಂತ ನಟ ಸುರೇಶ ಜೋಡುಕಲ್ ರವರು ಕಾಣಿಸಿಕೊಳ್ಳಲಿದ್ದಾರೆ .
ಈ ಎರಡೂ ಕಾರ್ಯಕ್ರಮಗಳಿಗೆ ದ್ವೀಪದ ಕಲಾಪ್ರೇಮಿಗಳಿಗೆ ಮುಕ್ತ ಪ್ರವೇಶವಿದ್ದು ,ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಸಂಘಟಕರಾದ ಶ್ರೀ ನಾಗೇಶ್ ಶೆಟ್ಟಿ ಯವರು ಕರೆ ನೀಡಿದ್ದಾರೆ . ಕಾರ್ಯಕ್ರಮದ ಬಗೆಗಿನ ಹೆಚ್ಚಿನ ವಿವರಗಳಿಗಳಿಗಾಗಿ ಸಂಘಟಕರಾದ ಶ್ರೀ ನಾಗೇಶ್ ಶೆಟ್ಟಿ ಯವರನ್ನು ದೂರವಾಣಿ ಸಂಖ್ಯೆ 66900222 ಮುಖೇನ ಸಂಪರ್ಕಿಸಬಹುದು .
ವರದಿ- ಕಮಲಾಕ್ಷ ಅಮೀನ್
Comments are closed.