ಗಲ್ಫ್

ವಿಜೃಂಭಣೆಯಿಂದ ಜರಗಿದ ದುಬೈ ದೇವಾಡಿಗ ಫ್ಯಾಮಿಲಿಯ ಬೆಳ್ಳಿಹಬ್ಬ; ಮೋಡಿ ಮಾಡಿದ ಸಂಗೀತ – ನೃತ್ಯ ವೈಭವ

Pinterest LinkedIn Tumblr

Photo: Uday H.K. Dubai

ದುಬೈ: ಸಮುದಾಯ ಸೇವೆಯಲ್ಲಿ ಮುಂಚೂಣಿಯಲ್ಲಿರುವ ದೇವಾಡಿಗ ಫ್ಯಾಮಿಲಿ ದುಬೈ ಇದರ 25 ನೇ ವರ್ಷದ ಬೆಳ್ಳಿಹಬ್ಬ ಕಾರ್ಯಕ್ರಮ ಬಹಳ ವಿಜೃಂಭಣೆಯಿಂದ ನಡೆಯಿತು.

ದುಬೈ ದೇರಾದಲ್ಲಿರುವ ಕ್ರೌನ್ ಪ್ಲಾಜಾ ಹೋಟೆಲಿನಲ್ಲಿ ಶುಕ್ರವಾರ ನಡೆದ ಅದ್ದೂರಿ ಸಮಾರಂಭಕ್ಕೆ ಗಣ್ಯಾತಿಗಣ್ಯರು ಸಾಕ್ಷಿಯಾದರು.

ಸಂಗೀತ ರಸಮಂಜರಿ, ವಿವಿಧ ರೀತಿಯ ಡ್ಯಾನ್ಸ್, ಮನೋರಂಜನಾ ಕಾರ್ಯಕ್ರಮದ ಜೊತೆಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಗುರುತಿಸಿ ಸನ್ಮಾನಿಸಲಾಯಿತು.

ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಎನ್.ಎಮ್.ಸಿ ಮತ್ತು ಯು.ಎ.ಇ ಎಕ್ಸಚೇಂಜ್‍ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಬಿ.ಆರ್.ಶೆಟ್ಟಿ ಶುಭ ಹಾರೈಸಿ ಮಾತನಾಡಿ, ನಾವು ಯಾವುದೇ ಸಾಧನೆ ಮಾಡಬೇಕಿದ್ದರೆ ಅದಕ್ಕೊಂದು ಗುರಿ ಇರಬೇಕು. ಆ ಗುರಿ ಮುಟ್ಟುವವರೆಗೆ ನಮ್ಮ ಛಲವನ್ನು ಬಿಡದೆ ಸತತ ಪ್ರಯತ್ನ ಮಾಡಬೇಕು. ಆಗ ನಮ್ಮ ಸಾಧನೆ ಈಡೇರುತ್ತದೆ ಎಂದರು.

ದೇವಾಡಿಗ ಫ್ಯಾಮಿಲಿಯ ಮುಖಂಡ ಹರೀಶ್ ಶೇರಿಗಾರ್ ಬಗ್ಗೆ ಗುಣಗಾನ ಮಾಡಿದ ಬಿ.ಆರ್.ಶೆಟ್ಟಿ, ಒಂದೊಳ್ಳೆಯ ಸಂದೇಶ ನೀಡುವಂಥ ‘ಮಾರ್ಚ್-22’ ಸಿನೆಮಾ ಮಾಡಿ ಸಿನೆಮಾ ಜಗತ್ತಿಗೆ ಎಂಟ್ರಿ ನೀಡಿದ್ದಾರೆ. ಅವರ ಸಿನೆಮಾದಲ್ಲಿ ನಾನು ವಿಶೇಷ ಪಾತ್ರವನ್ನು ನಿರ್ವಹಿಸಿದ್ದೇನೆ. ನಾನು ನಿರ್ವಹಿಸಿದ ಹಾಡಿಗೆ ರಾಷ್ರ್ಟ ಪ್ರಶಸ್ತಿ ಬಂದಿರುವುದು ನನಗೆ ಅತೀವ ಸಂತಸವನ್ನು ತಂದಿದೆ. ಹರೀಶ್ ಶೇರಿಗಾರ್ ಮಾಡುತ್ತಿರುವ ಸಮುದಾಯದ ಸೇವೆ, ಸಮಾಜಸೇವೆ ಅನನ್ಯ ಎಂದು ಕೊಂಡಾಡಿದರು.

ಅತಿಥಿ ನಾರಾಯಣ ದೇವಾಡಿಗ ಮಾತನಾಡಿ, ದೇವಾಡಿಗ ಸಮುದಾಯದ ಬಾರಕೂರು ಶ್ರೀ ಏಕನಾಥೇಶ್ವರಿ ದೇವಾಸ್ಥಾನವನ್ನು ಕೇವಲ ಎರಡೇ ವರ್ಷದಲ್ಲಿ ನಿರ್ಮಿಸಲಾಗಿದ್ದು, ಇದಕ್ಕೆ ದುಬೈ ದೇವಾಡಿಗ ಫ್ಯಾಮಿಲಿಯ ಸಹಾಯ-ಸಹಕಾರವನ್ನು ಅತೀ ಮಹತ್ವದ್ದಾಗಿದೆ ಎಂದು ಸ್ಮರಿಸಿದರು.

ಅತಿಥಿ ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷ ಸರ್ವೋತ್ತಮ ಶೆಟ್ಟಿ ಮಾತನಾಡಿ, ದೇವಾಡಿಗ ಫ್ಯಾಮಿಲಿ ಇಂದು ಈ ಮಟ್ಟಕ್ಕೆ ಬೆಳೆದಿದ್ದರೆ ಅದಕ್ಕೆ ಭದ್ರ ಬುನಾದಿ ಹಾಕಿಕೊಟ್ಟವರು ಹರೀಶ್ ಶೇರಿಗಾರ್. ಅವರ ಪರಿಶ್ರಮ ಕೊಡುಗೆ ಅಪಾರ. ಅದನ್ನು ದಿನೇಶ್ ದೇವಾಡಿಗ ಮುಂದುವರಿಸಿಕೊಂಡು ಹೋಗುವಂತೆ ಸಲಹೆ ನೀಡಿದರು.

ಇನ್ನೋರ್ವ ಅತಿಥಿ ಹೆಚ್.ಮೋಹನ್ ದಾಸ್ ತವರು ನಾಡಿನ ಎಲ್ಲ ದೇವಾಡಿಗ ಸಂಘದ ಪರವಾಗಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಅತಿಥಿಯಾಗಿ ಆಗಮಿಸಿದ ಬಿ.ಜಿ.ಮೋಹನ್ ದಾಸ್ ಮಾತನಾಡಿ, ದುಬೈಯಲ್ಲಿ ಉದ್ಯಮಿಯಾಗಿರುವ ದೇವಾಡಿಗ ಸಮುದಾಯದ ದಿನೇಶ್ ಚಂದ್ರಶೇಖರ್ ದೇವಾಡಿಗರಿಗೆ ಈ ಬಾರಿ ಪ್ರತಿಷ್ಠಿತ ಆರ್ಯಭಟ ಇಂಟೆರ್ ನ್ಯಾಷನಲ್ ಅವಾರ್ಡ್ ಸಿಕ್ಕಿರುವುದಕ್ಕೆ ಶುಭ ಹಾರೈಸಿದರು.

ದೇವಾಡಿಗ ಫ್ಯಾಮಿಲಿ ಬೆಳ್ಳಿ ಹಬ್ಬ ಆಚರಿಸುತ್ತಿರುವ ಸವಿನೆನಪಿಗಾಗಿ ಪ್ರಕಟಿಸಲಾದ ಸ್ಮರಣ ಸಂಚಿಕೆ ‘ಸಂಗಮ’ವನ್ನು ಡಾ.ಬಿ.ಆರ್.ಶೆಟ್ಟಿ ಅನಾವರಣಗೊಳಿಸಿದರು.

ಇದೇ ಸಂದರ್ಭದಲ್ಲಿ ದೇವಾಡಿಗ ಟಾಡ್.ಕಾಮ್’ನ ನೂತನ ಲೋಗೋವನ್ನು ಕೂಡಾ ಗಣ್ಯರ ಸಮ್ಮುಖದಲ್ಲಿ ಬಿಡುಗಡೆಗೊಳಿಸಲಾಯಿತು.

ದೇವಾಡಿಗ ಫ್ಯಾಮಿಲಿಯ ಅಧ್ಯಕ್ಷ ದಿನೇಶ್ ದೇವಾಡಿಗ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯದರ್ಶಿ ಲಕ್ಷ್ಮೀದಾಸ್ ಸ್ವಾಗತಿಸಿದರು.

ಗೌರವ ಸನ್ಮಾನ …

ದೇವಾಡಿಗೆ ಫ್ಯಾಮಿಲಿಗೆ ತಮ್ಮದೇ ಆದ ಕೊಡುಗೆ ನೀಡಿದ ಗಣ್ಯರನ್ನು ಈ ಸಂದರ್ಭದಲ್ಲಿ ಗೌರವಿಸಿ ಸನ್ಮಾನಿಸಲಾಯಿತು. ದಿನಕರ ಅತ್ತಾವರ ಹಾಗು ಅವರ ಧರ್ಮಪತ್ನಿ, ಬಿ.ಜಿ.ಮೋಹನ್ ದಾಸ್ ಹಾಗು ಅವರ ಧರ್ಮಪತ್ನಿ, ನಾರಾಯಣ ಎಂ.ದೇವಾಡಿಗ ಹಾಗು ಅವರ ಧರ್ಮಪತ್ನಿ, ಮಾಜಿ ಅಧ್ಯಕ್ಷ ಹರೀಶ್ ಶೇರಿಗಾರ್ ಹಾಗು ಅವರ ಧರ್ಮಪತ್ನಿ ಶರ್ಮಿಳಾ ಶೇರಿಗಾರ್, ದಿನೇಶ್ ಚಂದ್ರಶೇಖರ್ ದೇವಾಡಿಗ ಹಾಗು ಅವರ ಧರ್ಮಪತ್ನಿ, ರಮೇಶ್ ದೇವಾಡಿಗ ಹಾಗು ಅವರ ಧರ್ಮಪತ್ನಿ, ಭಾಸ್ಕರ್ ಶೇರಿಗಾರ್, ಸಿಂಧು ಯಸ್.ದೇವಾಡಿಗ, ಪದ್ಮಾವಲ್ಲಿ ಸಂಜಯ್ ಅವರನ್ನು ಈ ಸಂದರ್ಭದಲ್ಲಿ ಗೌರವಿಸಿ, ಸನ್ಮಾನಿಸಲಾಯಿತು.

ಸಮಾರಂಭದಲ್ಲಿ ಅತಿಥಿಗಳಾಗಿ ಯುಎಇ ಎಕ್ಸಚೇಂಜ್‍ನ ಸುಧೀರ್ ಕುಮಾರ್ ಶೆಟ್ಟಿ, ಫೋರ್ಚುನ್ ಗ್ರೂಪ್ ಆಫ್ ಹೋಟೆಲ್ಸ್,ನ ಪ್ರವೀಣ್ ಕುಮಾರ್ ಶೆಟ್ಟಿ, ಲೇಖಕ ಗಣೇಶ್ ರೈ, ಬಿಲ್ಲವಾಸ್ ದುಬೈಯ ಸತೀಶ್ ಪೂಜಾರಿ, ರಾಮಚಂದ್ರ ಹೆಗ್ಡೆ, ಮಧುರ್, ದೇವಾಡಿಗ ಫ್ಯಾಮಿಲಿಯ ವಾಮನ್ ಮರೋಳಿ ಹಾಗು ಅವರ ಧರ್ಮಪತ್ನಿ, ದಿನೇಶ್ ಕದ್ರಿ ಹಾಗು ಅವರ ಧರ್ಮಪತ್ನಿ, ಗೋಪಾಲ ಮೊಯಿಲಿ ಹಾಗು ಅವರ ಧರ್ಮಪತ್ನಿ, ವಾಸು ದೇವಾಡಿಗ ಹಾಗು ಅವರ ಧರ್ಮಪತ್ನಿ, ಸುಬ್ಬ ಗೋವಿಂದ ದೇವಾಡಿಗ ಹಾಗು ಅವರ ಧರ್ಮಪತ್ನಿ, ಹೆಚ್.ಮೋಹನ್ ದಾಸ್, ಅಣ್ಣಯ್ಯ ಶೇರಿಗಾರ್, ರವಿ ದೇವಾಡಿಗ, ಜನಾರ್ಧನ್ ದೇವಾಡಿಗ ಭಾಗವಹಿಸಿದ್ದರು.

ರಾಜಗೋಪಾಲ್ ಮತ್ತು ಅವರ ತಂಡದವರ ಸಂಗೀತ ನೆರೆದವರನ್ನು ಆನಂದಿಸುವಂತೆ ಮಾಡಿತು. ಯುಎಇಯ ಹೆಸರಾಂತ ಗಾಯಕ, ಸಿನೆಮಾ ನಿರ್ಮಾಪಕರಾಗಿರುವ ಹರೀಶ್ ಶೇರಿಗಾರ್, ಸುರೇಶ ದೇವಾಡಿಗ, ನಿಮಿಕ ರತ್ನಾಕರ್, ಪ್ರಮೋದ್ ಕುಮಾರ್, ಸುಕನ್ಯಾ, ಯುವರಾಜ್, ಶಾಹಿದ್ ಹಾಗು ಅಮೋಘ ಅವರ ಹಿಂದಿ, ಕನ್ನಡ, ತುಳು ಹಾಡು ಎಲ್ಲರ ಮನಸೂರೆಗೊಂಡಿತು.

ಹರಿದಾಸ್ ಡೋಗ್ರಾ ಹಾಗು ಅವರ ತಂಡದವರ ನಡೆಸಿಕೊಟ್ಟ ಸ್ಯಾಕ್ಸಾಫೋನ್ ವಾದನ ಎಲ್ಲರ ಗಮನ ಸೆಳೆಯಿತು.

ಜೊತೆಗೆ ಪ್ರಸನ್ನರ ಜಸ್ಟ್ ಡಾನ್ಸ್ ತಂಡ ಹಾಗು ಸಿಂಫೊನಿ ತಂಡದವರ ನೇತೃತ್ವದಲ್ಲಿ ದೇವಾಡಿಗ ಸಮುದಾಯದ ಸದಸ್ಯರು, ಮಕ್ಕಳು ನಡೆಸಿಕೊಟ್ಟ ಡ್ಯಾನ್ಸ್ ಎಲ್ಲರನ್ನು ಮನರಂಜಿಸಿತು.

ಕನ್ನಡ ಸಿನೆಮಾ ತಾರೆ, ಗಾಯಕಿ ಆಗಿರುವ ನಿಮಿಕ ರತ್ನಾಕರ್ ಹಾಗು ನಟ ವಿ.ಜೆ.ವಿನೀತ್ ಕಾರ್ಯಕ್ರಮ ನಿರೂಪಿಸಿದರು. ನಿಮಿಕ ರತ್ನಾಕರ್ ನಟಿಸಿರುವ ರಾಮಧಾನ್ಯ ಕನ್ನಡ ಚಿತ್ರ ಮೇ ತಿಂಗಳಲ್ಲಿ ಬಿಡುಗಡೆಯಾಗಲಿದ್ದು, ಇನ್ನು ಎರಡು ಸಿನೆಮಾದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಕನ್ನಡ ಹಾಗು ತುಳು ಸಿನೆಮಾಗಳಲ್ಲಿ ಹಿನ್ನೆಲೆ ಗಾಯಕಿಯಾಗಿ ಕೂಡ ಹೆಸರು ಮಾಡಿದ್ದಾರೆ ನಿಮಿಕ ರತ್ನಾಕರ್. ಅದೇ ರೀತಿ ವಿ.ಜೆ.ವಿನೀತ್ ಕೂಡ ನಟನಾಗಿದ್ದು, ಒಂದು ಮೊಟ್ಟೆ ಕಥೆ ಸೇರಿದಂತೆ ಕನ್ನಡ ಹಾಗು ತುಳು ಸಿನೆಮಾದಲ್ಲಿ ನಟಿಸಿ ಸೈ ಅನಿಸಿಕೊಂಡಿದ್ದಾರೆ.

ದೇವಾಡಿಗ ಫ್ಯಾಮಿಲಿಯ ಬಗ್ಗೆ ಒಂದಿಷ್ಟು….

1992 ರಲ್ಲಿ ಆರಂಭವಾದ ದುಬೈಯ ದೇವಾಡಿಗ ಫ್ಯಾಮಿಲಿ ನೋಡು ನೋಡುತ್ತಿದ್ದಂತೆ ದೇವಾಡಿಗರ ಒಂದು ಪ್ರಬಲ ಸಂಘಟನೆಯಾಗಿ ಹೊರಹೊಮ್ಮಿತು. ದಿವಂಗತ ಮುಚೂರ್ ಸುಂದರ್ ದೇವಾಡಿಗ ಹಾಗು ದಿವಂಗತ ಸಂಜಯ್ ದೇವಾಡಿಗರ ನೇತೃತ್ವದಲ್ಲಿ ಆರಂಭವಾದ ಈ ಸಂಘಟನೆ ಸಮುದಾಯದ ಸದಸ್ಯರೆಲ್ಲರನ್ನು ಒಂದುಗೂಡಿಸುವಲ್ಲಿ ಸಫಲವಾಯಿತು.

ಆರಂಭದ ದಿನಗಳಲ್ಲಿ ಮನೆಯಲ್ಲಿ ಒಂದೆಡೆ ಮನೆಯಲ್ಲಿ ಸೇರಿ ನಡೆಸಿಕೊಂಡು ಬರಲಾಗುತ್ತಿದ್ದ ಕಾರ್ಯಕ್ರಮವು ಸದಸ್ಯರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ 2008 ರ ವೇಳೆಗೆ ತಮ್ಮ ಕಾರ್ಯಕ್ರಮವನ್ನು ಹೋಟೆಲ್ ಸಭಾಂಗಣಕ್ಕೆ ವಿಸ್ತರಿಸಿತು.

2012 ರಲ್ಲಿ ಹರೀಶ್ ಶೇರಿಗಾರ್ ಅಧ್ಯಕ್ಷತೆಯಲ್ಲಿ ನೂತನ ಕಮಿಟಿ ರಚನೆಯಾದ ನಂತರ ದುಬೈ ದೇವಾಡಿಗ ಫ್ಯಾಮಿಲಿಯಾ ಕಾರ್ಯಚಟುವಟಿಕೆ ಗರಿಗೆದರಿತು. ಸಮುದಾಯದ ಕಾರ್ಯಕ್ರಮಗಳ ಜೊತೆಜೊತೆ ಬಡ ವಿದ್ಯಾರ್ಥಿಗಳ ನೆರವಿಗೆ ಸಹಾಯಹಸ್ತವನ್ನು ನೀಡಲು ಆರಂಭಿಸಿತು.

ಸಮುದಾಯದ ವಿದ್ಯಾರ್ಥಿಗಳಿಗೆ ಸಹಾಯ ಹಸ್ತವನ್ನು ನೀಡುವ ಉದ್ದೇಶದಿಂದ ಕರ್ನಾಟಕ ರಾಜ್ಯ ದೇವಾಡಿಗ ಸಂಘ ಮಂಗಳೂರೂ ಇದರ ನೇತೃತ್ವದಲ್ಲಿ ವಿದ್ಯಾರ್ಥಿ ವೇತನವನ್ನು ನೀಡಲು ಆರಂಭಿಸಿರುವ ದುಬೈ ದೇವಾಡಿಗ ಫ್ಯಾಮಿಲಿ, ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕಗಳಿಸಿ ಸಾಧನೆ ಮಾಡುವ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೂ ಗೌರವ -ಪ್ರಶಸ್ತಿ ನೀಡುತ್ತಿದೆ. ಈವರಗೆ ಒಟ್ಟು ಸುಮಾರು 4 ಸಾವಿರ ವಿದ್ಯಾರ್ಥಿಗಳಿಗೆ 50 ಲಕ್ಷಕ್ಕೂ ಹೆಚ್ಚು ಹಣವನ್ನು ವಿದ್ಯಾರ್ಥಿ ವೇತನವಾಗಿ ನೀಡಿ ಸಮುದಾಯದ ಏಳಿಗೆಗಾಗಿ ಹಗಲಿರುಳು ಶ್ರಮಿಸುತ್ತಿದೆ. ಜೊತೆಗೆ ಕೆಲಸವನ್ನು ಹುಡುಕಿಕೊಂಡು ಗಲ್ಫಿಗೆ ಬರುವವರಿಗೆ ಇಲ್ಲಿ ಕೆಲಸವನ್ನು ಹುಡುಕಿಕೊಟ್ಟು ಅವರ ಜೀವನಕ್ಕೂ ಒಂದು ಅಡಿಪಾಯವನ್ನು ಹಾಕಿಕೊಡುವ ಕೆಲಸ ಮಾಡುತ್ತಿದೆ. ಇದರ ಜೊತೆಗೆ ಪ್ರತಿ ವರ್ಷ ಹರೀಶ್ ಶೇರಿಗಾರ್ ಅವರು ಎಸ್ಸೆಸ್ಸೆಲ್ಸಿಯಲ್ಲಿ ಅತೀ ಹೆಚ್ಚು ಅಂಕ ಗಳಿಸುವ ವಿದ್ಯಾರ್ಥಿಗೆ ಸ್ವಂತ ಹಣದಲ್ಲಿ ಲ್ಯಾಪ್ಟಾಪ್ ಬಹುಮಾನವಾಗಿ ನೀಡಿ ಪ್ರೋತ್ಸಾಹಿಸುತ್ತ ಬಂದಿದ್ದಾರೆ. ಯುಎಇಯ ಪ್ರಬಲ ಸಂಘಟನೆಗಳಲ್ಲಿ ಒಂದಾಗಿರುವ ದುಬೈ ದೇವಾಡಿಗ ಫಾಮಿಲಿ ಸಮುದಾಯದ ಏಳಿಗೆಗಾಗಿ ಮುಂಚೂಣಿಯಲ್ಲಿದೆ.

Comments are closed.