ಅಬುಧಾಬಿ: 2016ರಲ್ಲಿ ಸೌದಿ ಅರೇಬಿಯದ ಜೆದ್ದಾದಲ್ಲಿನ ಅಮೆರಿಕ ಕಾನ್ಸುಲೇಟ್ ಸಮೀಪ ತನ್ನನ್ನು ತಾನು ಸ್ಫೋಟಿಸಿಕೊಂಡು ಮೃತಪಟ್ಟಿದ್ದ ಆತ್ಮಾಹುತಿ ದಾಳಿಕೋರನು ಈ ವರೆಗೆ ತಿಳಿದಿರುವಂತೆ ಪಾಕಿಸ್ಥಾನದವನಾಗಿರದೆ ಭಾರತೀಯನಾಗಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಡಿಎನ್‌ಎ ಪರೀಕ್ಷೆ ಮೂಲಕ ಆತ್ಮಾಹುತಿ ದಾಳಿಕೋರನ ಗುರುತು ದೃಢಪಟ್ಟಿರುವುದಾಗಿ ಸೌದಿ ಅಧಿಕಾರಿಗಳು ಹೇಳಿದ್ದಾರೆ.
ಸೌದಿ ಅರೇಬಿಯದ ಅಧಿಕಾರಿಗಳು ಆರಂಭದಲ್ಲಿ ಆತ್ಮಾಹುತಿ ಬಾಂಬ್ ದಾಳಿಕೋರನನ್ನು ಪಾಕ್ ಪ್ರಜೆ, ಅಬ್ದುಲ್ಲ ಕಲ್‌ಜಾರ್ ಖಾನ್ ಎಂದು ಗುರುತಿಸಿದ್ದರು. ಆದರೆ ಸೌದಿ ಅಧಿಕಾರಿಗಳು ಬಿಡುಗಡೆ ಮಾಡಿದ್ದ ಆತ್ಮಾಹುತಿ ದಾಳಿಕೋರನ ಚಿತ್ರವನ್ನು ಮಹಾರಾಷ್ಟ್ರದ ಉಗ್ರ ನಿಗ್ರಹ ದಳದ ಅಧಿಕಾರಿಗಳು ಗುರುತಿಸಿದರು.
ದಾಳಿಕೋರನ ಚಿತ್ರವು ಭಾರತದಲ್ಲಿ ಹಲವು ಉಗ್ರ ದಾಳಿಗಳಲ್ಲಿ ಭಾಗಿಯಾಗಿದ್ದ ಫಯಾಜ್ ಕಾಗ್‌ಜಿ ಎಂಬ ಉಗ್ರನನ್ನು ಹೋಲುತ್ತಿರುವುದನ್ನು ಗಮನಿಸಿದರು. ಅಂತೆಯೇ ಅವರು ಸೌದಿ ಅರೇಬಿಯ ಅಧಿಕಾರಿಗಳನ್ನು ಸಂಪರ್ಕಿಸಿದರು. ಉಗ್ರ ನಿಗ್ರಹ ವಿಚಾರದಲ್ಲಿ ಭಾರತ ಮತ್ತು ಸೌದಿ ಅರೇಬಿಯ ನಡುವಿನ ಸಹಕಾರ ಹೆಚ್ಚುತ್ತಿರುವುದರ ಭಾಗವಾಗಿ ರಾಷ್ಟ್ರೀಯ ತನಿಖಾ ಸಂಸ್ಥೆಯು (ಎನ್‌ಐಎ) ಡಿಎನ್‌ಎ ಮಾದರಿಯನ್ನು ಕಳುಹಿಸಿತು.
ಅಂತೆಯೇ 2016ರ ಡಿಸೆಂಬರ್‌ನಲ್ಲಿ ಸೌದಿ ಅಧಿಕಾರಿಗಳು, “ದಾಳಿಕೋರನು ಕಾಗ್‌ಜಿ ಇದ್ದಿರಬಹುದು’ ಎಂದು ಹೇಳಿದರು. ಕಾಗ್‌ಜಿ ಮೂಲತಃ ಮಹಾರಾಷ್ಟ್ರದ ಬೀಡ್ ನವನಾಗಿದ್ದು 2010 ಮತ್ತು 2012ರ ನಡುವೆ ನಡೆದಿದ್ದ, ಪೂನಾ ಬ್ಲಾಸ್ಟ್ ಸಹಿತವಾಗಿ ಹಲವಾರು ಬಾಂಬ್ ದಾಳಿಗಳಲ್ಲಿ ಶಾಮೀಲಾಗಿದ್ದ.
ಈತ 2006ರಲ್ಲಿ ಭಾರತದಿಂದ ಪಲಾಯನಗೈದು ಬಾಂಗ್ಲಾದೇಶದ ಮೂಲಕ ಪಾಕಿಸ್ಥಾನಕ್ಕೆ ಹೋಗಿದ್ದ. ಕರಾಚಿಯಲ್ಲಿ ನೆಲೆ ಸ್ಥಾಪಿಸಿಕೊಂಡಿದ್ದ. ಉಗ್ರ ಅಬು ಜಿಂದಾಲ್ ಹ್ಯಾಂಡ್ಲರ್ ಆಗಿದ್ದ 26/11ರ ಮುಂಬಯಿ ದಾಳಿಯಲ್ಲೂ ಈತ ಶಾಮೀಲಾಗಿದ್ದ. ಅನಂತರದಲ್ಲಿ ಆತ ಸೌದಿ ಅರೇಬಿಯಕ್ಕೆ ಹೋದ; ಅಲ್ಲಿ ಲಷ್ಕರ್ ಉಗ್ರಸಂಘಟನೆಗೆ ಭಾರತೀಯರನ್ನು ನೇಮಿಸಿಕೊಳ್ಳುವ ಕೆಲಸದಲ್ಲಿ ತೊಡಗಿಕೊಂಡ.
ಎನ್‌ಐಎ ಕಳುಹಿಸಿಕೊಟ್ಟಿದ್ದ ಡಿಎನ್‌ಎ ಮಾದರಿ ಜೆದ್ದಾ ದಾಳಿಕೋರನ ಡಿಎನ್‌ಎ ಪ್ರೊಫೈಲ್ ನೊಂದಿಗೆ ಹೋಲುತ್ತದೆ ಎಂದು ಸೌದಿ ಅರೇಬಿಯ ಅಧಿಕಾರಿಗಳು ಭಾರತೀಯ ಅಧಿಕಾರಿಗಳಿಗೆ ತಿಳಿಸಿದರು.
-ಉದಯವಾಣಿ
Comments are closed.