ಬಹರೈನ್; ಸುಮಾರು 10 ಕೋಟಿ ರೂಪಾಯಿ ವೆಚ್ಚದಲ್ಲಿ ಬಹರೈನ್ ದ್ವೀಪ ರಾಷ್ಟ್ರದಲ್ಲಿ ನಿರ್ಮಾಣಗೊಳ್ಳಲಿರುವ ಬಹರೈನ್ ಕನ್ನಡಿಗರ ಬಹುಕಾಲದ ಕನಸಿನ ಕೂಸಾಗಿರುವ ಬ್ರಹತ್ “ಕನ್ನಡ ಭವನ ” ಕ್ಕೆ ಇಲ್ಲಿನ ರಾಜ್ಯ ಪ್ರಶಸ್ತಿ ವಿಜೇತ ಕನ್ನಡ ಸಂಘವು ಇದಾಗಲೇ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ .
ದ್ವೀಪರಾಷ್ಟ್ರದ ಹ್ರದಯಭಾಗವಾದ ಮನಾಮ ದಲ್ಲಿ ತಲೆ ಎತ್ತಲಿರುವ ಈ ಭವನಕ್ಕೆ ಬೇಕಾಗಿರುವ ಸ್ಥಳೀಯ ಪರವಾನಿಗೆಗಳು ,ಒಪ್ಪಂದಗಳು ಮುಂತಾದ ಎಲ್ಲಾ ಪ್ರಾಥಮಿಕ ಪ್ರಕ್ರಿಯೆಗಳು ಸಂಪೂರ್ಣಗೊಂಡಿದ್ದು ಕಟ್ಟಡದ ಕಾಮಗಾರಿಯು ಶೀಘ್ರದಲ್ಲಿಯೇ ಪ್ರಾರಂಭಗೊಳ್ಳಲಿದೆ . ಈ ನಿಟ್ಟಿನಲ್ಲಿ ಕನ್ನಡ ಸಂಘದ ಅಧ್ಯಕ್ಷರಾದ ಶ್ರೀ ಪ್ರದೀಪ್ ಶೆಟ್ಟಿಯವರ ನೇತೃತ್ವದಲ್ಲಿ ,ಪ್ರಧಾನ ಕಾರ್ಯದರ್ಶಿ ಕಿರಣ್ ಉಪಾಧ್ಯಾಯ ,ಮನೋರಂಜನಾ ಕಾರ್ಯದರ್ಶಿ ವರುಣ್ ಹೆಗ್ಡೆ ಯವರನ್ನು ಒಳಗೊಂಡ ಉನ್ನತ ಮಟ್ಟದ ನಿಯೋಗದೊಂದಿಗೆ ರಾಜ್ಯದ ಮುಖ್ಯಮಂತ್ರಿ ಶ್ರೀ ಕುಮಾರ ಸ್ವಾಮಿ ,ಕನ್ನಡ ಮತ್ತು ಸಂಸ್ಕ್ರತಿ ಸಚಿವೆ ಶ್ರೀಮತಿ ಜಯಮಾಲಾ ಇವರುಗಳನ್ನು ಭೇಟಿಯಾಗಿ ಕಟ್ಟಡ ನಿರ್ಮಾಣಕ್ಕೆ ಹೆಚ್ಚಿನ ಅನುದಾನವನ್ನು ಕೋರುವ ಮನವಿಯೊಂದಿಗೆ ಮಾತುಕತೆ ನಡೆಸಿದರು.
ಸಂಭಾವ್ಯ ” ಕನ್ನಡ ಭವನ” ದ ನೀಲಿನಕ್ಷೆಯನ್ನು ಮುಖ್ಯಮಂತ್ರಿಗಳಿಗೆ ನೀಡಿದ ಅಧ್ಯಕ್ಷರಾದ ಶ್ರೀ ಪ್ರದೀಪ್ ಶೆಟ್ಟಿ ಯವರು ಕನ್ನಡ ಸಂಘದ ಕಾರ್ಯವೈಖರಿಯ ಬಗ್ಗೆ ಮುಖ್ಯಮಂತ್ರಿಗಳಿಗೆ ವರದಿ ನೀಡುತ್ತಾ ಕಳೆದ ನಾಲ್ಕು ದಶಕಗಳಿಂದ ಕೊಲ್ಲಿಯ ಮಣ್ಣಿನಲ್ಲಿ ಕನ್ನಡದ ಕಂಪನ್ನು ಪಸರಿಸುತ್ತಾ ಕನ್ನಡ ಕಲೆ,ಭಾಷೆ ,ಸಂಸ್ಕ್ರತಿಗಳನ್ನು ಉಳಿಸಿ ,ಬೆಳೆಸುವಲ್ಲಿ ಅನನ್ಯ ಕೊಡುಗೆಯನ್ನು ನೀಡುತ್ತಾ ಬಂದಿರುವ ಕನ್ನಡ ಸಂಘವು ಒಂದರ್ಥದಲ್ಲಿ ಕರ್ನಾಟಕದ ಸಾಂಸ್ಕ್ರತಿಕ ರಾಯಭಾರಿಯಂತೆ ಸೇವೆ ಸಲ್ಲಿಸುತ್ತಿದೆ . ಬದುಕನ್ನು ಕಟ್ಟಿಕೊಳ್ಳಲು ಸಾವಿರಾರು ಮೈಲು ದೂರದ ತಾಯ್ನಾಡಿನಿಂದ ಇಲ್ಲಿಗೆ ಬರುವ ಕನ್ನಡಿಗರಿಗೆ ತಾಯ್ನಾಡಿನಲ್ಲೇ ಇರುವಂತಹ ಒಂದು ವಾತಾವರಣವನ್ನು ಬಹರೇನ್ ಕನ್ನಡ ಸಂಘವು ಕಲ್ಪಿಸಿಕೊಟ್ಟಿದೆ . ಸುಮಾರು 20000 ಕನ್ನಡಿಗರು ನೆಲೆಸಿರುವ ಈ ದ್ವೀಪ ರಾಷ್ಟ್ರದಲ್ಲಿ ಸುಸಜ್ಜಿತ ಕನ್ನಡ ಭವನದ ಅಗತ್ಯತೆಯಿದ್ದು ಇದಾಗಲೇ ಕಟ್ಟಡ ನಿರ್ಮಾಣಕ್ಕೆ ಬೇಕಾಗಿರುವ ಎಲ್ಲಾ ಪೂರ್ವಭಾವಿ ಪ್ರಕ್ರಿಯೆಗಳು ಮುಗಿದಿದ್ದು ,ಸುಮಾರು 10 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಈ ಭವನಕ್ಕೆ ತಾವು ಕರ್ನಾಟಕ ಸರಕಾರದಿಂದ ಇನ್ನಷ್ಟು ಹೆಚ್ಚಿನ ಅನುದಾನವನ್ನು ನೀಡಬೇಕೆಂದು ಮನವಿ ಮಾಡಿದರು . ಪ್ರದೀಪ್ ಶೆಟ್ಟಿ ಯವರ ಮನವಿಗೆ ಪೂರಕವಾಗಿ ಸ್ಪಂದಿಸುತ್ತಾ ಮಾತನಾಡಿದ ಮಾನ್ಯ ಮುಖ್ಯ ಮಂತ್ರಿಯವರು ಕನ್ನಡ ಸಂಘದ ಚಟುವಟಿಕೆಗಳ ಬಗ್ಗೆ ತಿಳಿದು ಶ್ಲಾಘಿಸುತ್ತಾ ಅತೀವ ಹರ್ಷ ವ್ಯಕ್ತಪಡಿಸಿದ್ದರಲ್ಲದೆ ಖಂಡಿತವಾಗಿಯೂ ಕರ್ನಾಟಕ ಸರಕಾರದಿಂದ ತಮಗೆ ಸಾಧ್ಯವಾದಷ್ಟು ಅನುದಾನವನ್ನು ನೀಡುತ್ತೇವೆಂದು ಭರವಸೆ ನೀಡಿದರು .
ಕಳೆದ ನಾಲ್ಕು ದಶಕಗಳಿಂದ ಕನ್ನಡ ಕಲೆ ,ಸಂಸ್ಕ್ರತಿ,ಭಾಷೆ ಗಾಲ ನಿರಂತರ ಸೇವೆ ಮಾಡುತ್ತಾ ನಾಡು ನುಡಿಗಾಗಿ ಅನೇಕ ಕೊಡುಗೆಗಳನ್ನು ನೀಡಿರುವ ರಾಜ್ಯಪ್ರಶಸ್ತಿ ವಿಜೇತ ಕನ್ನಡ ಸಂಘವು ಇದೀಗ ಇಲ್ಲಿ ನೆಲೆಸಿರುವ ಸುಮಾರು 20000 ಕನ್ನಡಿಗರಿಗಾಗಿ ಬ್ರಹತ್ ಕನ್ನಡ ಭವನ ವೊಂದನ್ನು ನಿರ್ಮಿಸಲು ಮುಂದಾಗಿರುವುದು ಇಲ್ಲಿನ ಕನ್ನಡಿಗರಿಗೆಲ್ಲರಿಗೂ ಬಹಳ ಖುಷಿ ನೀಡಿದೆ . ಕನ್ನಡ ಭವನದ ನಿರ್ಮಾಣ ಅತೀ ಶೀಘ್ರದಲ್ಲಿ ಆಗಲಿ ಎನ್ನುವುದೇ ಎಲ್ಲರ ಆಶಯ .
ವರದಿ-ಕಮಲಾಕ್ಷ ಅಮೀನ್
Comments are closed.