ಯುಎಇ : ದೇಶದೊಂದಿಗೆ ಸೌಹಾರ್ದ ಸಂಬಂಧ ಗಟ್ಟಿಗೊಳಿಸುವಲ್ಲಿ ವಹಿಸಿದ ಮಹತ್ವದ ಪಾತ್ರಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಯುಎಇಯ ಅತ್ಯುನ್ನತ ನಾಗರಿಕ ಪ್ರಶಸ್ತಿ ‘ಝಾಯೆದ್ ಮೆಡಲ್’ ನೀಡಿ ಗೌರವಿಸಲಿದೆ.
ಯುಎಇ ರಾಷ್ಟ್ರಪತಿ ಖಲೀಫಾ ಝಾಯಿದ್ ಬಿನ್ ಸುಲ್ತಾನ್ ಅಲ್ ನಹ್ಯಾನ್ ಅವರು ಪ್ರಧಾನಿ ಮೋದಿಗೆ ಪ್ರಶಸ್ತಿ ನೀಡಲಾಗುತ್ತಿದೆ ಎಂದು ಘೋಷಿಸಿದ್ದಾರೆ. ಎರಡು ದೇಶಗಳ ನಡುವಿನ ಸಂಬಂಧಗಳ ಸುಧಾರಣೆಗೆ ಪ್ರಯತ್ನಿಸಿದ ಹಿನ್ನೆಲೆಯಲ್ಲಿ ಪ್ರಶಸ್ತಿ ಎಂದು ಟ್ವೀಟ್ ಮಾಡಿದ್ದಾರೆ.
ನಮಗೆ ಭಾರತದೊಂದಿಗೆ ಐತಿಹಾಸಿಕ ಮತ್ತು ಉತ್ತಮ ಸಂಬಂಧವಿದೆ. ನನ್ನ ಪ್ರೀತಿಯ ಗೆಳೆಯ ಪ್ರಧಾನಿ ನರೇಂದ್ರ ಮೋದಿಯವರಿಂದಾಗಿ ಈ ಸಂಬಂಧ ಗಟ್ಟಿಯಾಗಿದೆ. ಅವರ ಪ್ರಯತ್ನಗಳನ್ನು ಶ್ಲಾಘಿಸುವ ಸಲುವಾಗಿ, ಯುಎಇ ಅಧ್ಯಕ್ಷ ಮೋದಿಯವರಿಗೆ ‘ಝಾಯೆದ್ ಮೆಡಲ್’ ಪ್ರದಾನಿಸಲಿದ್ದಾರೆ ಎಂದು ಅಬುಧಾಬಿಯ ದೊರೆ ಶೇಖ್ ಮುಹಮ್ಮದ್ ಬಿನ್ ಝಾಯೆದ್ ಅಲ್ ನಹ್ಯಾನ್ ತಿಳಿಸಿದ್ದಾರೆ.
ಎರಡು ದೇಶಗಳ ಮಧ್ಯೆ ಐತಿಹಾಸಿಕ ಹಾಗೂ ವಿಸ್ತಾರವಾದ ರಣನೀತಿಗೆ ಸಂಬಂಧಿಸಿದ ಒಪ್ಪಂದಗಳ ಮೂಲಕ ಮತ್ತೊಮ್ಮೆ ಸಂಬಂಧಗಳ ವೃದ್ಧಿಸುವಲ್ಲಿ ಪ್ರಧಾನಿ ಮೋದಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಯುಎಇ ಹೇಳಿದೆ.
ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (2007), ಚೀನಾದ ಪ್ರಧಾನಿ ಕ್ಸಿ ಜಿನ್ಪಿಂಗ್ (2018), ರಾಣಿ ಎಲಿಜಬೆತ್ (2010) ಹಾಗೂ ಸೌದಿ ಅರೆಬಿಯಾದ ರಾಜ ಸಲ್ಮಾನ್ ಬಿನ್ ಅಬ್ದುಲ್ ಅಜೀಜ್ ಅಲ್ ಸೌದ್ (2016) ಅವರಿಗೆ ಈ ಹಿಂದೆ ಅತ್ಯುನ್ನತ ನಾಗರಿಕ ಪ್ರಶಸ್ತಿ ನೀಡಿ ಗೌರವಿಸಿದೆ.
2015ರಲ್ಲಿ ಮೋದಿ ಅವರು ಯುಎಇಗೆ ಭೇಟಿ ನೀಡಿದ ಬಳಿಕ ಎರಡೂ ದೇಶಗಳ ನಡುವೆ ಸಂಬಂಧ ವೃದ್ಧಿಗೊಂಡಿತ್ತು. 2017ರಲ್ಲಿ ಗಣರಾಜ್ಯೋತ್ಸವ ಪರೇಡ್ ಮುಖ್ಯ ಅತಿಥಿಯಾಗಿ ಯುಎಇ ಯುವರಾಜ ಭೇಟಿ ನೀಡಿದ್ದರು. ಮೋದಿ ಎರಡು ಸಲ ಭೇಟಿ ನೀಡಿರುವ ದೇಶಗಳಲ್ಲಿ ಯುಎಇ ದೇಶ ಸಹ ಒಂದಾಗಿದೆ.
ಯುಎಇ ಮೂಲಕ ಭಾರತಕ್ಕೆ ಶೇ.8ರಷ್ಟು ಇಂಧನ ಆಮದಾಗುತ್ತದೆ. ಭಾರತಕ್ಕೆ ಕಚ್ಚಾ ತೈಲವನ್ನು ಪೂರೈಸುವ ಐದನೇ ಅತಿ ದೊಡ್ಡ ದೇಶ ಯುಎಇ. ಗುರುಗ್ರಾಮದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಅಂತಾರಾಷ್ಟ್ರೀಯ ಸೌರ ಒಕ್ಕೂಟದಲ್ಲೂ (ಐಎಸ್ಎ) ಯುಎಇ ಭಾಗಿಯಾಗಿದೆ.
Comments are closed.