ಗಲ್ಫ್

ಪ್ಯಾರಿಸ್’ನಿಂದ ನೇರವಾಗಿ ಯುಎಇಗೆ ಬಂದಿಳಿದ ಪ್ರಧಾನಿ ಮೋದಿ

Pinterest LinkedIn Tumblr

ಅಬುದಾಬಿ: ಪ್ಯಾರಿಸ್ ನಲ್ಲಿ ನಡೆದ ಜಿ7 ಶೃಂಗಸಭೆ ಬಳಿಕ ಪ್ರಧಾನಿ ನರೇಂದ್ರ ಮೋದಿ ಯುಎಇಗೆ ಬಂದಿಳಿದಿದ್ದು, ಇಲ್ಲಿ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ.

ಇಂದು ಮುಂಜಾನೆ ಯುಎಇ ರಾಜಧಾನಿ ಅಬುದಾಬಿಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ತಂಡ ಬಂದಿಳಿದಿದೆ. ಯುಎಇ ಪ್ರವಾಸದ ವೇಳೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ, ಅಂತಾರಾಷ್ಟ್ರೀಯ ಸಂಬಂಧದ ಕುರಿತು ಚರ್ಚೆ ನಡೆಸಲಿದ್ದಾರೆ. ಅಂತೆಯೇ ಯುಎಇ ದೊರೆ ಶೇಖ್ ಮಹಮದ್ ಬಿನ್ ಜಾಯೆದ್ ಅನ್ ನಹ್ಯಾನ್ ರೊಂದಿಗೆ ಮಹತ್ವದ ವಿಚಾರಗಳ ಕುರಿತು ಚರ್ಚೆ ನಡೆಸಲಿದ್ದಾರೆ. ಈ ವೇಳೆ ಪ್ರಧಾನಿ ಮೋದಿ ವಿದೇಶಗಳಲ್ಲೂ ಕಾರ್ಯ ನಿರ್ವಹಿಸುವ ಭಾರತದ ರುಪೇ ಕಾರ್ಡ್ ಸೇವೆಯನ್ನು ಬಿಡುಗಡೆ ಮಾಡಲಿದ್ದಾರೆ.

ಇನ್ನು ಇದೇ ಭೇಟಿ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಯುಎಇ ಸರ್ಕಾರ ನೀಡುವ ಅತ್ಯುನ್ನತ ಗೌರವ ‘ಆರ್ಡರ್ ಆಫ್ ಜಾಯೆದ್’ ನೀಡಿ ಗೌರವಿಸಲಾಗುತ್ತದೆ.

ಈ ಕುರಿತಂತೆ ತಮ್ಮ ಟ್ವಿಟರ್ ನಲ್ಲಿ ಪ್ರಧಾನಿ ಮೋದಿ ಬರೆದುಕೊಂಡಿದ್ದು, ಯುಎಇ ದೊರೆ ಶೇಖ್ ಮಹಮದ್ ಬಿನ್ ಜಾಯೆದ್ ಅನ್ ನಹ್ಯಾನ್ ರೊಂದಿಗಿನ ಭೇಟಿಗೆ ಉತ್ಸುಕನಾಗಿದ್ದೇನೆ. ಯುಎಇ ಮತ್ತು ಭಾರತದ ನಡುವಿನ ಸೌಹಾರ್ಧ ಸಂಬಂಧ ವೃದ್ದಿಗೆ ಈ ಭೇಟಿ ನೆರವಾಗಲಿದೆ. ಅಂತೆಯೇ ಉತ್ತಮ ವಾಣಿಜ್ಯ ಒಪ್ಪಂದವೂ ಭೇಟಿ ಉದ್ದೇಶವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.

ಇನ್ನು ಅಬುದಾಬಿ ಬಳಿಕ ಪ್ರಧಾನಿ ನರೇಂದ್ರ ಮೋದಿ ನೇರವಾಗಿ ಬಹ್ರೇನ್ ಗೆ ಪ್ರಯಾಣ ಬೆಳೆಸಲಿದ್ದಾರೆ.

Comments are closed.