ಅಂತರಾಷ್ಟ್ರೀಯ

ಮುಂದಾಗುವ ಪರಿಣಾಮಗಳಿಗೆ ಅಮೆರಿಕಕ್ಕೆ ಎಚ್ಚರಿಕೆಯ ಹೊಣೆ ನೀಡಿದ ಇರಾನ್

Pinterest LinkedIn Tumblr


ದುಬೈ (ಜ.3): ಮೇಜರ್​ ಜನರಲ್​ ಖಾಸಿಂ ಸೊಲೆಮನಿಯನ್ನು ಅಮೆರಿಕ ಹತ್ಯೆ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಇರಾನ್ ಕೆಂಡಕಾರಿದೆ. ಇಂದೊಂದು ಮೂರ್ಖತನದ ನಿರ್ಧಾರ ಎಂದಿರುವ ಇರಾನ್​, ಮುಂದಾಗುವ ಪರಿಣಾಮಗಳಿಗೆ ನೀವೇ ಕಾರಣ ಎಂದು ಹೇಳಿದೆ.

ಇರಾನ್​ ಮೇಜರ್​ ಜನರಲ್​ ​ ಖಾಸಿಂ ಸೊಲೆಮನಿಯನ್ನು ಹತ್ಯೆ ಮಾಡಿದ ನಂತರ ಮಾತನಾಡಿದ ಇರಾನ್​ ವಿದೇಶಾಂಗ ಸಚಿವ ಮೊಹ್ಮದ್​ ಜಾವದ್​ ಜಾರಿಫ್​, “ಅಮೆರಿಕ ಮೂರ್ಖ ಹಾಗೂ ಅತಿ ಅಪಾಯಕಾರಿ ನಿರ್ಧಾರ ಕೈಗೊಂಡಿದೆ. ಇದರಿಂದ ಉಂಟಾಗುವ ಪರಿಣಾಮಗಳ ಹೊಣೆಯನ್ನು ಅಮೆರಿಕವೇ ಹೊತ್ತುಕೊಳ್ಳಲಿ,” ಎಂದಿದ್ದಾರೆ. ಘಟನೆ ನಂತರದಲ್ಲಿ ಇರಾನ್​ ಹಾಗೂ ಅಮೆರಿಕದ ನಡುವೆ ಯುದ್ಧ ಭೀತಿ ಎದುರಾಗಿದೆ. ಇನ್ನು, ಇರಾನ್​ನಲ್ಲಿ ಮೂರು ದಿನಗಳ ಕಾಲ ಶೋಕಾಚರಣೆ ಘೋಷಣೆ ಮಾಡಲಾಗಿದೆ.

ಶುಕ್ರವಾರ ಬಾಗ್ದಾದ್​​ ವಿಮಾನ ನಿಲ್ದಾಣದಲ್ಲಿ ಅಮೆರಿಕ ರಾಕೆಟ್​ ದಾಳಿ ನಡೆಸಿತ್ತು. ಈ ವೇಳೆ ಖಾಸಿಂ ಸೊಲೆಮನಿ ಜತೆ ಇರಾಕ್​ ಬೆಂಬಲಿತ ಮೊಬಿಲೈಜೇಶನ್​ ಉಗ್ರ ಪಡೆಯ ಡೆಪ್ಯುಟಿ ಕಮಾಂಡರ್​ ಅಬು ಮಹ್ದಿ ಅಲ್​ ಮುಹಾಂದಿಸ್​ ಕೂಡ ಸತ್ತಿದ್ದಾನೆ.

ಖಾಸಿಂ ಸೊಲೆಮನಿಯನ್ನು ಅಮೆರಿಕ ತನ್ನ ಬದ್ಧ ವೈರಿ ಎಂದೇ ಪರಿಗಣಿಸಿತ್ತು. ಈತ ಇರಾನ್​ ಸಶಸ್ತ್ರ ಹೋರಾಟ ನಿಯಂತ್ರಿಸುತ್ತಿದ್ದ. ಸೊಲೆಮನಿ ಇರಾನ್​ ಗುಪ್ತಚರ ಇಲಾಖೆಯ ಮುಖ್ಯಸ್ಥ ಕೂಡ ಹೌದು. “ನಿಮಗೆ ಇಷ್ಟಬಂದಾಗ ನೀವು ಯುದ್ಧ ಆರಂಭಿಸಿ. ಆದರೆ, ಅದನ್ನು ಮುಗಿಸುವುದು ಮಾತ್ರ ನಾವೇ,” ಎಂದು ಸೊಲೆಮನಿ ಅಮೆರಿಕಕ್ಕೆ ಬೆದರಿಕೆ ಹಾಕಿದ್ದ. ಈತನನ್ನು ಹೊಡೆದುರುಳಿಸಿಲು ಇದು ಕೂಡ ಒಂದು ಕಾರಣ ಎನ್ನಲಾಗಿದೆ.

ಹೊಸ ವರ್ಷದಂದು ಬಾಗ್ದಾದ್​ನಲ್ಲಿರುವ ಅಮೆರಿಕದ ರಾಯಭಾರ ಕಚೇರಿ ಮೇಲೆ ಇರಾನ್​ ಬೆಂಬಲಿತ ಉಗ್ರರು ದಾಳಿ ನಡೆಸಿದ್ದರು. ಈ ವೇಳೆ ಅಮೆರಿಕದ ಅಧಿಕಾರಿಯೋರ್ವ ಮೃತಪಟ್ಟಿದ್ದರು. ಇದಾದ ನಂತರ ಎರಡೂ ದೇಶಗಳ ಸಂಬಂಧ ತೀರಾ ಹದಗೆಟ್ಟಿದೆ. ಈಗ ರಾಕೆಟ್​ ದಾಳಿಯ ನಂತರ ಯುದ್ಧ ಭೀತಿ ಆರಂಭವಾಗಿದೆ.

ಇನ್ನು, ಈ ದಾಳಿಗೆ ಅಮೆರಿಕ ಸ್ಪಷ್ಟನೆಯನ್ನೂ ನೀಡಿದೆ. ““ಅಮೆರಿಕದ ರಾಯಭಾರಿಗಳನ್ನು ಕೊಲ್ಲಲು ಸೊಲೆಮನಿ ಸಂಚು ರೂಪಿಸಿದ್ದ. ಇರಾಕ್​ನಲ್ಲಿರುವ ಅಮೆರಿಕದ ಸಿಬ್ಬಂದಿಯನ್ನು ಕಾಪಾಡುವ ನಿಟ್ಟಿನಲ್ಲಿ ನಾವು ಈ ಕ್ರಮ ಕೈಗೊಂಡಿದ್ದೇವೆ,” ಎಂದು ಪೆಂಟಗನ್​ ಹೇಳಿದೆ.

Comments are closed.