ದುಬೈ: ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಯುಎಇ ಸಹ ಕೆಲವು ದಿನಗಳ ಕಾಲ ಸ್ತಬ್ಧಗೊಳ್ಳಲಿದೆ.
ಗುರುವಾರ ಬೆಳಗ್ಗಿನಿಂದಲೇ ಲಾಕ್‌ಡೌನ್ ಜಾರಿಗೆ ಬಂದಿದೆ. ಶುಕ್ರವಾರ, ಶನಿವಾರ ಮತ್ತು ರವಿವಾರ ಯಾರೂ ರಸ್ತೆಯಲ್ಲಿ ಕಾಣಿಸಿಕೊಳ್ಳಬಾರದು ಎಂದು ನಾಗರಿಕರಿಗೆ ದುಬಾೖ ಪೊಲೀಸರು ಸ್ಪಷ್ಟ ಸೂಚನೆ ನೀಡಿದ್ದಾರೆ. ಪೊಲೀಸ್ ಇಲಾಖೆಯೇ ಪ್ರತಿ ನಾಗರಿಕನ ಮೊಬೈಲ್‌ಗೂ ಈ ಸಂಬಂಧ ಸಂದೇಶವನ್ನು ರವಾನಿಸಿದೆ. ಈ ಮೂರು ದಿನ ವೀಕೆಂಡ್ ಸಮಯವಾಗಿದ್ದು, ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇರುವುದನ್ನು ತಪ್ಪಿಸುವುದೇ ಇದರ ಮುಖ್ಯ ಉದ್ದೇಶ. ನಮ್ಮಲ್ಲಿ ಪ್ರಧಾನಿ ಮೋದಿ ಮಾ. 22ರಂದು ರವಿವಾರ ಜನತಾ ಕಪ್ಯೂìಗೆ ಕರೆಕೊಟ್ಟ ಮಾದರಿಯೇ ಇದು.
ಈ ಕುರಿತು ವಿವರಿಸಿದ ಅಲ್ಲಿಯ ಉದ್ಯೋಗಿ ಉಡುಪಿಯ ಬೆಳಪುವಿನ ದಿನೇಶ್ ಪೂಜಾರಿ, ಪ್ರತಿ ಕಚೇರಿಗಳ ಶೇ. 80ರಷ್ಟು ಮಂದಿ ಮನೆಯಿಂದಲೇ ಕೆಲಸ ಮಾಡಬೇಕು. ಉಳಿದವರು ಮಾತ್ರ ಕಚೇರಿ ಕೆಲಸಕ್ಕೆ ಮುಂದಿನ ವಾರದಿಂದ ತೆರಳಬಹುದು. ಕಳೆದ ವಾರದಿಂದಲೇ ಕೆಲವು ಸಂಸ್ಥೆಗಳು ವರ್ಕ್ ಫ್ರಂ ಹೋಂ ಸೌಲಭ್ಯದ ಮೊರೆ ಹೋಗಿದ್ದವು. ಶಾಪಿಂಗ್ ಮಾಲ್‌ಗಳೂ ಮುಚ್ಚಿವೆ. ರಸ್ತೆಯಲ್ಲಿ ವಾಹನ ಓಡಾಟವೂ ಕಡಿಮೆಯಾಗಿದೆ. ಜನ ಸಂಚಾರ ಎಂದಿನಂತಿಲ್ಲ ಎಂದಿದ್ದಾರೆ.
ರಸ್ತೆಗಳಿಗೆ ಇಳಿಯುವಂತಿಲ್ಲ
ಮುಂದಿನ ದಿನಗಳಲ್ಲಿ ಕೇವಲ ಸೂಪರ್ ಮಾರ್ಕೆಟ್‌ಗಳು ತೆರೆದಿರುತ್ತವೆ. ಉಳಿದಂತೆ ಮೆಡಿಕಲ್ ಮತ್ತು ಆಸ್ಪತ್ರೆ ಸೇವೆಗಳಿಗೆ ತೊಂದರೆ ಇಲ್ಲ. ಖಾಸಗಿ ವಾಹನಗಳು, ಸರಕಾರಿ ಸಾರಿಗೆ ವ್ಯವಸ್ಥೆಗೆ ರಜಾ ಎನ್ನುತ್ತಾರೆ ಅವರು.
ಲಭ್ಯ ಮಾಹಿತಿ ಪ್ರಕಾರ, ಕೋವಿಡ್ ಹಾನಿ ಹೆಚ್ಚಾದ ಕಾರಣ ದುಬಾೖಯಲ್ಲಿ ಅಗತ್ಯ ವಸ್ತುಗಳ ದರಗಳಲ್ಲಿ ಏರಿಕೆಯಾಗಿದೆ. ಮುಖ್ಯವಾಗಿ ಭಾರತದಿಂದ ಯಾವುದೇ ವಸ್ತುಗಳು ರಫ್ತಾಗದೇ ಇರುವ ಕಾರಣ ಅಲ್ಲಿ ನೆಲೆಸಿರುವ ಭಾರತೀಯರಿಗೆ ಬದುಕು ತುಸು ದುಬಾರಿಯಾಗುತ್ತಿವೆ. ಯುಎಇಯಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯರಿದ್ದಾರೆ. ಮುಖ್ಯವಾಗಿ ಕೇರಳ ಮತ್ತು ಕರಾವಳಿಯವರು ಹೆಚ್ಚು.
ಬಹ್ರೈನ್‌ನಲ್ಲಿರುವ ವಿಟ್ಲ ಅಡ್ಯನಡ್ಕದ ತಿರುಮಲೇಶ್ವರ ವಿವರಿಸುವಂತೆ, ಇತರ ದೇಶಗಳಿಗೆ ಹೊಲಿಸಿದರೆ ಸಾವಿನ ಸಂಖ್ಯೆ ನಮ್ಮಲ್ಲಿ ಕಡಿಮೆ. ಆದರೆ ಸೋಂಕಿತರ ಸಂಖ್ಯೆ ಹೆಚ್ಚಾದ ಕಾರಣ ಯುಎಇ ಸರಕಾರ ಕಟ್ಟುನಿಟ್ಟಾದ ನಿಯಮಗಳನ್ನು ಜಾರಿಗೊಳಿಸಿದೆ. ಗುರುವಾರದಿಂದಲೇ ಅಗತ್ಯವಲ್ಲದ ವಸ್ತುಗಳ ಮಾರಾಟವನ್ನು ಸಂಪೂರ್ಣ ಸ್ಥಗಿತಗೊಳಿಸಲಾಗಿದೆ. ಅಗತ್ಯ ಸಾಮಗ್ರಿಗಳ ಅಂಗಡಿಗೆ ತೆರೆಯಲು ಅನುಮತಿ ನೀಡಲಾಗಿದೆ. ಆದರೆ ಗುಂಪಾಗಿ ಜನ ಸೇರುವಂತಿಲ್ಲ ಎಂದೂ ಹೇಳಿದೆ.
ಈಗಾಗಲೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳನ್ನು ಮುಚ್ಚಲಾಗಿದೆ. ಜನ ಸಂಚಾರ ಇತ್ತೀಚಿನ 4 -5 ದಿನಗಳಿಂದ ಕಡಿಮೆಯಾಗಿದ್ದು, ಎಂದಿನ ಜನಜೀವನಕ್ಕೆ ಯಾವುದೇ ಸಮಸ್ಯೆಯಾಗಿಲ್ಲ ಎನ್ನುತ್ತಾರೆ.
ಕಳೆದ ವಾರಕ್ಕೆ ಹೋಲಿಸಿದರೆ ಜನರ ಓಡಾಟ ಕಡಿಮೆ. ಸ್ವ ಇಚ್ಛೆಯಿಂದ ಕೆಲವು ಅಂಗಡಿಗಳು, ಸ್ಟೋರ್‌ಗಳನ್ನು ಮುಚ್ಚಲಾಗಿದೆ. ಕೆಲವನ್ನು ಸರಕಾರವೇ ಬಲವಂತವಾಗಿ ಮುಚ್ಚಿಸಿದೆ. ಜನ ಸಂಚಾರ ಹೇರಳವಾಗಿರುವ ರಸ್ತೆಗಳಿಗೆ ಪ್ರತಿದಿನ ಮದ್ದು ಸಿಂಪಡಿಸಲಾಗುತ್ತಿದೆ. ಈ ತನಕ ಕೆಲಸಗಳಿಗೆ ಕಡ್ಡಾಯವಾಗಿ ರಜೆಗಳನ್ನು ನೀಡಲಾಗಿಲ್ಲ. ಇದೀಗ ಲಾಕ್‌ಡೌನ್ ಆದ ಕಾರಣ ವರ್ಕ್ ಫ್ರಂ ಹೋಮ್ ಅನಿವಾರ್ಯವಾಗಿದೆ ಎಂಬುದು ಅವರ ಅಭಿಪ್ರಾಯ.
Comments are closed.