ಗಲ್ಫ್

ದುಬೈಯಲ್ಲಿ ಭಾರತೀಯ ಮೂಲದ ದಂಪತಿ ಹತ್ಯೆ; ಪಾಕ್ ಮೂಲದ ಆರೋಪಿ ಬಂಧನ

Pinterest LinkedIn Tumblr

ದುಬೈ: ದುಬೈನಲ್ಲಿ ಭಾರತೀಯ ಮೂಲದ ದಂಪತಿಯ ಹತ್ಯೆ ನಡೆದಿದ್ದು, ಹತ್ಯೆ ನಡೆಸಿದ ಪಾಕಿಸ್ತಾನ ಮೂಲದ ಆರೋಪಿಯನ್ನು ದುಬೈ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಹತ್ಯೆಯಾದ ದಂಪತಿಯನ್ನು ಹಿರೆನ್ ಅಧಿಯಾ ಮತ್ತು ವಿಧಿ ಅಧಿಯಾ ಎಂದು ಗುರುತಿಸಲಾಗಿದೆ. ಜೂನ್ 18 ರಂದು ದುಬೈನ ಅರೇಬಿಯನ್ ರಾಂಚೆಸ್ ಪ್ರದೇಶದಲ್ಲಿರುವ ಅವರ ಮನೆಯಲ್ಲಿ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ. ಪಾಕ್ ಮೂಲದ ಆರೋಪಿಯು ಕಳ್ಳತನ ಮಾಡಲು ಹೋದ ವೇಳೆ ಹತ್ಯೆ ಮಾಡಿದ್ದು, ಬಳಿಕ ಅಲ್ಲಿಂದ ಆರೋಪಿ ಪರಾರಿಯಾಗಿದ್ದ. ಮಿಂಚಿನ ಕಾರ್ಯಾಚರಣೆ ನಡೆಸಿದ ಪೊಲೀಸರು ಆತನನ್ನು 24 ತಾಸುಗಳೊಳಗೆ ದುಬೈ ಪೊಲೀಸರು ಬಂಧಿಸುವಲ್ಲಿ ಸಫಲರಾಗಿದ್ದಾರೆ.

ಘಟನೆಯ ಬಗ್ಗೆ ದಂಪತಿಯ ಪುತ್ರಿಯು ದುಬೈ ಪೊಲೀಸರ ಕಮಾಂಡ್ ರೂಂಗೆ ಕರೆ ಮಾಡಿ ತಿಳಿಸಿದ್ದಳು ಎಂದು ದುಬೈ ಪೊಲೀಸರ ಕ್ರಿಮಿನಲ್ ತನಿಖಾ ವಿಭಾಗದ ನಿರ್ದೇಶಕ ಬ್ರಿಗೇಡಿಯರ್ ಜಮಾಲ್ ಅಲ್ ಜಲ್ಲಾಫ್ ತಿಳಿಸಿದ್ದರು.

ಹಿರೆನ್ ಅಧಿಯಾ ಶಾರ್ಜಾದ ಆಯಿಲ್ ಕಂಪೆನಿಯೊಂದರಲ್ಲಿ ಎಕ್ಸಿಕ್ಯೂಟಿವ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಅವರಿಗೆ 18 ಹಾಗೂ 13 ವಯಸ್ಸಿನ ಇಬ್ಬರು ಪುತ್ರಿಯರಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.

ಹಿರೆನ್ ಅಧಿಯಾ ಗುಜರಾತಿನವರೆಂದು ಹೇಳಲಾಗುತ್ತಿದೆ. ಕಳೆದ ಮೂರು ವರ್ಷಗಳ ಹಿಂದೆ ಹಿರೆನ್ ಅಧಿಯಾ ಕುಟುಂಬ ದುಬೈಗೆ ಆಗಮಿಸಿದ್ದು, ಕೊಲೆ ನಡೆಯುವ ವೇಳೆ ಹಿರೆನ್ ಅಧಿಯಾರ ಇಬ್ಬರು ಮಕ್ಕಳು ಮನೆಯಲ್ಲಿಯೇ ಇದ್ದರು. ಅವರಲ್ಲೂ ಒಬ್ಬಳಿಗೆ ಆರೋಪಿ ಚಾಕುವಿನಿಂದ ಇರಿದು ಗಾಯಗೊಳಿಸಿದ್ದಾನೆ.

ಜೂನ್ 18 ರಂದು ದುಬೈನ ಅರೇಬಿಯನ್ ರಾಂಚೆಸ್ಸಿನಲ್ಲಿರುವ ಮನೆಯಲ್ಲಿ ಕುಟುಂಬವು ನಿದ್ರಿಸುತ್ತಿದ್ದಾಗ ನಿವಾಸದೊಳಗೆ ನುಗ್ಗಿದ ಆರೋಪಿ ಪರ್ಸಿನಿಂದ ಹಣ ಕಳ್ಳತನ ಮಾಡಿ, ಬಳಿಕ ಚಿನ್ನಾಭರಣವನ್ನು ಕದ್ದಿದ್ದು, ಈ ವೇಳೆ ಹಿರೆನ್ ಅಧಿಯಾ ಎಚ್ಚರಗೊಂಡಿದ್ದಾರೆ. ಈ ವೇಳೆ ಆರೋಪಿ ತನ್ನ ಬಳಿಯಿದ್ದ ಚಾಕುವಿನಿಂದ ಹಿರೆನ್ ಅಧಿಯಾರನ್ನು ಇರಿದಿದ್ದಾನೆ. ಇದನ್ನು ಕಂಡ ಪತ್ನಿ ಮೇಲೆಯೂ ಆರೋಪಿ ದಾಳಿ ಮಾಡಿ ಕೊಂಡು ಹಾಕಿದ್ದಾನೆ. ಈ ವೇಳೆ ಹಿರೆನ್ ಅಧಿಯಾರ ಮಗಳು ರಕ್ತದ ಮಡುವಿನಲ್ಲಿ ಬಿದ್ದಿದ್ದ ಅಪ್ಪ-ಅಮ್ಮನನ್ನು ನೋಡಿ ಕಿರಿಚಿದ್ದಾಳೆ. ಆಗ ಆರೋಪಿ ಆಕೆಯ ಕುತ್ತಿಗೆ ಮೇಲೆ ಇರಿದು ಪರಾರಿಯಾದನೆಂದು ಬ್ರಿಗೇಡಿಯರ್ ಅಲ್ ಜಲಾಫ್ ತಿಳಿಸಿದ್ದಾರೆ.

ಹತ್ಯೆ ನಡೆದ ಬಳಿಕ ಸಣ್ಣಪುಟ್ಟ ಗಾಯಗಳಾದ ಪುತ್ರಿಯು ಪೊಲೀಸರಿಗೆ ಕರೆ ಮಾಡಿದ್ದಳು.ಇದಾದ ಕೆಲವೇ ಗಂಟೆಗಳಲ್ಲಿ ದುಬೈ ಪೊಲೀಸರು ಆರೋಪಿ ಹಾಗು ಆತ ಕದ್ದ ಹಣ ಮತ್ತು ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿಯು ತನ್ನ ತಪ್ಪನ್ನು ಒಪ್ಪಿಕೊಂಡಿದ್ದು ಹಾಗೂ ಮನೆಯೊಳಗೆ ದರೋಡೆ ಮಾಡಲು ಸಂಚು ರೂಪಿಸಿದ್ದುದಾಗಿ ಹೇಳಿಕೊಂಡಿದ್ದಾನೆ.

Comments are closed.