ತಿರುಪತಿ: ವಿಶ್ವ ವಿಖ್ಯಾತ ತಿರುಪತಿ ತಿರುಮಲ ವೆಂಕಟೇಶ್ವರ ದೇವಸ್ಥಾನದ ಲಡ್ಡು ತಯಾರಿಕಾ ಘಟಕದಲ್ಲಿ ಶುಕ್ರವಾರ ಭಾರಿ ಅಗ್ನಿ ಅವಘಡ ಸಂಭವಿಸಿದ್ದು, ಲಕ್ಷಾಂತರ ರುಪಾಯಿ ಮೌಲ್ಯದ ಲಡ್ಡುಗಳು ಸುಟ್ಟು ಭಸ್ಮವಾಗಿವೆ. ಅದೃಷ್ಟವಶಾತ್ ಯಾರಿಗೂ ಯಾವುದೇ ತೊಂದರೆಯಾಗಿಲ್ಲ.
ಇಂದು ಬೆಳಗ್ಗೆ ಲಡ್ಡುಗಳನ್ನು ತಯಾರಿಸುವ ಅಡುಗೆ ಮನೆಯಲ್ಲಿ ಭಾರೀ ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ಅಡುಗೆ ಸಿಬ್ಬಂದಿ ಅಗ್ನಿ ಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಮೂರು ಅಗ್ನಿ ಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಲಡ್ಡು ತಯಾರಿಸುವ ಅಡುಗೆ ಮನೆಯಲ್ಲಿ ತುಪ್ಪ ಕಾಯಿಸುತ್ತಿದ್ದಾಗ ವಿಪರೀತ ಬಿಸಿಯಿಂದಾಗಿ ಗೋಡೆಗೆ ಬೆಂಕಿ ತಗುಲಿಕೊಂಡಿದೆ ಎಂದು ತಿರುಪತಿ ತಿರುಮಲ ದೇವಸ್ಥಾನದ ಪಿಆರ್ ಒ ತಲರಿ ರವಿ ಅವರು ಪಿಟಿಐ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಬೆಂಕಿ ಆಕಸ್ಮಿಕದಿಂದಾಗಿ ಯಾವುದೇ ಜೀವ ಹಾನಿ ಸಂಭವಿಸಿಲ್ಲ; ಆದರೆ ಅಂದಾಜು 20 ಲಕ್ಷ ರುಪಾಯಿ ಮೌಲ್ಯದ ಆಸ್ತಿ ನಷ್ಟವಾಗಿದೆ ಎಂದು ತಿಳಿದುಬಂದಿದೆ.
Comments are closed.