ರಾಷ್ಟ್ರೀಯ

ಗೂಗಲ್‌ ‘ಸ್ಟ್ರೀಟ್‌ ವ್ಯೂ’ಗೆ ಅನುಮತಿ ನಕಾರ

Pinterest LinkedIn Tumblr

pvec10june16Google palaceನವದೆಹಲಿ: ಭಾರತದ ಕೆಲವು ನಗರಗಳು, ಪ್ರವಾಸಿ ತಾಣಗಳು, ಗುಡ್ಡಗಳು ಮತ್ತು ನದಿಗಳನ್ನು ತನ್ನ ‘ಸ್ಟ್ರೀಟ್‌ ವ್ಯೂ’ ಸೇವೆಯಲ್ಲಿ ಸೇರಿಸುವ ಗೂಗಲ್‌ನ ಯೋಜನೆಗೆ ಗೃಹ ಸಚಿವಾಲಯ ಭದ್ರತೆಯ ಕಾರಣ ಮುಂದಿಟ್ಟು ಅನುಮತಿ ನಿರಾಕರಿಸಿದೆ.

ಈ ಆ್ಯಪ್‌ಗೆ ಅನುಮತಿ ನೀಡಬೇಕೆಂದು ಗೂಗಲ್‌ ಕಂಪೆನಿ ಕಳೆದ ಕೆಲ ಕಾಲದಿಂದ ಗೃಹ ಸಚಿವಾಲಯಕ್ಕೆ ಮನವಿ ಮಾಡುತ್ತಲೇ ಇತ್ತು. ಆದರೆ ಈ ತಂತ್ರಜ್ಞಾನದ ಬಗ್ಗೆ ವಿವರವಾಗಿ ಅಧ್ಯಯನ ನಡೆಸಿದ ಬಳಿಕವೇ ನಿರ್ಧಾರಕ್ಕೆ ಬರಲು ಸಚಿವಾಲಯ ತೀರ್ಮಾನಿಸಿತ್ತು.

ಯೋಜನೆಗೆ ಅನುಮತಿ ನೀಡಿದರೆ ‘ದೇಶದ ಭದ್ರತೆಯ ಜತೆ ರಾಜಿ ಮಾಡಿಕೊಂಡಂತಾಗುತ್ತದೆ’ ಎಂಬ ಕಾರಣಕ್ಕೆ ಅನುಮತಿ ನೀಡದಿರಲು ಸರ್ಕಾರ ನಿರ್ಧರಿಸಿದೆ. ರಕ್ಷಣಾ ಸಚಿವಾಲಯ ಈ ಯೋಜನೆಗೆ ಆಕ್ಷೇಪ ವ್ಯಕ್ತಪಡಿಸಿತ್ತಲ್ಲದೆ, ‘ಇದರಿಂದ ದೇಶದ ಭದ್ರತೆಗೆ ಗಂಭೀರ ಅಪಾಯವಿದೆ’ ಎಂದಿತ್ತು.

2008ರಲ್ಲಿ ಮುಂಬೈ ಮೇಲೆ ನಡೆದ ದಾಳಿ ಮಾದರಿಯ ಭಯೋತ್ಪಾದಕ ದಾಳಿಗಳಿಗೆ ಅವಕಾಶ ಮಾಡಿಕೊಟ್ಟಂತಾಗುತ್ತದೆ ಎಂದು ಭದ್ರತಾ ಸಂಸ್ಥೆಗಳು ಸರ್ಕಾರವನ್ನು ಎಚ್ಚರಿಸಿದ್ದವು. ಪಾಕಿಸ್ತಾನ ಮೂಲದ ಅಮೆರಿಕ ಉಗ್ರ ಡೇವಿಡ್‌ ಹೆಡ್ಲಿ ಒದಗಿಸಿದ್ದ ಛಾಯಾಚಿತ್ರಗಳ ನೆರವಿನಿಂದ ಉಗ್ರರು 2008 ರಲ್ಲಿ ಮುಂಬೈ ಮೇಲೆ ದಾಳಿ ನಡೆಸಿದ್ದರು.

ಪ್ರಾಯೋಗಿಕವಾಗಿ ಜಾರಿಯಾಗಿತ್ತು: ಗೂಗಲ್‌ ಈ ತಂತ್ರಜ್ಞಾನವನ್ನು 2007ರಲ್ಲಿ ಜಗತ್ತಿಗೆ ಪರಿಚಯಿಸಿತ್ತು. ಆರಂಭದಲ್ಲಿ ಅಮೆರಿಕದ ನಗರಗಳನ್ನು ಇದರಲ್ಲಿ ಸೇರಿಸಿತ್ತು. ಆ ಬಳಿಕ ಈ ಸೇವೆಯನ್ನು ಇತರ ದೇಶಗಳಿಗೂ ವಿಸ್ತರಿಸಿತ್ತು. ಅಮೆರಿಕ, ಕೆನಡಾ ಮತ್ತು ಯೂರೋಪಿನ ಹಲವಾರು ದೇಶಗಳಲ್ಲಿ ‘ಸ್ಟ್ರೀಟ್‌ವ್ಯೂ’ ಆ್ಯಪ್‌ ಸಾಕಷ್ಟು ಜನಪ್ರಿಯತೆ ಪಡೆದಿದೆ.

2011 ರಲ್ಲಿ ಗೂಗಲ್‌ ಭಾರತದಲ್ಲೂ ಇದನ್ನು ಪ್ರಾಯೋಗಿಕವಾಗಿ ಪರಿಚಯಿಸಿ ಮೈಸೂರು ಅರಮನೆ, ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ, ತಂಜಾವೂರು ದೇವಾಲಯ, ವಾರಾಣಸಿ ನದಿ ದಂಡೆ, ತಾಜ್‌ಮಹಲ್‌, ಕೆಂಪು ಕೋಟೆ ಮತ್ತು ಕುತುಬ್‌ ಮಿನಾರ್‌ ಸೇರಿದಂತೆ ಕೆಲವು ತಾಣಗಳನ್ನು ಆ್ಯಪ್‌ಗೆ ಸೇರಿಸಿತ್ತು.

ಬೆಂಗಳೂರು ಪೊಲೀಸರ ವಿರೋಧ: ಗೂಗಲ್‌ ಕಂಪೆನಿ ಸಿಬ್ಬಂದಿ ಬೆಂಗಳೂರಿನಲ್ಲಿ ಛಾಯಾಚಿತ್ರಗಳನ್ನು ಸೆರೆಹಿಡಿಯುತ್ತಿದ್ದ ವೇಳೆ ಪೊಲೀಸರು ತಡೆದಿದ್ದರು. ಆ ಬಳಿಕ ಗೂಗಲ್‌ ಭಾರತದಲ್ಲಿ ತನ್ನ ಪ್ರಾಯೋಗಿಕ ಸೇವೆಯನ್ನು ಸ್ಥಗಿತಗೊಳಿಸಿತ್ತು. ಬೆಂಗಳೂರಿನ ಸುರಕ್ಷತೆಯ ದೃಷ್ಟಿಯಿಂದ ಈ ಕ್ರಮ ಕೈಗೊಂಡಿದ್ದಾಗಿ ಪೊಲೀಸರು ತಿಳಿಸಿದ್ದರಲ್ಲದೆ, ಗೃಹ ಸಚಿವಾಲಯದ ಅನುಮತಿ ಪಡೆಯುವ ತನಕ ಗೂಗಲ್‌ ತನ್ನ ಕಾರ್ಯ ಮುಂದುವರಿಸುವಂತಿಲ್ಲ ಎಂದಿದ್ದರು.

ಏನಿದು ಸ್ಟ್ರೀಟ್‌ ವ್ಯೂ?
ಗೂಗಲ್‌ ಕಂಪೆನಿ ತನ್ನ ಗೂಗಲ್‌ ಮ್ಯಾಪ್ ಮತ್ತು ಗೂಗಲ್‌ ಅರ್ಥ್‌ನಲ್ಲಿ ಬಳಕೆದಾರರಿಗೆ ‘ಸ್ಟ್ರೀಟ್‌ ವ್ಯೂ’ ಸೇವೆ ಕಲ್ಪಿಸಿದೆ. ಈ ಆ್ಯಪ್‌ ಮೂಲಕ ಬಳಕೆದಾರರಿಗೆ 360 ಡಿಗ್ರಿ ಕೋನದಲ್ಲಿ ಪ್ರವಾಸಿ ಸ್ಥಳ, ನದಿ, ಪರ್ವತ, ನಗರಗಳ ವೀಕ್ಷಣೆ ಸಾಧ್ಯ. ಈ ಆ್ಯಪ್‌ನಲ್ಲಿ ಸೇರಿಸಿರುವ ತಾಣಗಳ ಸಂಪೂರ್ಣ ವಿವರವನ್ನು ನಿಖರವಾಗಿ ನೋಡಬಹುದು. ಇಲ್ಲಿ ತ್ರಿಡಿ ತಂತ್ರಜ್ಞಾನ ಬಳಸಿದ್ದು, ಒಂದು ಸ್ಥಳದಲ್ಲಿ ನಿಂತು ಎಲ್ಲ ಭಾಗಗಳನ್ನು ನೋಡಿದ ಅನುಭವ ದೊರೆಯುತ್ತದೆ.

Comments are closed.