ಜೈಪುರ್: ಅತ್ಯಾಚಾರ ಸಂತ್ರಸ್ತೆ ಜೊತೆ ರಾಜಸ್ತಾನ ಮಹಿಳಾ ಆಯೋಗದ ಸದಸ್ಯೆ ಸೆಲ್ಫಿ ತೆಗೆದು ಕೊಂಡ ಘಟನೆ ಭಾರೀ ವಿವಾದಕ್ಕೆ ಕಾರಣವಾಗಿದೆ.
ಉತ್ತರ ಜೈಪುರ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಸಂತ್ರಸ್ತೆಯನ್ನು ಭೇಟಿಯಾಗಲು ರಾಜಸ್ತಾನ ಮಹಿಳಾ ಆಯೋಗ ತೆರಳಿತ್ತು. ಆಯೋಗದ ಅಧ್ಯಕ್ಷೆ ಸುಮನ್ ಶರ್ಮಾ ಪೊಲೀಸರಿಂದ ವಿವರಣೆ ಪಡೆಯುತ್ತಿದ್ದರು. ಈ ವೇಳೆ ಸದಸ್ಯೆ ಸೌಮ್ಯ ಗುರ್ಜಾರ್ ಸಂತ್ರಸ್ತೆಯೊಂದಿಗೆ ಸೆಲ್ಫಿ ತೆಗೆದುಕೊಂಡಿದ್ದಾರೆ.
ಸದಸ್ಯೆ ಸೌಮ್ಯ ಗುರ್ಜಾರ್ ಕ್ಲಿಕ್ಕಿಸಿದ ಎರಡು ಸೆಲ್ಫಿಗಳು ಈಗಾಗಲೇ ಸಾಮಾಜಿಕ ಮಾಧ್ಯಮ ವಾಟ್ಸಾಪ್ ನಲ್ಲಿ ವೈರಲ್ ಆಗಿದೆ. ಇಂಥ ಅಸಂವೇದನಾಶೀಲ ನಡವಳಿಕೆಗೆ ನನ್ನ ಬೆಂಬಲ ಇಲ್ಲ, ಹೀಗಾಗಿ ಈ ಸಂಬಂಧ ವಿವರಣೆ ನೀಡುವಂತೆ ಸೌಮ್ಯ ಗುಜ್ಜಾರ್ ಅವರಿಗೆ ಸೂಚಿಸಿರುವುದಾಗಿ ಆಯೋಗದ ಅಧ್ಯಕ್ಷೆ ಸುಮನ್ ಶರ್ಮಾ ತಿಳಿಸಿದ್ದಾರೆ.
ಸೆಲ್ಫಿ ತೆಗೆದುಕೊಳ್ಳುತ್ತಿರುವ ಬಗ್ಗೆ ನನಗೆ ಅರಿವು ಇರಲಿಲ್ಲ, ಸೌಮ್ಯ ತೆಗೆದುಕೊಂಡ ಫೋಟೋ ನನಗೆ ವಾಟ್ಸಾಪ್ ನಲ್ಲಿ ಬಂತು, ಆ ಫೋಟೋ ಫ್ರೇಮ್ ನಲ್ಲಿ ನಾನು ಇರುವುದು ನೋಡಿ ನನಗೆ ಶಾಕ್ ಆಯ್ತು. ಹೀಗಾಗಿ ಕೂಡಲೇ ವಿವರಣೆ ನೀಡುವಂತೆ ಸೂಚಿಸಿರುವುದಾಗಿ ತಿಳಿಸಿದ್ದಾರೆ.
ರಾಜಸ್ತಾನದ ಅಲ್ವಾರ್ ಜಿಲ್ಲೆಯಲ್ಲಿ ವರದಕ್ಷಿಣೆ ತರಲಿಲ್ಲ ಎಂಬ ಕಾರಣಕ್ಕೆ ಪತಿ ಮತ್ತು ಆತನ ಇಬ್ಬರು ಸಹೋದರರು 30 ವರ್ಷದ ಮಹಿಳೆಯ ಮೇಲೆ ಅತ್ಯಾಚಾರ ನಡೆಸಿದ್ದರು. ಈ ಸಂಬಂಧ ಸಂತ್ರಸ್ತೆ ಭೇಟಿ ಮಾಡಲು ಮಹಿಳಾ ಆಯೋಗ ಪೊಲೀಸ್ ಠಾಣೆಗೆ ತೆರಳಿತ್ತು.
Comments are closed.