ಹೈದರಾಬಾದ್: ವ್ಯಕ್ತಿಯೊಬ್ಬ ತನ್ನ ಹೆಂಡತಿಯನ್ನು ತುಂಡುತುಂಡಾಗಿ ಕತ್ತರಿಸಿ ಬೆಂಕಿ ಹಚ್ಚಿ ಸುಟ್ಟ ಘಟನೆ ಹೈದರಾಬಾದ್‍ನಲ್ಲಿ ನಡೆದಿದೆ.
ವೃತ್ತಿಯಲ್ಲಿ ಸ್ಟಾಕ್ ಬ್ರೋಕರ್ ಆಗಿರುವ 35 ವರ್ಷದ ರೂಪೇಶ್ ಕುಮಾರ್ ಅಗರ್‍ವಾಲ್ ಈ ಕೃತ್ಯವೆಸಗಿದ್ದಾನೆ. ಈತ ತನ್ನ ಪತ್ನಿ ಸಿಂಥಿಯಾಳನ್ನು ಕೊಂದು ಆಕೆಯ ಶವವನ್ನ ಕತ್ತರಿಸಿ ಸೂಟ್‍ಕೇಸ್‍ನಲ್ಲಿ ತುಂಬಿ ತನ್ನ ಐದು ವರ್ಷದ ಮಗಳೊಂದಿಗೆ ನಗರದ ಹೊರವಲಯದಲ್ಲಿ ಸುಡಲು ಹೋಗಿದ್ದ. ಶವವಿದ್ದ ಸೂಟ್‍ಕೇಸ್‍ಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದ. ಇದನ್ನು ನೋಡಿದ ಗ್ರಾಮಸ್ಥರು ಈತನ ಮೇಲೆ ಅನುಮಾನಗೊಂಡು ಪೊಲೀಸರಿಗೆ ವಿಷಯ ಮುಟ್ಟಿಸಿದ ನಂತರ ಪ್ರಕರಣ ಬೆಳಕಿಗೆ ಬಂದಿದೆ.
ಆಫ್ರಿಕಾ ಮೂಲದವಳಾದ ಸಿಂಥಿಯಾಳನ್ನು ಮದುವೆಯಾಗಿದ್ದ ರೂಪೇಶ್‍ಗೆ 5 ವರ್ಷದ ಮಗಳಿದ್ದಾಳೆ. ರೂಪೇಶ್ ಮತ್ತು ಸಿಂಥಿಯಾ ನಡುವೆ ಪ್ರತಿದಿನ ಜಗಳವಾಗುತ್ತಿತ್ತು. ಶೇರ್ ವ್ಯವಹಾರದಲ್ಲಿ ಈತ ಹಣ ಕಳೆದುಕೊಂಡಿದ್ದರಿಂದ ಇಬ್ಬರ ನಡುವೆ ವಾಗ್ವಾದ ನಡೆದಿತ್ತು ಎನ್ನಲಾಗಿದೆ. ಅಲ್ಲದೆ ರೂಪೇಶ್‍ನ ಅನೈತಿಕ ಸಂಬಂಧಕ್ಕೆ ಹೆಂಡತಿ ಅಡ್ಡಿಯಾಗಿದ್ದರಿಂದ ಆಕೆಯನ್ನು ಕೊಲೆಗೈದಿದ್ದಾನೆ ಅಂತಲೂ ಹೇಳಲಾಗ್ತಿದೆ. ಸದ್ಯಕ್ಕೆ ಶಂಶಾಬಾದ್ ಪೊಲೀಸರು ಆರೋಪಿ ರೂಪೇಶ್‍ನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.
Comments are closed.