
ನವದೆಹಲಿ: ಉತ್ಪಾದನಾ ವೆಚ್ಚ ಕಡಿಮೆಯಾಗಿರುವ ಕಾರಣ ಯೂರಿಯಾ ಬಿಟ್ಟು ಉಳಿದ ರಸಗೊಬ್ಬರಗಳ ದರವನ್ನು ಕಡಿತಗೊಳಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ಕಳೆದ 15 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಡಿಎಪಿ, ಎಂಓಪಿ ಮತ್ತು ಎನ್‌ಪಿಕೆ ಗೊಬ್ಬರಗಳ ದರವನ್ನು ಕಡಿಮೆ ಮಾಡಲು ನಿರ್ಧರಿಸಲಾಗಿದೆ. ತಕ್ಷಣದಿಂದಲೇ ಪರಿಷ್ಕೃತ ದರ ಜಾರಿಯಾಗಲಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಅನಂತಕುಮಾರ್ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ವಸ್ತುವಿನ ದರ ಕಡಿಮೆಯಾಗಿರುವ ಕಾರಣ, ಸಹಜವಾಗಿ ಉತ್ಪಾದನಾ ವೆಚ್ಚವೂ ಕಡಿಮೆಯಾಗಿದೆ. ಪ್ರತಿ ಆರು ತಿಂಗಳಿಗೊಮ್ಮೆ ರಸಗೊಬ್ಬರ ಉತ್ಪಾದಕರೊಂದಿಗೆ ಪರಿಶೀಲನಾ ಸಭೆ ನಡೆಸುವ ಇಲಾಖೆಯು ಪ್ರಸಕ್ತ ಮುಂಗಾರಿನಿಂದಲೇ ರೈತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ದರ ಇಳಿಸಲು ಕ್ರಮ ಕೈಗೊಂಡಿದೆ ಎಂದು ಅವರು ಹೇಳಿದರು.
ಪ್ರತಿ ಟನ್ ಡಿಎಪಿ ಗೊಬ್ಬರದ ದರ ₹ 2,500 ಕಡಿಮೆಯಾಗಲಿದ್ದು, 50 ಕೆ.ಜಿ.ಯ ಪ್ರತಿ ಚೀಲಕ್ಕೆ ₹ 125, ಪ್ರತಿ ಟನ್ ಎಂಓಪಿ ದರ ₹ 5,000 ಕಡಿಮೆಯಾಗಲಿದ್ದು, ಪ್ರತಿ ಚೀಲಕ್ಕೆ ₹ 250, ಪ್ರತಿ ಟನ್ ಎನ್‌ಪಿಕೆ ಗೊಬ್ಬರದ ದರ ₹ 1000 ಕಡಿಮೆಯಾಗಲಿದ್ದು, ಪ್ರತಿ ಚೀಲದ ದರ ₹ 50 ಕಡಿಮೆಯಾಗಲಿದೆ ಎಂದು ಅವರು ವಿವರ ನೀಡಿದರು.
ದೇಶದಲ್ಲಿ ಪ್ರತಿ ವರ್ಷ ಅಂದಾಜು 1 ಕೋಟಿ ಟನ್ ಡಿಎಪಿ, 25 ಲಕ್ಷ ಟನ್ ಎಂಓಪಿ, 92 ಲಕ್ಷ ಟನ್ ಪಿಎಂಕೆ ರಸಗೊಬ್ಬರ ಬಳಕೆಯಾಗುತ್ತಿದೆ. ದರ ಕಡಿಮೆ ಆಗಿರುವುದರಿಂದ ರೈತರ ₹ 4,500 ಕೋಟಿ ಉಳಿತಾಯವಾಗಲಿದೆ ಎಂದು ಅವರು ಹೇಳಿದರು.
ದೇಶದಾದ್ಯಂತ ಕಳೆದ ಎರಡು ವರ್ಷಗಳಲ್ಲಿ ತೀವ್ರ ಬರದ ಛಾಯೆ ಆವರಿಸಿದ್ದು, ಈ ಬಾರಿ ಉತ್ತಮ ಮಳೆ ಸುರಿಯುತ್ತಿದೆ. ರೈತರು ಮುಂಗಾರು ಹಂಗಾಮಿನಲ್ಲಿ ಬಂಪರ್ ಬೆಳೆಯ ನಿರೀಕ್ಷೆಯಲ್ಲಿದ್ದಾರೆ. ಕೇಂದ್ರ ಸರ್ಕಾರವು ರಸಗೊಬ್ಬರ ಬೆಲೆಯನ್ನು ಕಡಿಮೆ ಮಾಡುವ ಮೂಲಕ ಬರಗಾಲದಿಂದ ನಷ್ಟಕ್ಕೊಳಗಾಗಿ ಕಂಗಾಲಾಗಿರುವ ರೈತರಿಗೆ ಅನುಕೂಲ ಕಲ್ಪಿಸುತ್ತಿದೆ ಎಂದು ಅವರು ತಿಳಿಸಿದರು.
ಕಳೆದ ಎರಡು ವರ್ಷಗಳ ಅವಧಿಯಲ್ಲಿ ಯೂರಿಯಾ ಗೊಬ್ಬರದ ಅಭಾವ ಎದುರಾಗದಂತೆ ಸರ್ಕಾರ ಅಗತ್ಯ ಕ್ರಮ ಕೈಗೊಂಡಿದೆ. ಬೇವು ಮಿಶ್ರಿತ ಯೂರಿಯಾ ಪೂರೈಕೆಗೆ ಕ್ರಮ ಕೈಗೊಂಡ ನಂತರ ಅಕ್ರಮ ಬಳಕೆಗೆ ಕಡಿವಾಣ ಬಿದ್ದಿದ್ದು, ಕಾಳಸಂತೆಯನ್ನೂ ನಿಯಂತ್ರಿಸಲಾಗಿದೆ. ಪ್ರಸಕ್ತ ವರ್ಷ ಬೇಡಿಕೆಗಿಂತ ಅಧಿಕ ಪ್ರಮಾಣದಲ್ಲಿ ರಸಗೊಬ್ಬರ ಪೂರೈಕೆ ಮಾಡಲಾಗಿದೆ ಎಂದು ಅನಂತಕುಮಾರ್ ಹೇಳಿದರು.
ಸಗಟು ಮಾರುಕಟ್ಟೆಯಲ್ಲಿ ಯೂರಿಯಾದ ಜೊತೆಗೆ ರೈತರಿಗೆ ಅಗತ್ಯವಿಲ್ಲದಿದ್ದರೂ ಕಾಂಪ್ಲೆಕ್ಸ್ ಗೊಬ್ಬರವನ್ನೂ ಮಾರಾಟ ಮಾಡುತ್ತಿದ್ದ ವ್ಯಾಪಾರಿಗಳ ಮೇಲೆ ನಿಗಾ ಇರಿಸಲಾಗಿದ್ದು, ರೈತರ ಸುಲಿಗೆ ತಪ್ಪಿಸಲಾಗಿದೆ. ಎರಡು ವರ್ಷಗಳ ಹಿಂದೆ ಉತ್ಪಾದನೆ ಸ್ಥಗಿತಗೊಳಿಸಿದ್ದ ಮೂರು ಬೃಹತ್ ರಸಗೊಬ್ಬರ ಕಾರ್ಖಾನೆಗಳು ಪುನರ್ ಆರಂಭವಾಗಿದ್ದು, ಇದರಿಂದಾಗಿ ವಾರ್ಷಿಕ ಹೆಚ್ಚುವರಿಯಾಗಿ 30 ಲಕ್ಷ ಟನ್ ಗೊಬ್ಬರ ಲಭ್ಯವಾಗುತ್ತಿದೆ. ಬೇಡಿಕೆಗೆ ಅನುಗುಣವಾದ ಪೂರೈಕೆಗೆ ಗಮನ ಹರಿಸಲಾಗಿದೆ ಎಂದರು.
* ಪ್ರಸಕ್ತ ಮುಂಗಾರು, ಹಿಂಗಾರು ಹಂಗಾಮಿನಲ್ಲಿ ರಸಗೊಬ್ಬರದ ಕೊರತೆಆಗದಂತೆ ಸರ್ಕಾರ ಕ್ರಮ ಕೈಗೊಂಡಿದೆ. ‘ಕೃಷಿ ಭೂಮಿ ಉಳಿಸಿ– ಕೃಷಿಕರ ಉಳಿಸಿ’ ಕಾರ್ಯಕ್ರಮ ಯಶಸ್ವಿಯಾಗಿದೆ
-ಅನಂತಕುಮಾರ್
ರಾಸಾಯನಿಕ ಮತ್ತು ರಸಗೊಬ್ಬರ ಸಚಿವ
Comments are closed.