ರಾಷ್ಟ್ರೀಯ

ಗಲಭೆ ಪೀಡಿತ ಕಾಶ್ಮೀರ ನಿಯಂತ್ರಣಕ್ಕೆ ಭಾರತೀಯ ಸೇನೆಯ ಮಾಸ್ಟರ್ ಪ್ಲಾನ್; “ಮಫ್ತಿ ಕಾರ್ಯಾಚರಣೆ”!

Pinterest LinkedIn Tumblr

kashmir-violenceಶ್ರೀನಗರ: ಗಲಭೆ ಪೀಡಿತ ಕಾಶ್ಮೀರದಲ್ಲಿ ಹಿಂಸಾಚಾರ ನಿಯಂತ್ರಣಕ್ಕೆ ಮತ್ತು ಒಳ ನುಸುಳಿ ಜನರ ಮಧ್ಯೆ ಅಲೆಯುತ್ತಿರುವ ಉಗ್ರರ ಪತ್ತೆಗೆ ಭಾರತೀಯ ಸೇನೆ ದೊಡ್ಡ ಮಾಸ್ಟರ್ ಪ್ಲಾನ್ ಮಾಡಿದ್ದು, ಉಗ್ರ ಕಾರ್ಯತಂತ್ರವನ್ನು ಅವರಿಗೇ ತಿರುಗುಬಾಣವಾಗುವಂತೆ ಮಾಡಲು ಯೋಜನೆ ರೂಪಿಸಿದೆ.

ಅದರಂತೆ ಪ್ರಸ್ತುತ ಉಗ್ರರು ಹೇಗೆ ಸಾಮಾನ್ಯ ಪ್ರಜೆಗಳ ವೇಷಧರಿಸಿ ಕಣಿವೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುತ್ತಿದ್ದಾರೆಯೋ ಅಂತೆಯೇ ಭಾರತೀಯ ಸೇನೆಯ ಉನ್ನತ ಮಟ್ಟದ ಗುಪ್ತಚರ ಅಧಿಕಾರಿಗಳು ಕೂಡ ಸಾಮಾನ್ಯ ಜನರಂತೆ ಅಂದರೆ ಮಫ್ತಿಯಲ್ಲಿ ಕಾರ್ಯಾಚರಣೆ ನಡೆಸುವ ಮೂಲಕ ಉಗ್ರರನ್ನು ಬಂಧಿಸುವ ಕಾರ್ಯಾಚರಣೆ ರೂಪಿಸಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಮೂಲಗಳ ಪ್ರಕಾರ ಗಲಭೆ ಪೀಡಿತ ಕಾಶ್ಮೀರದಲ್ಲಿ ಈಗಾಗಲೇ ಯೋಧರು ಇಂತಹ ಉನ್ನತ ಮಟ್ಟದ ಕಾರ್ಯಾಚರಣೆಗೆ ಇಳಿದಿದ್ದು, ಉಗ್ರರ ಕುರಿತು ಮಾಹಿತಿ ಕಲೆಹಾಕಿದ್ದಾರೆ ಎಂದು ತಿಳಿದುಬಂದಿದೆ. ಅದರಂತೆ ಗಲಭೆ ಪೀಡಿತ ಕಾಶ್ಮೀರದಲ್ಲಿ ಸುಮಾರು 150ಕ್ಕೂ ಹೆಚ್ಚು ಉಗ್ರರು ಹಿಂಸಾಚಾರದಲ್ಲಿ ಪಾಲ್ಗೊಂಡಿದ್ದಾರೆ ಎಂಬ ಮಹತ್ವದ ಮಾಹಿತಿಯನ್ನು ಕಲೆ ಹಾಕಲಾಗಿದ್ದು, ಈ ಪೈಕಿ 89 ಮಂದಿ ಉಗ್ರ ಸಂಘಟನೆ ಬೆಂಬಲಿತ ಮತ್ತು ಉಗ್ರವಾದದತ್ತ ಮುಖ ಮಾಡಿರುವ ಸ್ಥಳೀಯ ಯುವಕರಾಗಿದ್ದರೆ, ಪಾಕಿಸ್ತಾನದಿಂದ ಭಾರತಕ್ಕೆ ನುಸುಳಿರುವ 60 ಮಂದಿ ಉಗ್ರರು ಗಲಭೆ ಪೀಡಿತ ದಕ್ಷಿಣ ಕಾಶ್ಮೀರದ ಪುಲ್ವಾಮ, ಅನಂತನಾಗ್, ಕುಲ್ಗಾಮ್ ಮತ್ತು ಶೋಪಿಯಾನ್ ನಗರಗಳಲ್ಲಿ ವೇಷಮರೆಸಿಕೊಂಡು ಅಲೆಯುತ್ತಿರುವ ಕುರಿತು ಮಹತ್ವದ ಮಾಹಿತಿ ಕಲೆಹಾಕಿದ್ದಾರೆ.

ಇನ್ನು ಹಿಂಸಾಚಾರ ಪೀಡಿತ ಕಣಿವೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯನ್ನು ಮತ್ತೆ ತಹಬದಿಗೆ ತರುವ ನಿಟ್ಟಿನಲ್ಲಿ ಭಾರತೀಯ ಸೇನೆ ಕೈಗೊಂಡಿರುವ ಈ ಮಹತ್ವದ ಕಾರ್ಯಾಚರಣೆಯಲ್ಲಿ ರಾಷ್ಟ್ರೀಯ ರೈಫಲ್ಸ್ ಪಡೆಯ ಯೋಧರು, ಉನ್ನತ ಮಟ್ಟದ ಧಂಗೆ ನಿಗ್ರಹ ಘಟಕದ ಯೋಧರು ಪಾಲ್ಗೊಂಡಿದ್ದು, ಸ್ಥಳೀಯ ಪೊಲೀಸರು ಸೇನೆಯೊಂದಿಗೆ ಕೈಜೋಡಿಸಿದ್ದಾರೆ.
ಗುಂಪು-ಗುಂಪಾಗಿ ಕಾರ್ಯಾಚರಣೆ ಬೇಡ; ಸೈನಿಕರಿಗೆ ಸೇನಾಧಿಕಾರಿಗಳ ಸೂಚನೆ
ಗಲಭೆ ಪೀಡಿತ ಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಸೈನಿಕರಿಗೆ ಭಾರತೀಯ ಸೇನೆಯ ಅಧಿಕಾರಿಗಳು ವಿಶೇಷ ಸೂಚನೆ ನೀಡಿದ್ದು, ಕಾರ್ಯಾಚರಣೆ ಸಂದರ್ಭದಲ್ಲಿ ಗುಂಪು-ಗುಂಪಾಗಿ ಕೆಲಸ ನಿರ್ವಹಿಸುವುದಕ್ಕಿಂತಲೂ ಅಲ್ಲಲ್ಲಿ ಚದುರಿ ಹೋಗುವಂತೆ ಸೂಚಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಗುಂಪು-ಗುಂಪಾಗಿರುವ ಸೈನಿಕರ ಮೇಲೆ ಕಲ್ಲು ತೂರಾಟದಂತಹ ಪ್ರಕರಣಗಳು ಹೆಚ್ಚಾಗುತ್ತಿದ್ದು, ಈ ವೇಳೆ ಹಲವು ಸೈನಿಕರಿಗೆ ಗಾಯಗಳಾಗುತ್ತಿವೆ. ಇದೇ ಕಾರಣಕ್ಕೆ ಸೇನಾಧಿಕಾರಿಗಳು ಇಂತಹ ಸಲಹೆ ನೀಡಿದ್ದಾರೆ ಎಂದು ಕಾರ್ಯಾಚರಣೆ ನಡೆಸುತ್ತಿರುವ ಸೇನಾಧಿಕಾರಿಯೊಬ್ಬರು ಹೇಳಿದ್ದಾರೆ.
“ಇಂದಿನಿಂದ ಪ್ಯಾರಾಮಿಲಿಟರಿ ಪಡೆಗಳನ್ನು ಹೊರತುಪಡಿಸಿ ಉಳಿದ ಸೇನಾಪಡೆಗಳನ್ನು ಕಡಿತಗೊಳಿಸಲಾಗಿದ್ದು, ಸಾಮೂಹಿಕ ಕಾರ್ಯಾಚರಣೆಗಿಂತಲೂ ಗೌಪ್ಯ ಕಾರ್ಯಾಚರಣೆಗೆ ಹೆಚ್ಚಿನ ಮಹತ್ವ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.
ಒಟ್ಟಾರೆ ಹಿಂಸಾಚಾರ ಪೀಡಿತ ಕಾಶ್ಮೀರವನ್ನು ಶತಾಯಗತಾಯ ಶಾಂತಿಗೊಳಿಸಲು ಭಾರತೀಯ ಸೇನೆ ಹಸಸಾಹಸ ಪಡುತ್ತಿದ್ದು, ಇದಕ್ಕೆ ಇದೀಗ ವಿನೂತನ ಯೋಜನೆಯನ್ನು ಹೂಡಿದೆ. ಸೇನೆಯ ಈ ವಿನೂತನ ಯೋಜನೆ ಎಷ್ಟರಮಟ್ಟಿಗೆ ಫಲ ನೀಡುತ್ತದೆ ಎಂಬುದನ್ನು ಕಾದುನೋಡಬೇಕಿದೆ.

Comments are closed.