ಇಂಗ್ಲೆಂಡ್ನಲ್ಲಿರುವ ಭಾರತ ಮೂಲದ ಇರಾ ಸಕ್ಸೇನಾ ಎಂಬ 9ರ ಬಾಲಕಿಗೆ ವಿಚಿತ್ರ ಸಮಸ್ಯೆಯೊಂದು ಎದುರಾಗಿದೆ. ಕಳೆದ ಮೂರು ವಾರಗಳಿಂದ ಆಕೆ ನಿರಂತರವಾಗಿ ದಿನಕ್ಕೆ 8000 ಬಾರಿ ಸೀನಲು ಆರಂಭಿಸಿದ್ದಾಳಂತೆ. ಪ್ರತಿ ನಿಮಿಷಕ್ಕೆ ಕನಿಷ್ಠ 10 ಬಾರಿ ಆಕೆ ಸೀನುತ್ತಾಳಂತೆ. ಈಕೆಯನ್ನು ಹಲವು ವೈದ್ಯರ ಬಳಿ ಕರೆದೊಯ್ದು ತೋರಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಇರಾಳ ತಾಯಿ ಪ್ರಿಯಾ ಸಕ್ಸೇನಾ ತಿಳಿಸಿದ್ದಾರೆ. ಆಕೆಗೆ ಶೀತ ಅಥವಾ ಅಲರ್ಜಿಯ ಸಮಸ್ಯೆಯಿಲ್ಲ ಎಂದು ಆಕೆಯನ್ನು ಪರೀಕ್ಷಿಸಿದ್ದ ವೈದ್ಯರು ಹೇಳಿದ್ದಾರೆ. ಆದರೆ ಸೀನು ಮಾತ್ರ ನಿಲ್ಲುತ್ತಿಲ್ಲ.
ನಿದ್ದೆ ಮಾಡುತ್ತಿರುವಾಗ ಹೊರತುಪಡಿಸಿ ದಿನವಿಡೀ ಆಕೆ ಸೀನುತ್ತ ಇರುತ್ತಾಳೆ. ಇದರಿಂದಾಗಿ ಈ ಬಾಲಕಿಗೆ ಶಾಲೆಗೆ ಹೋಗಲೂ ಸಾಧ್ಯವಿಲ್ಲದಾಗಿದೆ. ಮೂರು ವಾರಗಳ ಹಿಂದೆ ಆಕೆ ಬೆಳಗ್ಗೆ ನಿದ್ದೆಯಿಂದ ಏಳುತ್ತಿದ್ದಂತೆ ಸೀನಲು ಆರಂಭಿಸಿದ್ದಳು. ಕೆಲ ಹೊತ್ತಿನ ಬಳಿಕ ನಿಲ್ಲಬಹುದು ಎಂದು ಆಕೆಯ ತಾಯಿ ಸುಮ್ಮನಾಗಿದ್ದರು. ಹಾಗಾಗದೇ ನಿರಂತರವಾಗಿ ಸೀನುವುದರಿಂದ ಆಕೆಯ ಆರೋಗ್ಯದ ಮೇಲೂ ಪರಿಣಾಮವಾಗಿದೆಯಂತೆ.
ವಿವಿಧ ತಜ್ಞ ವೈದ್ಯರು ಆಕೆಯನ್ನು ಪರೀಕ್ಷಿಸಿದ್ದು, ಸೀನಿಗೆ ನಿಖರ ಕಾರಣ ಪತ್ತೆಹಚ್ಚಲು ವಿಫಲರಾಗಿದ್ದಾರೆ. ಸಮಸ್ಯೆ ಏನೆಂದು ಅರಿಯದೇ, ಇರಾ ಸಕ್ಸೇನಾ ಇದೀಗ ತೊಂದರೆ ಎದುರಿಸುವಂತಾಗಿದೆ. ಆಕೆಯ ಮಿದುಳು ಅಥವಾ ನರಮಂಡಲದಿಂದ ಯಾವುದೋ ಒಂದು ತಪ್ಪಾದ ಸಂಕೇತ ಬರುತ್ತಿರುವುದರಿಂದ ಆಕೆ ಸೀನುತ್ತಿರಬಹುದು, ಆದರೆ ಅದನ್ನು ವೈದ್ಯರು ದೃಢಪಡಿಸಿಲ್ಲ.
ಆಕೆಗೆ ಈಗ ವಿವಿಧ ರೀತಿಯ ಚಿಕಿತ್ಸಾ ಪದ್ಧತಿ ಬಳಸಿದರೂ, ಗುಣಮುಖವಾಗದ ಹಿನ್ನೆಲೆಯಲ್ಲಿ ಹೋಮಿಯೋಥೆರಪಿಯನ್ನು ಬಳಸಿ ನೋಡುತ್ತಿದ್ದಾರಂತೆ. ಜತೆಗೆ ನಿದ್ದೆ ಮಾಡಿದರೆ ಮಾತ್ರ ಸೀನು ನಿಲ್ಲುವುದರಿಂದ ಆಕೆಯನ್ನು ಬಲವಂತವಾಗಿ ನಿದ್ದೆ ಮಾಡಿಸುತ್ತಿದ್ದಾರಂತೆ. ಜತೆಗೆ ಮಾಧ್ಯಮದ ಮೂಲಕ ಆಕೆಯ ತಾಯಿ ಮಗಳ ಸಮಸ್ಯೆಗೆ ಪರಿಹಾರ ಸೂಚಿಸಿ ಎಂದು ಕೇಳಿಕೊಂಡಿದ್ದಾರೆ.
Comments are closed.