ಗಾಂಧಿನಗರ: ಗುಜರಾತ್ ನ ಮೊದಲ ಮಹಿಳಾ ಮುಖ್ಯಮಂತ್ರಿ ಎಂಬ ಕೀರ್ತಿಗೆ ಪಾತ್ರರಾಗಿದ್ದ ಆನಂದಿಬೆನ್ ಪಟೇಲ್ ಅವರು ಇದೀಗ ಅವಧಿಗೂ ಮುನ್ನವೇ ಸಿಎಂ ಸ್ಥಾನಕ್ಕೆ ರಾಜಿನಾಮೆ ನೀಡುವ ಇಂಗಿತ ವ್ಯಕ್ತಪಡಿಸಿದ್ದಾರೆ.
ಆನಂದಿಬೆನ್ ಪಟೇಲ್ ಅವರು ತಮ್ಮ ಇಚ್ಛೆಯನ್ನು ವ್ಯಕ್ತಪಡಿಸಿ ತಮ್ಮ ಫೇಸ್ ಬುಕ್ ಮೂಲಕ ಬಿಜೆಪಿ ಹೈಕಮಾಂಡ್ ಗೆ ಮನವಿ ಮಾಡಿಕೊಂಡಿದ್ದಾರೆ. ಮುಂಬರುವ ಗುಜರಾತ್ ವಿಧಾನಸಭೆ ಚುನಾವಣೆ ಹಿನ್ನೆಲೆ ಹೊಸ ನಾಯಕತ್ವ ವಹಿಸಿಕೊಳ್ಳುವವರಿಗೆ ಹೆಚ್ಚಿನ ಸಮಯಾವಕಾಶ ಸಿಗಲಿದೆ ಎಂದು ಆನಂದಿಬೆನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಪಟೇಲ್ ಮೀಸಲಾತಿ ಚಳವಳಿ, ದಲಿತ ದೌರ್ಜನ್ಯ ಪ್ರಕರಣಗಳಿಂದಾಗಿ ಗುಜರಾತ್ ನಲ್ಲಿ ಆಡಳಿತ ವಿರೋಧಿ ಅಲೆ ಸೃಷ್ಠಿಯಾಗಿದೆ. 2017ರಲ್ಲಿ ಗುಜರಾತ್ ವಿಧಾನಸಭೆ ಚುನಾವಣೆ ನಡೆಯಲಿರುವುದರಿಂದ ಬಿಜೆಪಿಗೆ ತೀವ್ರ ಸಂಕಷ್ಟ ಎದುರಾಗಿದೆ. ಈ ಮಧ್ಯೆ ಚುನಾವಣೆ ದೃಷ್ಠಿಯಿಂದಾಗಿ ನಾಯಕತ್ವದ ಬದಲಾವಣೆ ಅವಶ್ಯಕತೆ ಎದುರಾಗಿದೆ. ಒಂದೆಡೆ ವೃದ್ಧಾಪ್ಯ ಹಾಗೂ ಆಡಳಿತ ವಿರೋಧಿ ಅಲೆ ಸೃಷ್ಠಿಯಾಗಿರುವುದರಿಂದ ಆನಂದಿಬೆನ್ ರಾಜಿನಾಮೆಗೆ ಇಂಗಿತ ವ್ಯಕ್ತಪಡಿಸಲು ಕಾರಣವಾಗಿದೆ.
ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಲು ಆನಂದಿಬೆನ್ ಇಂಗಿತ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ 2017ರ ಚುನಾವಣೆಗೂ ಮುನ್ನ ನೂತನ ಮುಖ್ಯಮಂತ್ರಿ ಆಯ್ಕೆ ನಡೆಯುವ ಸಾಧ್ಯತೆ ಇದೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ತವರಾಗಿರುವ ಗುಜರಾತ್ ನಲ್ಲಿ ಸದ್ಯ ಆಡಳಿತ ವಿರೋಧಿ ಅಲೆ ಹೆಚ್ಚಾಗಿದ್ದು, ಇದನ್ನು ಮೆಟ್ಟಿ ನಿಲ್ಲುವಂತ ನಾಯಕನ ಆಯ್ಕೆಗೆ ಬಿಜೆಪಿ ಕಸರತ್ತು ನಡೆಸಬೇಕಿದೆ. ಗುಜರಾತ್ ಚುನಾವಣೆ ಮುಂದಿನ ಲೋಕಸಭೆ ಚುನಾವಣೆ ಮೇಲೂ ಪ್ರಭಾವ ಬೀರುವ ಸಾಧ್ಯತೆಗಳು ದಟ್ಟವಾಗಿರುವುದರಿಂದ ಬಿಜೆಪಿ ಎಚ್ಚರಿಕೆಯ ಹೆಜ್ಜೆ ಇಡಬೇಕಿದೆ.
Comments are closed.