ನವದೆಹಲಿ: ನಿರುದ್ಯೋಗಿಗಳಾಗಿ ಆಹಾರಕ್ಕಾಗಿ ಪರದಾಡುತ್ತಿರುವ ಸುಮಾರು 10 ಸಾವಿರ ಭಾರತೀಯರನ್ನು ಸ್ವದೇಶಕ್ಕೆ ವಾಪಸ್ ಕರೆತರಲು ಕೇಂದ್ರ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಂಡಿರುವಂತೆಯೇ ಅಲ್ಲಿ ನಿರಾಶ್ರಿತರಾಗಿರುವ ಭಾರತೀಯರ ಪರಿಸ್ಥಿತಿ ಪರಿಶೀಲನೆಗಾಗಿ ವಿದೇಶಾಂಗ ಖಾತೆ ಸಹಾಯಕ ಸಚಿವ ನಿವೃತ್ತ ಜನರಲ್ ವಿ.ಕೆ.ಸಿಂಗ್ ಅವರು ಇಂದು ಸೌದಿ ಅರೇಬಿಯಾಕ್ಕೆ ತೆರಳಿದ್ದಾರೆ.
ಸೌದಿ ಅರೇಬಿಯಾದಲ್ಲಿ ಉದ್ಯೋಜಗಗಳನ್ನು ಕಳೆದುಕೊಂಡು ಆಹಾರಕ್ಕಾಗಿ ಪರದಾಡುವ ಸ್ಥಿತಿ ತಲುಪಿರುವ 10 ಸಾವಿರ ಭಾರತೀಯರನ್ನು ಕರೆತರಲು ಸರ್ಕಾರ ಅಗತ್ಯವಿರುವ ಎಲ್ಲ ಕ್ರಮಗಳನ್ನೂ ತೆಗೆದುಕೊಳ್ಳಲಾಗುವುದು ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ನಿನ್ನೆ ರಾಜ್ಯಸಭೆಗೆ ಭರವಸೆ ನೀಡಿದ್ದರು.
ಪ್ರಸ್ತುತ 10 ಸಾವಿರಕ್ಕೂ ಹೆಚ್ಚು ಭಾರತೀಯರು ಅಲ್ಲಿರಲಾರದೆ, ಇಲ್ಲಿಗೆ ಬರಲೂ ಆಗದೆ ಸಿಕ್ಕಿಹಾಕಿಕೊಂಡು ಪರಿತಪಿಸುತ್ತಿದ್ದಾರೆ. ಈಗಾಗಲೇ ರಿಯಾದ್‍ನಲ್ಲಿರುವ ಭಾರತೀಯ ಸಂಸ್ಥೆಗೆ ಸೂಚಿಸಲಾಗಿದ್ದು, ಭಾರತೀಯರಿಗೆ ಉಚಿತ ಆಹಾರ ಧಾನ್ಯ, ಅಗತ್ಯ ವಸ್ತುಗಳನ್ನು ವಿತರಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ಸುಷ್ಮಾ ಸ್ವರಾಜ್ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಸುಷ್ಮಾ ಸ್ವರಾಜ್ ಅವರು ತಮ್ಮ ಸಂಪುಟ ಸಹೋದ್ಯೋಗಿ ವಿ.ಕೆ.ಸಿಂಗ್ ಅವರನ್ನು ಸೌದಿ ಅರೇಬಿಯಾಕ್ಕೆ ಕಳುಹಿಸಿಕೊಟ್ಟಿದ್ದು, ಅವರು ಅಲ್ಲಿನ ಭಾರತೀಯರ ಪ್ರಸ್ತುತ ಸ್ಥಿತಿಗತಿಗಳ ಬಗ್ಗೆ ವರದಿ ನೀಡಲಿದ್ದಾರೆ.
Comments are closed.