ರಾಷ್ಟ್ರೀಯ

ಕೈಕಾಲು ಕಟ್ಟಿ, ಬೆಂಕಿ ಹಚ್ಚಿದನಾ ಸೋದರಿಯ ಪ್ರಿಯತಮ!?

Pinterest LinkedIn Tumblr

Burn-Webಮೀರತ್: ಮೊನ್ನೆ ಮೊನ್ನೆಯಷ್ಟೇ ತಾಯಿ ಮತ್ತು ಮಗಳ ಸಾಮೂಹಿಕ ಅತ್ಯಾಚಾರ ಪ್ರಕರಣದಿಂದ ತತ್ತರಿಸಿದ್ದ ಇಲ್ಲಿನ ಬುಲಂದ್ ಶಹರ್ನಲ್ಲಿ ಮಂಗಳವಾರ ಮತ್ತೊಂದು ಪ್ರಕರಣ ಜನತೆಯನ್ನು ಇನ್ನಷ್ಟು ಭಯಕ್ಕೊಳಗಾಗುವಂತೆ ಮಾಡಿದ್ದು, ತಡವಾಗಿ ಬೆಳಕಿಗೆ ಬಂದಿದೆ. 12 ವರ್ಷದ ಬಾಲಕನೊಬ್ಬನನ್ನು ಮೂರನೇ ಮಹಡಿಯೊಂದಕ್ಕೆ ಬಲವಂತವಾಗಿ ಕರೆದೊಯ್ದು ಕೈಕಾಲು ಕಟ್ಟಿ ಸೀಮೆಎಣ್ಣೆ ಸುರಿದು ಸಾಯಿಸಿದ ಘಟನೆ ನಡೆದಿದೆ.

ಈ ಭೀಕರ ಘಟನೆ ಇಲ್ಲಿನ ಪೊಲೀಸ್ ಲೇನ್ ರಸ್ತೆಯಲ್ಲಿರುವ ಕಟ್ಟಡವೊಂದರಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿರುವ ಪೊಲೀಸರು ಈಗ ಬಾಲಕನ ಸೋದರಿಯನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ಪ್ರಾಥಮಿಕ ವರದಿಯ ಪ್ರಕಾರ ಈ ಕೃತ್ಯದಲ್ಲಿ ಬಾಲಕನ ಸೋದರಿಯ ಕೈವಾಡ ಇರುವುದು ಬಹುತೇಕ ಖಚಿತ ಎನ್ನುವ ಶಂಕೆ ವ್ಯಕ್ತಪಡಿಸಿದ್ದಾರೆ.

ಮೂಲಗಳ ಪ್ರಕಾರ ಟ್ಯಾಕ್ಸಿ ಡ್ರೖೆವರ್ ರಾಕೇಶ್ ಸಿಂಗ್ ಮತ್ತು ಪತ್ನಿ ಮಂಜು ದಂಪತಿ ಪುತ್ರ ಸಾವನ್ನಪ್ಪಿರುವ ಬಾಲಕನಾಗಿದ್ದು, ದಂಪತಿ ದಿನಗೂಲಿಯಿಂದ ಸಂಸಾರ ನಡೆಸುತ್ತಿತ್ತು. ಮಂಗಳವಾರ ಬೆಳಗ್ಗೆ ಎಂದಿನಂತೆ ಕೆಲಸಕ್ಕೆ ತೆರಳಿದಾಗ ಘಟನೆ ಸಂಭವಿಸಿದ್ದು, ಬಳಿಕ ಪುತ್ರಿಯೇ ಕರೆಮಾಡಿ ತಮ್ಮ ಬೆಂಕಿಯಿಂದ ಸುಟ್ಟುಹೋಗಿದ್ದಾನೆ ಎಂದು ತಿಳಿಸಿದ್ದಾಳೆ ಎಂದು ಹೇಳಲಾಗಿದೆ.

ದಂಪತಿ ಮನೆಗೆ ಬಂದು ನೋಡಿದಾಗ ಮಗನ ಕೈಕಾಲು ಕಟ್ಟಿರುವ ಸ್ಥಿತಿಯಲ್ಲಿ ಅರೆಬೆಂದ ಶವವಾಗಿದ್ದ. ಅಲ್ಲಿಯೇ ಕೆರೋಸಿನ್ ಕ್ಯಾನ್ ಕೂಡ ಪತ್ತೆಯಾಗಿದೆ. ದಂಪತಿ ಪೊಲೀಸರಿಗೆ ತಿಳಿಸಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಈ ಬಗ್ಗೆ ಕೊಟ್ವಾಲಿ ಠಾಣೆಯ ಹಿರಿಯ ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದು, ಬಾಲಕನ ಸೋದರಿ, 16 ವರ್ಷದ ಯುವತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದೇವೆ. ಮೇಲ್ನೋಟಕ್ಕೆ ಆಕೆ ಬಾಲಕನೊಬ್ಬನ ಜೊತೆ ಸಂಬಂಧ ಇರಿಸಿಕೊಂಡಿರುವುದು ಗೊತ್ತಾಗಿದೆ. ಆದರೆ ಆತನ ಹೆಸರು ಹೇಳಲಿಕ್ಕಾಗದು. ಆದರೆ ಬಾಲಕ ಶಾಲೆಯಲ್ಲಿರುವುದು ತನಿಖೆಯಿಂದ ಗೊತ್ತಾಯಿತು. ಬಳಿಕ ಆಕೆ ಇನ್ನೊಬ್ಬನ ಸ್ನೇಹಿತನ ಹೆಸರು ಹೇಳಿದ್ದು ಆತನೂ ಭಾಗಿಯಲ್ಲ ಎನ್ನುವುದು ಗೊತ್ತಾಗಿದೆ. ಇಷ್ಟೆಲ್ಲಾ ಹೇಳಿದ ಬಳಿಕ ಇನ್ನೊಬ್ಬ ಬಾಲಕನ ಹೆಸರು ಹೇಳಿದ್ದು, ಆತನಿಗಾಗಿ ಹುಡುಕಾಟ ನಡೆಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ಒಟ್ಟಾರೆ ಈ ಪ್ರಕರಣ ಸಾಕಷ್ಟು ಕುತೂಹಲ ಕೆರಳಿಸಿದ್ದು, ಸೋದರಿಯ ಪ್ರೇಮ ಪ್ರಕರಣಕ್ಕೆ ತಮ್ಮ ಬಲಿಯಾದನೇ ಎನ್ನುವುದು ಇನ್ನಷ್ಟೇ ಖಚಿತಗೊಳ್ಳಬೇಕಿದೆ.

Comments are closed.