ರಾಷ್ಟ್ರೀಯ

‘ಕಾಶ್ಮೀರ ಸಮಸ್ಯೆಯ ಮೂಲ ಗಿಲ್ಗಿಟ್‌- ಬಲ್ತಿಸ್ತಾನ್‌’

Pinterest LinkedIn Tumblr

Gilgittದಲ್ಲಾಸ್‌, ಅಮೆರಿಕ (ಪಿಟಿಐ): ತಾನು ಆಕ್ರಮಿಸಿಕೊಂಡಿರುವ ಕಾಶ್ಮೀರದ ಗಿಲ್ಗಿಟ್‌- ಬಲ್ತಿಸ್ತಾನ್‌ ಪ್ರದೇಶವನ್ನು ಪಾಕಿಸ್ತಾನ ತನ್ನ ‘ಹಿಡಿತ’ದಿಂದ ಮುಕ್ತಗೊಳಿಸಿದರೆ ಕಾಶ್ಮೀರ ಸಮಸ್ಯೆ ಬಗೆಹರಿಯಲು ಸಹಾಯವಾಗಲಿದೆ ಎಂದು ಅಮೆರಿಕದ ಸ್ವಯಂಸೇವಾ ಸಂಸ್ಥೆ ‘ಇನ್‌ಸ್ಟಿಟ್ಯೂಟ್‌ ಫಾರ್‌ ಗಿಲ್ಗಿಟ್‌- ಬಲ್ತಿಸ್ತಾನ್‌ ಸ್ಟಡೀಸ್‌’ ಹೇಳಿದೆ.

‘ಗಿಲ್ಗಿಟ್‌- ಬಲ್ತಿಸ್ತಾನ್‌ ಪ್ರದೇಶವನ್ನು ಪಾಕಿಸ್ತಾನವು ‘ಆಕ್ರಮಿಸಿಕೊಂಡಿದೆ’ ಎಂಬುದನ್ನು ಆ ದೇಶಕ್ಕೆ ನೆನಪಿಸಬೇಕಿದೆ. ಪಾಕಿಸ್ತಾನ ಗಿಲ್ಗಿಟ್‌- ಬಲ್ತಿಸ್ತಾನ್‌ ಪ್ರದೇಶದ ಅತಿಕ್ರಮಣಕಾರ ಎಂಬುದನ್ನು ಭಾರತ ಸೇರಿದಂತೆ ಪಾಕ್‌ನ ನೆರೆಹೊರೆಯ ರಾಷ್ಟ್ರಗಳು ಹಾಗೂ ಅಂತರರಾಷ್ಟ್ರೀಯ ಸಮುದಾಯ ಮನವರಿಕೆ ಮಾಡಿಕೊಡಬೇಕಿದೆ’ ಎಂದು ‘ಇನ್‌ಸ್ಟಿಟ್ಯೂಟ್‌ ಫಾರ್‌ ಗಿಲ್ಗಿಟ್‌- ಬಲ್ತಿಸ್ತಾನ್‌ ಸ್ಟಡೀಸ್‌’ನ ಅಧ್ಯಕ್ಷ ಸೇಂಜ್‌ ಸೆರಿಂಗ್‌ ಹೇಳಿದ್ದಾರೆ.

‘ಕಾಶ್ಮೀರ ಸಮಸ್ಯೆಯ ಮೂಲ ಗಿಲ್ಗಿಟ್‌- ಬಲ್ತಿಸ್ತಾನ್‌ ಪ್ರದೇಶ. ಪಾಕಿಸ್ತಾನವು ಗಿಲ್ಗಿಟ್‌- ಬಲ್ತಿಸ್ತಾನ್‌ ಪ್ರದೇಶದಿಂದ ಹಿಂದೆ ಸರಿದರೆ ಕಾಶ್ಮೀರ ಸಮಸ್ಯೆಯನ್ನು ಆದಷ್ಟು ಬೇಗ ಬಗೆಹರಿಸಿಕೊಳ್ಳಬಹುದು’ ಎಂದು ಸೇಂಜ್‌ ಸೆರಿಂಗ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ಗಿಲ್ಗಿಟ್‌- ಬಲ್ತಿಸ್ತಾನ್‌ ಪ್ರದೇಶದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯ ಬಗ್ಗೆ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದನಿ ಎತ್ತಿರುವುದು ಸಕಾರಾತ್ಮಕ ಬೆಳವಣಿಗೆ’ ಎಂದು ಸೇಂಜ್‌ ಹೇಳಿದ್ದಾರೆ.

‘ಪಾಕಿಸ್ತಾನವು ಗಿಲ್ಗಿಟ್‌- ಬಲ್ತಿಸ್ತಾನ್‌ ಪ್ರದೇಶಕ್ಕೆ ಅತಿಕ್ರಮಣ ಮಾಡಿದೆ ಎಂಬುದನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ತನ್ನ ನಿರ್ಣಯದಲ್ಲಿ ಘೋಷಿಸಿದೆ’ ಎಂದು ಸೇಂಜ್‌ ತಿಳಿಸಿದ್ದಾರೆ.

‘ವಿವಾದಿತ ಪ್ರದೇಶವಾಗಿರುವ ಗಿಲ್ಗಿಟ್‌- ಬಲ್ತಿಸ್ತಾನ್‌ನ ಜನರಿಗೆ ವಿಶ್ವಸಂಸ್ಥೆಯ ಪ್ರತಿನಿಧಿಗಳೊಂದಿಗೆ ನೇರವಾಗಿ ಮಾತನಾಡುವ ಹಕ್ಕಿದೆ. ಕಾಶ್ಮೀರ ರಾಜ್ಯ ಸರ್ಕಾರ ಮತ್ತು ಭಾರತ ಸರ್ಕಾರ ಈ ವಿವಾದವನ್ನು ಆದಷ್ಟು ಬೇಗ ಬಗೆಹರಿಸಲು ಮುಂದಾಗಬೇಕು’ ಎಂದಿದ್ದಾರೆ.

Comments are closed.