ನವದೆಹಲಿ (ಪಿಟಿಐ): ಉಗ್ರ ಸಂಘಟನೆ ಜೆಇಎಂ ಮುಖ್ಯಸ್ಥ ಮಸೂದ್ ಅಜರ್ ನಿಷೇಧಿಸುವ ವಿಶ್ವಸಂಸ್ಥೆಯ ಕ್ರಮಕ್ಕೆ ತಡೆ ಹಾಕಿದ್ದ ಚೀನಾ ನಿಲುವನ್ನು ಭಾರತ ಪ್ರಶ್ನಿಸಿದೆ.
ಭಾರತದ ಪ್ರವಾಸದಲ್ಲಿರುವ ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ಅವರು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರನ್ನು ಭೇಟಿ ಮಾಡಿದ ಸಂದರ್ಭ ದಲ್ಲಿ ಈ ವಿಚಾರ ಪ್ರಸ್ತಾಪವಾಯಿತು.
ಪರಮಾಣು ಪೂರೈಕೆ ರಾಷ್ಟ್ರಗಳ ಗುಂಪಿನ (ಎನ್‌ಎಸ್‌ಜಿ) ಸದಸ್ಯತ್ವ ಪಡೆಯುವುದಕ್ಕೆ ವಿರೋಧ ವ್ಯಕ್ತಪಡಿಸಿದ ಚೀನಾ ಧೋರಣೆಯನ್ನೂ ಸುಷ್ಮಾ ಪ್ರಸ್ತಾಪ ಮಾಡಿದರು. ಎನ್‌ಎಸ್‌ಜಿ ಸದಸ್ಯತ್ವ ವಿಚಾರವನ್ನು ಎರಡೂ ರಾಷ್ಟ್ರಗಳ ನಿಶಸ್ತ್ರೀಕರಣ ವಿಭಾಗದ ಮಹಾ ನಿರ್ದೇಶಕರು ಚರ್ಚೆ ನಡೆಸುವ ಬಗ್ಗೆ ವಾಂಗ್ ಮತ್ತು ಸ್ವರಾಜ್ ಒಪ್ಪಿಕೊಂಡರು.
ಈ ಎರಡು ವಿಚಾರದಿಂದಾಗಿ ಉಭಯ ರಾಷ್ಟ್ರಗಳ ದ್ವಿಪಕ್ಷೀಯ ಸಂಬಂಧಕ್ಕೆ ಧಕ್ಕೆ ಬಂದಿರುವುದರಿಂದ ವಿದೇಶಾಂಗ ಕಾರ್ಯದರ್ಶಿಗಳ ಮಟ್ಟದಲ್ಲಿ ಈ ಬಗ್ಗೆ ಚರ್ಚೆ ನಡೆಸಿ ಹೊಸ ಮಾರ್ಗೋಪಾಯಗಳನ್ನು ಕಂಡುಕೊಳ್ಳಲು ಉಭಯ ನಾಯಕರೂ ಒಪ್ಪಿಕೊಂಡಿದ್ದಾರೆ.
ಚರ್ಚೆಯ ಸಂದರ್ಭದಲ್ಲಿ ಪಾಕ್ ಅಕ್ರಮಿತ ಕಾಶ್ಮೀರದಲ್ಲಿ (ಪಿಒಕೆ) ಅಭಿವೃದ್ಧಿ ಆಗುತ್ತಿರುವ ಚೀನಾ–ಪಾಕಿಸ್ತಾನ ಆರ್ಥಿಕ ಹೆದ್ದಾರಿ ಬಗ್ಗೆ ಸುಷ್ಮಾ ಅವರು ಆತಂಕ ವ್ಯಕ್ತಪಡಿಸಿದರು. ಗಡಿಯಲ್ಲಿನ ಪರಿಸ್ಥಿತಿಯ ಬಗ್ಗೆಯೂ ಚರ್ಚೆ ನಡೆಸಿದ ಸಚಿವರು, ಶಾಂತಿ ಕಾಪಾಡಲು ಇನ್ನಷ್ಟು ಬಿಗಿ ಕ್ರಮ ತೆಗೆದುಕೊಳ್ಳಲು ನಿರ್ಧರಿಸಿದರು.
ಶುದ್ಧ ಇಂಧನ ಬೇಡಿಕೆಯನ್ನು ಈಡೇರಿಸುವ ಉದ್ದೇಶದಿಂದ ಪರಮಾಣು ಪೂರೈಕೆ ರಾಷ್ಟ್ರಗಳ ಗುಂಪಿಗೆ ಸೇರುವ ಭಾರತದ ಪ್ರಯತ್ನವನ್ನು ಬೆಂಬಲಿಸಬೇಕು ಎಂದು ಸುಷ್ಮಾ, ಚೀನಾ ವಿದೇಶಾಂಗ ಸಚಿವರನ್ನು ಕೋರಿದರು.
ಈ ವಿಚಾರದಲ್ಲಿ ಯಾವುದೇ ರೀತಿಯ ತಾಂತ್ರಿಕ ಗೊಂದಲವಿದ್ದರೆ ಆ ಬಗ್ಗೆ ಚರ್ಚೆ ನಡೆಸಲು ಭಾರತ ಸಿದ್ಧವಿದೆ ಎಂದರು. ಮೂರು ದಿನಗಳ ಭಾರತ ಪ್ರವಾಸದಲ್ಲಿರುವ ವಾಂಗ್ ಅವರು ಶುಕ್ರವಾರ ಸಂಜೆ ಪ್ರಧಾನಿ ಮೋದಿ ಅವರನ್ನು ಭೇಟಿ ಮಾತುಕತೆ ನಡೆಸಿದರು.
ಗೋವಾದಲ್ಲಿ ಭಾರತದ ನೇತೃತ್ವದಲ್ಲಿ ನಡೆಯಲಿರುವ ಬ್ರಿಕ್ಸ್ ಶೃಂಗಸಭೆಯ ಸಿದ್ಧತೆಯ ಬಗ್ಗೆ ವಾಂಗ್ ಮತ್ತು ಸುಷ್ಮಾ ಸ್ವರಾಜ್ ಚರ್ಚಿಸಿದರು ಎಂದು ವಿದೇಶಾಂಗ ಖಾತೆಯ ವಕ್ತಾರ ವಿಕಾಸ್ ಸ್ವರೂಪ್ ಟ್ವೀಟ್ ಮಾಡಿದ್ದಾರೆ.
Comments are closed.