ರಾಷ್ಟ್ರೀಯ

ವಿಶ್ವಸಂಸ್ಕೃತಿ ಉತ್ಸವದಿಂದ ಯಮುನಾ ದಂಡೆ ಸಂಪೂರ್ಣ ನಾಶ

Pinterest LinkedIn Tumblr

Sri-Sri-Ravi-Shankarನವದೆಹಲಿ: ಶ್ರೀ ಶ್ರೀ ರವಿಶಂಕರ್‌ ಗುರೂಜಿ ಅವರ ಆರ್ಟ್‌ ಆಫ್ ಲಿವಿಂಗ್‌ ದೆಹಲಿಯ ಯಮುನಾ ದಂಡೆ ಮೇಲೆ ಆಯೋಜಿಸಿದ್ದ ‘ವಿಶ್ವಸಂಸ್ಕೃತಿ ಉತ್ಸವ’ದಿಂದಾಗಿ ಯಮುನಾ ನದಿ ದಂಡೆ ಪ್ರದೇಶ ಸಂಪೂರ್ಣವಾಗಿ ನಾಶವಾಗಿದೆ ಎಂದು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದ ರಚಿಸಿದ್ದ ತಜ್ಞರ ಸಮಿತಿ ವರದಿ ಹೇಳಿದೆ. 47 ಪುಟಗಳ ವರದಿಯಲ್ಲಿ ಯಮುನಾ ದಂಡೆಯ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ವಿವರವಾಗಿ ಮಾಹಿತಿ ನೀಡಲಾಗಿದೆ.

ವರದಿಯಲ್ಲಿ ಏನಿದೆ?

1. ಮಾ.11ರಿಂದ 13ರವರೆಗೆ ನಡೆದ ಈ ಕಾರ್ಯಕ್ರಮದಲ್ಲಿ ಯಮುನಾ ನದಿ ದಂಡೆ ಸಂಪೂರ್ಣ ನಾಶವಾಗಿದೆ. ಅಲ್ಲಿನ ಹಸಿರು ಹುಲ್ಲುಗಾವಲು, ಪೊದೆ ಎಲ್ಲವೂ ನಾಶವಾಗಿದೆ.

2. ನೀರಿನಲ್ಲಿ ಬೆಳೆಯುವ ಗಂಟೆ ಹೂ ಮತ್ತು ಇತರ ಸಸಿಗಳು ನಾಶವಾಗಿದ್ದು, ಸುತ್ತಮುತ್ತಲಿರುವ ಜೀವಿಗಳ ಬದುಕಿಗೆ ಹಾನಿಯುಂಟಾಗಿದೆ.

3. ಆ ಪ್ರದೇಶವನ್ನು ಸಮತಟ್ಟಾಗಿಸಿದ್ದು, ನೀರಿನ ಹರಿವಿಗೆ ಧಕ್ಕೆಯಾಗಿದೆ. ಅದು ಅಲ್ಲಿನ ಪ್ರಾಣಿ ಮತ್ತು ಸಸ್ಯಗಳ ಬದುಕಿಗೆ ಸಂಚಕಾರವನ್ನುಂಟು ಮಾಡಿದೆ.

4.ಉತ್ಸವಕ್ಕೆ ನಿರ್ಮಿಸಿದ ಬೃಹತ್ ವೇದಿಕೆಗೆ ಹಲವು ರೀತಿಯ ವಸ್ತುಗಳನ್ನು ಬಳಸಲಾಗಿದ್ದು, ದಂಡೆಯನ್ನು ಅದು ಕುಗ್ಗಿಸಿದ್ದು ಮಾತ್ರವಲ್ಲದೆ ಭಾರೀ ಪ್ರಮಾಣದ ಅವಶೇಷಗಳನ್ನು ವೇದಿಕೆ ರ್‍ಯಾಂಪ್‌ ನಿರ್ಮಾಣಕ್ಕೆ ಬಳಸಲಾಗಿದ್ದು ಪರಿಸರ ಹಾನಿಯಾಗಲು ಕಾರಣವಾಗಿದೆ.

5. ದೊಡ್ಡ ವೇದಿಕೆ ನಿರ್ಮಾಣ, ರಸ್ತೆ ನಿರ್ಮಾಣಗಳು ಸ್ವಾಭಾವಿಕ ಪರಿಸರವನ್ನು ಹಾಳುಗೆಡವಿದೆ.

ಏನಿದು ವಿವಾದ?
ಶ್ರೀ ಶ್ರೀ ರವಿಶಂಕರ್‌ ಗುರೂಜಿ ಅವರ ಆರ್ಟ್‌ ಆಫ್ ಲಿವಿಂಗ್‌ ಸಂಸ್ಥೆಗೆ ದೆಹಲಿಯ ಯಮುನಾ ನದಿ ತಟದಲ್ಲಿ ವಿಶ್ವ ಸಂಸ್ಕೃತಿ ಉತ್ಸವ ಆಯೋಜಿಸಲು ನಿರ್ಧರಿಸಿದಾಗಲೇ ಇದಕ್ಕೆ ವಿರೋಧ ವ್ಯಕ್ತವಾಗಿತ್ತು. ಆದಾಗ್ಯೂ, ಈ ಕಾರ್ಯಕ್ರಮದಿಂದಾಗಿ ನದಿ ತಟಕ್ಕೆ ಹಾನಿಯಾಗುವ ಸಾಧ್ಯತೆ ಇದೆ. ಈ ಕಾರಣದಿಂದ ರು.5 ಕೋಟಿ ಹಣವನ್ನು ಪರಿಹಾರವಾಗಿ ಪಾವತಿಸುವಂತೆ ಹಸಿರು ನ್ಯಾಯಾಧಿಕರಣ ಸೂಚಿಸಿತ್ತು.

ಆದರೆ ಹಣ ಪಾವತಿ ಮಾಡಲು ತನಗೆ 4 ವಾರ ಸಮಯ ಬೇಕೆಂದು ಸಂಸ್ಥೆ ನ್ಯಾಯಾಲಯದ ಮೊರೆ ಹೋಗಿತ್ತು. ನಂತರ ರು. 25 ಲಕ್ಷ ಪಾವತಿ ಮಾಡುವಂತೆ ಸೂಚಿಸಿದ್ದ ನ್ಯಾಯಾಲಯ ಕಾರ್ಯಕ್ರಮಕ್ಕೆ ಅನುಮತಿ ನೀಡಿತ್ತು. ನಂತರ ಜೂನ್‌ 6ರಂದು ಸಂಸ್ಥೆಯು ಬಾಕಿ ರು. 4.75 ಕೋಟಿ ಹಣವನ್ನು ಪಾವತಿ ಮಾಡಿತ್ತು. ಕಾರ್ಯಕ್ರಮ ಮುಗಿದ ನಂತರ ಯಮುನಾ ನದಿ ಮತ್ತು ಸುತ್ತು ಮುತ್ತಲಿನ ಪರಿಸರಕ್ಕೆ ಭಾರೀ ಹಾನಿಯಾಗಿದೆ ಎಂಬ ವರದಿಯನ್ನು ಗಂಭೀರವಾಗಿ ಪರಿಗಣಿಸಿದ ಹಸಿರು ನ್ಯಾಯಾಧಿಕರಣ, ಈ ಬಗ್ಗೆ ತಜ್ಞರ ತಂಡವನ್ನು ರಚಿಸಿ ವರದಿ ಸಲ್ಲಿಸುವಂತೆ ಹೇಳಿತ್ತು.

ಕೇಂದ್ರ ಜಲಸಂಪನ್ಮೂಲ ಸಚಿವಾಲಯದ ಕಾರ್ಯದರ್ಶಿ ಶಶಿ ಶೇಖರ್‌ ನೇತೃತ್ವದಲ್ಲಿ 7 ಜನರ ತಜ್ಞರ ತಂಡ ವನ್ನು ಇದಕ್ಕಾಗಿ ನಿಯೋಜಿಸಲಾಗಿತ್ತು. ಇತ್ತ ಸಮಿತಿಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದ ಆರ್ಟ್‌ ಆಫ್ ಲಿವಿಂಗ್‌ ಸಂಸ್ಥೆ ಸಮಿತಿ ಪುನಾರಚನೆಗೆ ಕೋರಿದ್ದು ,ಇದನ್ನು ನ್ಯಾಯಾಧಿಕರಣ ತಿರಸ್ಕರಿಸಿತ್ತು.

Comments are closed.