ರಾಷ್ಟ್ರೀಯ

ಬೆಳ್ಳಿ ಬೆಡುಗು : ತವರಿನಲ್ಲಿ ಕುಸುಮ ಬಾಲೆಯ ಕಲರವ

Pinterest LinkedIn Tumblr

sindhuಹೈದರಾಬಾದ್, ಆ ೨೨- ಮಹಿಳೆಯ ಬ್ಯಾಡ್ಮಿಂಟನ್‌ನಲ್ಲಿ ಬೆಳ್ಳಿ ಪದಕ ಗಳಿಸಿ ಇತಿಹಾಸ ನಿರ್ಮಿಸಿದ್ದ ಭಾರತದ ಆಟಗಾರ್ತಿ ಪಿ.ವಿ. ಸಿಂಧು ಹಾಗೂ ಕೋಚ್ ಗೋಪಿಚಂದ್ ಅವರಿಗೆ ಇಂದು ಇಲ್ಲಿಯ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಭೂತಪೂರ್ವ ಸ್ವಾಗತ ನೀಡಲಾಯಿತು.

ವಿಮಾನ ನಿಲ್ದಾಣದಲ್ಲಿ ಆಂಧ್ರಪ್ರದೇಶ ಉಪಮುಖ್ಯಮಂತ್ರಿ ಚಲರಾಜಪ್ಪ, ತೆಲಂಗಾಣ ಸಚಿವರಾದ ಕೆ. ತಾರಕರಾಮ್‌ರಾವ್, ಮಹೇಂದ್ರ್ ರೆಡ್ಡಿ, ಶ್ರೀನಿವಾಸ್ ಯಾದವ್, ಆಂಧ್ರ ಸಚಿವರಾದ ಚಿನ್ನ ರಾಜಪ್ಪ, ಉಮಾ ಮಹೇಶ್ವರ್ ಸೇರಿದಂತೆ ಅನೇಕ ಜನ ಪಿವಿ ಸಿಂಧು ಹಾಗೂ ಕೋಚ್ ಗೋಪಿಚಂದ್ ಅವರನ್ನು ಬರ ಮಾಡಿಕೊಂಡರು. ನಂತರ ಹೂವಿನಿಂದ ಸಿಂಗರಿಸಿದ ತೆರೆದ ವಾಹನದಲ್ಲಿ ಕೋಚ್ ಪುಲ್ಲೇಲ ಗೋಪಿಚಂದ್ ಹಾಗೂ ಪಿವಿ ಸಿಂಧು ಅವರನ್ನು ಮೆರವಣಿಗೆ ಮೂಲಕ ಗಚ್ಚಿಬೌಳಿ ಕ್ರೀಡಾಂಗಣಕ್ಕೆ ಕರೆದ್ಯೊಯ್ದರು.

ಕ್ರೀಡಾಂಗಣದಲ್ಲಿ ಜಾನಪದ ಕಲಾವಿದ ಹಾಗೂ ಇತರೆ ಕಲಾವಿದರು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಡುವ ಮೂಲಕ ಗಣ್ಯಾತಿಗಣ್ಯರ ಸಮ್ಮುಖದಲ್ಲಿ ಅದ್ಧೂರಿಯಾಗಿ ಸ್ವಾಗತಿಸಿದರು. ಹಾಗೂ ರಿಯೋ ಒಲಿಂಪಿಕ್ಸ್‌ನಲ್ಲಿ ಅಭೂತಪೂರ್ವ ಸಾಧನೆ ಮಾಡಿರುವ ಪಿವಿ ಸಿಂಧು ಅವರಿಗೆ ಗಚ್ಚಿಬೌಳಿ ಕ್ರೀಡಾಂಗಣದಲ್ಲಿ ಸನ್ಮಾನ ಮಾಡಿ ಗೌರವಿಸಲಾಯಿತು. ಸಿಂಧು ಆಗಮನದ ನಿರೀಕ್ಷೆಯಲ್ಲಿದ್ದ ಅಭಿಮಾನಿಗಳು ಸಿಂಧು ವಿಮಾನ ನಿಲ್ದಾಣಕ್ಕೆ ಬಂದಿಳಿಯುತ್ತಿದ್ದಂತೆ ಜಯ ಘೋಷ ಹಾಕಿದರು. ಉಭಯತರು ನಿಲ್ದಾಣದಲ್ಲಿ ಸೇರಿದ್ದ ತಮ್ಮ ಅಭಿಮಾನಿಗಳತ್ತ ಕೈಬೀಸಿದರು. ಬ್ರೆಜಿಲ್ ನ ರಿಯೋ ಡಿ ಜನೈರೋದಲ್ಲಿ ನಡೆದ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಬ್ಯಾಡ್ಮಿಂಟನ್ ನಲ್ಲಿ ಬೆಳ್ಳಿ ಪದಕ ಗೆದ್ದು ಪಿವಿ ಸಿಂಧುಗೆ ಇತಿಹಾಸ ನಿರ್ಮಿಸಿದ್ದರು.

ರೋಡ್ ಶೋ
ಪಿವಿ ಸಿಂಧು ಹಾಗೂ ಕೋಚ್ ಗೋಪಿಚಂದ್ ಅವರ ವಿಜಯೋತ್ಸವಕ್ಕಾಗಿ ಶಮ್‌ಶದಾಬಾದ್ ವಿಮಾನ ನಿಲ್ದಾಣದಿಂದ ಗಚ್ಚಿಬೌಳಿ ಕ್ರೀಡಾಂಗಣದವರೆಗೆ ತೆರೆದ ಬಸ್ ನಲ್ಲಿ ತೆಲಂಗಾಣ, ಆಂಧ್ರ ಸರ್ಕಾರದಿಂದ ಅದ್ಧೂರಿ ರೋಡ್ ಶೋ ನಡೆಸಲಾಯಿತು. ಮೆರವಣಿಗೆಯಲ್ಲಿ ಕ್ರೀಡಾಪಟುಗಳು, ಕ್ರೀಡಾಭಿಮಾನಿಗಳು, ವಿದ್ಯಾರ್ಥಿಗಳು, ನಾನಾ ಸಂಘಟನೆಯ ಪದಾಧಿಕಾರಿಗಳು ಭಾಗವಹಿಸಿದ್ದರು. ಅತ್ತಪುರ, ಟೆಲಿಚೌಕಿ, ಹಾಗೂ ದುರ್ಗಾ ಖಜಾಗುಡ ಮಾರ್ಗದಲ್ಲಿ ಹಾದು ಹೋದ ಮೆರವಣಿಗೆಯಲ್ಲಿ ಸಾವಿರಾರು ಅಭಿಮಾನಿಗಳು ಸಾಧಕರಿಗೆ ಭವ್ಯ ಸ್ವಾಗತ ಕೋರಿ ತಮ್ಮ ಅಭಿಮಾನ ವ್ಯಕ್ತಪಡಿಸಿದರು.

ಎಲ್ಲೆಡೆ ಸಂಭ್ರಮ
ಪದಕ ಗಳಿಸಿ ನಂತರ ಸಿಂಧು ಇಂದು ತವರಿಗೆ ಆಗಮಿಸುತ್ತಿದ್ದಂತೆ ಆಂಧ್ರ ಹಾಗೂ ತೆಲಂಗಾಣ ರಾಜ್ಯದೆಲ್ಲೆಡೆ ಸಂಭ್ರಮದ ವಾತಾವರಣ ಕಂಡು ಬಂತು. ರಸ್ತೆಯಲ್ಲಿ ವಿದ್ಯಾರ್ಥಿಗಳು ಹಾಗೂ ಮಹಿಳೆಯರು, ಮಕ್ಕಳು ಸಾವಿರಾರು ಅಭಿಮಾನಿಗಳು ನಿಂತು ತಾವೇ ಪದಕ ಗಳಿಸಿದಂತೆ ಸಂಭ್ರಮಿಸಿ ಸಂತಸ ವ್ಯಕ್ತಪಡಿಸಿದ್ದರು.

ತ್ರಿವರ್ಣ ಧ್ವಜ ಹಿಡಿದು ರ್‍ಯಾಲಿ
ಮೆರವಣಿಗೆ ಸಾಗುತ್ತಿದ್ದ ತೆರದ ವಾಹನದ ಮುಂದೆ ನೂರಾರು ಅಭಿಮಾನಿಗಳು ಬೈಕ್‌ನಲ್ಲಿ ತ್ರಿವರ್ಣ ಧ್ವಜ ಹಿಡಿದು ವಿಜೇತರಿಗೆ ಶುಭ ಕೋರುತ್ತಾ ಹಾಗೂ ತ್ರಿವರ್ಣ ಧ್ವಜ ಬಣ್ಣದ ಬಾಲೂನುಗಳನ್ನು ಹಾರಿಬಿಟ್ಟು ಸ್ವಾಗತಿಸಿದ್ದು ವಿಶೇಷವಾದರೆ, ಇನ್ನೊಂದೆಡೆ ಜನರು ಹೂವಿನ ಸುರಿಮಳೆಗೈದು ತಮ್ಮ ಅಭಿಮಾನದ ಪ್ರೀತಿ ತೋರಿಸಿದರು.

ತುಂಬಿ ತುಳುಕುತ್ತಿದ್ದ ಕ್ರೀಡಾಂಗಣ
ದಾರಿಯುದ್ದಕ್ಕೂ ಪುಟಾಣಿಗಳಿಂದ ಅಭಿನಂದನೆ ಸ್ವೀಕರಿಸಿದ ಸಿಂಧು ಅವರನ್ನು ನೋಡಿ ಸ್ವಾಗತಿಸಲು ಕ್ರೀಡಾಂಗಣಕ್ಕೆ ಜನಸಾಗರವೇ ಹರಿದು ಬಂದಿತ್ತು. ಕ್ರೀಡಾಂಗಣದಲ್ಲಿ ಕಲಾವಿದರು ಡಾಪ್ಪು ನೃತ್ಯ ನೋಡುಗರ ಗಮನ ಸೆಳೆದರೆ, ಸಾವಿರಾರು ಶಾಲಾ ಮಕ್ಕಳು ಕ್ರೀಡಾಂಗಣಕ್ಕೆ ಹಾಜರಾಗಿ ‘ಸಿಂಧು ಸಿಂಧು’ ಎಂದು ಜಯಘೋಷ ಹಾಕಿ ಸಂಭ್ರಮಿಸಿದರು. ಇದೇ ವೇಳೆ ತೆಲಂಗಾಣ ಸರಕಾರದ ವತಿಯಿಂದ ಸಿಂಧು ಅವರಿಗೆ ವಿಶೇಷ ಸನ್ಮಾನ ಕಾರ್ಯಕ್ರಮವನ್ನು ಏರ್ಪಡಿಸಲಾಗಿತು.

ಪರೇಡ್
ಕ್ರೀಡಾಂಗಣದಲ್ಲಿ ಸಿಂಧು ಅವರನ್ನು ತೆರದ ಜೀಪ್‌ನಲ್ಲಿ ವಿಜಯೋತ್ಸವದ ಪರೇಡ್ ನಡೆಸುವ ಮೂಲಕ ಸನ್ಮಾನಿಸಲಾಯಿತು ಅಭಿಮಾನಿಗಳತ್ತ ಕೈಬೀಸಿದ ಸಾಧಕರಿಗೆ ಜನರು ಮನತುಂಬಿ ಅಭಿಮಾನ ವ್ಯಕ್ತಪಡಿಸಿದರು. ಹಾಗೂ ಸಿಂಧು ಅವರಿಗೆ ಶಾಲಾ ಮಕ್ಕಳು ಪುಷ್ಪಗುಚ್ಚ ನೀಡಿ ಅಭಿನಂದಿಸಿದರು.

Comments are closed.