ರಾಷ್ಟ್ರೀಯ

ವರದಕ್ಷಿಣೆ ಕಿರುಕುಳ: ಬಂಧನಕ್ಕೆ ಮೊದಲು ಅನುಮತಿ ಅಗತ್ಯ

Pinterest LinkedIn Tumblr

courtನವದೆಹಲಿ:  ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಾದ ಕೂಡಲೇ ಆರೋಪಿಯನ್ನು ಪೊಲೀಸರು ಯಾಂತ್ರಿಕವಾಗಿ ಬಂಧಿಸಬಾರದು ಎಂದು 2014ರಲ್ಲಿ ಸುಪ್ರೀಂ ಕೋರ್ಟ್‌ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ರಾಷ್ಟ್ರೀಯ ಮಹಿಳಾ ಆಯೋಗವು ಸಲ್ಲಿಸಿದ್ದ ಪರಿಹಾರಾತ್ಮಕ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ವಜಾ ಮಾಡಿದೆ.

2014ರ ಜುಲೈ 2ರಂದು ಸುಪ್ರೀಂ ಕೋರ್ಟ್‌ ನೀಡಿದ್ದ ತೀರ್ಪಿನಲ್ಲಿ ಮಧ್ಯಪ್ರವೇಶಿಸುವ ಅಗತ್ಯ ಇಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಟಿ.ಎಸ್‌. ಠಾಕೂರ್‌, ನ್ಯಾಯಮೂರ್ತಿಗಳಾದ ಅನಿಲ್‌ ಆರ್‌. ದವೆ, ಜೆ.ಎಸ್‌. ಖೇಹರ್‌ ಮತ್ತು ಪಿ.ಸಿ. ಘೋಷ್‌ ಅವರನ್ನೊಳಗೊಂಡ ಪೀಠ ಹೇಳಿದೆ.

ವರದಕ್ಷಿಣೆ ಪ್ರಕರಣಗಳಲ್ಲಿ ಆರೋಪಿಗಳನ್ನು ದೂರು ದಾಖಲಾದ ತಕ್ಷಣ ಬಂಧಿಸಬಾರದು ಮತ್ತು ವಶಕ್ಕೆ ಪಡೆಯುವ ಮೊದಲು ಮ್ಯಾಜಿಸ್ಟ್ರೇಟ್‌ರಿಂದ ಅನುಮತಿ ಪಡೆಯಬೇಕು ಎಂದು ವರದಕ್ಷಿಣೆ ತಡೆ ಕಾನೂನು ದುರ್ಬಳಕೆ ತಡೆಯುವುದಕ್ಕಾಗಿ ಸುಪ್ರೀಂ ಕೋರ್ಟ್‌ ನಿರ್ದೇಶನ ನೀಡಿತ್ತು.

ವರದಕ್ಷಿಣೆ ಪ್ರಕರಣಗಳಿಗೆ ಮಾತ್ರವಲ್ಲ, ಗರಿಷ್ಠ ಏಳು ವರ್ಷ ಶಿಕ್ಷೆ ವಿಧಿಸಬಹುದಾದ ಇತರ ಪ್ರಕರಣಗಳಲ್ಲಿಯೂ ಇದು ಅನ್ವಯವಾಯುತ್ತದೆ ಎಂದು ಸುಪ್ರೀಂ ಕೋರ್ಟ್‌ ಹೇಳಿತ್ತು.

ಸುಪ್ರೀಂ ಕೋರ್ಟ್‌ನ ತೀರ್ಪು ಸಂತ್ರಸ್ತ ಮಹಿಳೆಯರ ಹಿತಾಸಕ್ತಿಗೆ ವಿರುದ್ಧವಾಗಿದೆ. ಈ ತೀರ್ಪು ಆರೋಪಿಯನ್ನು ಬಂಧಿಸಬೇಕೇ ಬೇಡವೇ ಎಂಬುದನ್ನು ನಿರ್ಧರಿಸಲು ಪೊಲೀಸರಿಗೆ ನ್ಯಾಯಯುತವಲ್ಲದ ವಿವೇಚನಾಧಿಕಾರ ನೀಡುತ್ತದೆ ಎಂದು ಮಹಿಳಾ ಆಯೋಗ ವಾದಿಸಿತ್ತು.

ಸುಪ್ರೀಂ ಕೋರ್ಟ್‌ 2014ರಲ್ಲಿ ನೀಡಿದ್ದ ನಿರ್ದೇಶನಗಳು
* ಭಾರತೀಯ ದಂಡ ಸಂಹಿತೆಯ 498ಎ ಸೆಕ್ಷನ್‌ ಅಡಿಯಲ್ಲಿ ಆರೋಪಿಯನ್ನು ಯಾಂತ್ರಿಕವಾಗಿ ಬಂಧಿಸದಂತೆ ಪೊಲೀಸ್‌ ಅಧಿಕಾರಿಗಳಿಗೆ ರಾಜ್ಯ ಸರ್ಕಾರಗಳು ಸೂಚಿಸಬೇಕು.

* ಬಂಧನಕ್ಕೆ ಏನೇನು ಕಾರಣಗಳಿರಬೇಕು ಎಂಬ ಪಟ್ಟಿಯನ್ನು ಸರ್ಕಾರವು ಸಿದ್ಧಪಡಿಸಿ ಪೊಲೀಸ್‌ ಅಧಿಕಾರಿಗಳಿಗೆ ನೀಡಬೇಕು.

*ಪೊಲೀಸ್‌ ಅಧಿಕಾರಿಯು ಈ ಪಟ್ಟಿಯನ್ನು ಭರ್ತಿ ಮಾಡಿ, ಸಮರ್ಥನೆಗಳೊಂದಿಗೆ ಮ್ಯಾಜಿಸ್ಟ್ರೇಟ್‌ಗೆ ನೀಡಬೇಕು.

*ಮ್ಯಾಜಿಸ್ಟ್ರೇಟ್‌ ಇದನ್ನು ಪರಿಶೀಲನೆ ಮಾಡಿ ತನಗೆ ಮನವರಿಕೆ ಆದರೆ ಮಾತ್ರ ಬಂಧನ ಆದೇಶ ಹೊರಡಿಸಬೇಕು.

*ಆರೋಪಿಯನ್ನು ಬಂಧಿಸುವ ಅಗತ್ಯ ಇಲ್ಲ ಎಂದಾದರೆ ಪ್ರಕರಣ ದಾಖಲಾಗಿ ಎರಡು ವಾರಗಳೊಳಗೆ ಈ ಬಗ್ಗೆ ಸಮರ್ಥನೆಗಳನ್ನು ಪೊಲೀಸ್‌ ಅಧಿಕಾರಿಯು ಮ್ಯಾಜಿಸ್ಟ್ರೇಟ್‌ಗೆ ನೀಡಬೇಕು.

*ವಿಚಾರಣೆಗೆ ಹಾಜರಾಗುವಂತೆ ಪ್ರಕರಣ ದಾಖಲಾಗಿ ಎರಡು ವಾರಗಳೊಳಗೆ ಆರೋಪಿಗೆ ಕಾರಣಗಳಿರುವ ನೋಟಿಸ್‌ ನೀಡಬೇಕು.

*ಈ ನಿರ್ದೇಶನಗಳನ್ನು ಪಾಲಿಸದ ಅಧಿಕಾರಿಗಳ ವಿರುದ್ಧ ಇಲಾಖಾ ಕ್ರಮ ಕೈಗೊಳ್ಳಬೇಕು ಮತ್ತು ನ್ಯಾಯಾಂಗ ನಿಂದನೆ ಅಡಿಯಲ್ಲಿಯೂ ಅವರು ಶಿಕ್ಷೆಗೆ ಒಳಗಾಗುತ್ತಾರೆ.

*ಕಾರಣಗಳನ್ನು ನೀಡದೆ ಆರೋಪಿಯನ್ನು ವಶಕ್ಕೆ ಪಡೆಯಲು ಆದೇಶ ನೀಡುವ ಮ್ಯಾಜಿಸ್ಟ್ರೇಟ್‌ ವಿರುದ್ಧವೂ ಹೈಕೋರ್ಟ್‌ ಕ್ರಮ ಕೈಗೊಳ್ಳಬೇಕು.

Comments are closed.