ಹೊಸದಿಲ್ಲಿ : ಕಳೆದ ವಾರ ಭಾರತೀಯ ಸೇನೆ ಉಗ್ರರು ಹಾಗು ಪಾಕ್ ಸೈನಿಕರ ವಿರುದ್ಧ ನಡೆಸಿದ “ಸರ್ಜಿಕಲ್ ಸ್ಟ್ರೈಕ್’ (ಸಿಮೀತ ದಾಳಿ)ಯನ್ನು ಪಾಕಿಸ್ತಾನ ಅಲ್ಲಗಳೆಯುತ್ತಿರುವ ಮಧ್ಯೆ, ದಾಳಿಗೆ ಸಂಬಂಧಿಸಿ ಪುರಾವೆ ಕೊಡುವಂತೆ ಆಗ್ರಹಿಸಿರುವ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಪಾಕ್ ಮಾಧ್ಯಮಗಳಲ್ಲಿ ಹೀರೊ ಆಗಿದ್ದಾರೆ.
ಭಾರತದ ವಿಶೇಷ ಸೇನಾ ಪಡೆ ಕಳೆದ ವಾರ ಪಾಕ್ ಆಕ್ರಮಿತ ಕಾಶ್ಮೀರದೊಳಗೆ ನುಗ್ಗಿ 30ರಿಂದ 70ರಷ್ಟು ಉಗ್ರರನ್ನು ಹಾಗೂ 9 ಪಾಕ್ ಸೈನಿಕರನ್ನು ಹತ್ಯೆಗೈದ “ಸರ್ಜಿಕಲ್ ಸ್ಟ್ರೈಕ್’ ನಡೆದೇ ಇಲ್ಲವೆಂದು ಪಾಕಿಸ್ಥಾನ ಹೇಳುತ್ತಿರುವುದರಿಂದ ಆ ಬಗ್ಗೆ ಪುರಾವೆಯನ್ನು ಕೊಡುವಂತೆ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು 3 ನಿಮಿಷಗಳ ವಿಡಿಯೋ ಸಂದೇಶದ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೇಳಿಕೊಂಡಿರುವ ವಿವಾದಾತ್ಮಕ ವಿದ್ಯಮಾನ ಪಾಕ್ ಟಿವಿ, ಪತ್ರಿಕೆಗಳ ಮುಖಪುಟದಲ್ಲಿ ಪ್ರಧಾನ ಶೀರ್ಷಿಕೆಯಡಿ ಪ್ರಕಟಗೊಂಡಿದೆ.
ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಉಗ್ರರ ನೆಲೆಗಳ ಮೇಲೆ ಭಾರತೀಯ ಸೇನೆಯು ನಿರ್ದಿಷ್ಟ ದಾಳಿ ನಡೆಸಿರುವುದು ಸುಳ್ಳು ಸುದ್ದಿ ಎಂದು ಪಾಕಿಸ್ತಾನ ಹೇಳುತ್ತಿದೆ. ಹೀಗಾಗಿ ದಾಳಿ ನಡೆದಿರುವುದನ್ನು ಸಾಬೀತು ಪಡಿಸಬೇಕಿದ್ದು, ಇದಕ್ಕೆ ಸಂಬಂಧಿಸಿದ ಸಾಕ್ಷ್ಯ ಬಿಡುಗಡೆ ಮಾಡಿ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಆಗ್ರಹಿಸಿದ್ದಾರೆ.
ಕೇಜ್ರಿವಾಲ್ ಜೊತೆಗೆ ಕಾಂಗ್ರೆಸ್ನ ಮುಂಬೈ ಘಟಕದ ಅಧ್ಯಕ್ಷ ಸಂಜಯ್ ನಿರುಪಮ್ ಕೂಡ ಧ್ವನಿಗೂಡಿಸಿದ್ದು, ಹಿತಾಸಕ್ತಿಗಾಗಿ ಕೇಂದ್ರ ಸರ್ಕಾರ ಸರ್ಜಿಕಲ್ ದಾಳಿ ಮಾಡಿದ್ದಾಗಿ ಹೇಳಿಕೊಂಡಿದೆ. ಆದರೆ ಇದು ನಕಲಿಯಾಗಿದೆ. ಪಾಕಿಸ್ತಾನ ವಿರುದ್ಧ ಸರ್ಜಿಕಲ್ ದಾಳಿ ನಡೆಸಬೇಕು ಎಂಬುದು ಎಲ್ಲ ಭಾರತೀಯರ ಆಶಯವಾಗಿದೆ. ಆದರೆ ನಕಲಿ ದಾಳಿ ನಡೆಸಿ ಪ್ರಚಾರಗಿಟ್ಟಿಸಿಕೊಳ್ಳುತ್ತಿದೆ ಎಂದು ಆರೋಪ ಮಾಡಿದ್ದಾರೆ.
ಪ್ರಧಾನಿ ಮೋದಿಯಿಂದ ಸರ್ಜಿಕಲ್ ಸ್ಟ್ರೈಕ್ ಪುರಾವೆಯನ್ನು ಆಗ್ರಹಿಸಿರುವುದು ಇಡಿಯ ದೇಶ ಹಾಗೂ ಭಾರತೀಯ ಸೇನಾ ಪಡೆಯ ಮೇಲೆ ಅವಿಶ್ವಾಸ ತೋರಿಸಿ ಎಸಗಿರುವ ಅವಮಾನವಾಗಿದೆ ಎಂದು ಬಿಜೆಪಿ ಕಟುವಾಗಿ ಟೀಕಿಸಿದೆ.
ಇತ್ತ ಬಿಜೆಪಿ ಮುಖಂಡ, ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಅವರು ಕೇಜ್ರಿವಾಲ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕೇಜ್ರಿವಾಲ್ ಅವರು ಪಾಕಿಸ್ತಾನದಲ್ಲಿ ಪ್ರಮುಖ ಸುದ್ದಿಯಾಗುತ್ತಿದ್ದಾರೆ ಎಂದು ಹೇಳಿದ ಪ್ರಸಾದ್, ಕೇಜ್ರಿವಾಲ್ ಅವರಿಗೆ ನಮ್ಮ ಸೇನೆಯ ಧೈರ್ಯದ ಬಗ್ಗೆ ಸಂದೇಹವಿದೆಯೇ? ಕೇಜ್ರಿವಾಲ್ ಯಾಕೆ ಪಾಕಿಸ್ತಾನದ ಮಾತಿಗೆ ಬೆಲೆಕೊಡುತ್ತಿದ್ದಾರೆ?ಎಂದು ಪ್ರಶ್ನಿಸಿದ್ದಾರೆ.
ಅದೇ ವೇಳೆ ಕೇಂದ್ರದಲ್ಲಿ ಕಾಂಗ್ರೆಸ್ ಆಡಳಿತ ನಡೆಸುತ್ತಿದ್ದಾಗಲೂ ಪಾಕ್ ಮೇಲೆ ನಿರ್ದಿಷ್ಟ ದಾಳಿ ನಡೆದಿತ್ತು. ಆದರೆ ನಾವು ಅದನ್ನು ಬಹಿರಂಗ ಪಡಿಸಿರಲಿಲ್ಲ ಎಂದು ಹೇಳಿದ ಮಾಜಿ ಗೃಹ ಸಚಿವ ಪಿ.ಚಿದಂಬರಂ ಅವರ ಹೇಳಿಕೆ ವಿರುದ್ಧವೂ ಪ್ರಸಾದ್ ಕಿಡಿ ಕಾರಿದ್ದಾರೆ, ಚಿದಂಬರಂ ಅವರು ಕೂಡಾ ನಮ್ಮ ಸೇನಾಪಡೆಯ ಸಾಮರ್ಥ್ಯದ ಬಗ್ಗೆ ಸಂದೇಹ ವ್ಯಕ್ತ ಪಡಿಸುವವರ ಗುಂಪಿನಲ್ಲಿ ಸೇರಿದ್ದಾರೆ ಎಂದು ಪ್ರಸಾದ್ ವಾಗ್ದಾಳಿ ನಡೆಸಿದ್ದಾರೆ.
Comments are closed.