ಬಿಕನೇರ್: ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಉಗ್ರ ನೆಲೆಗಳ ಮೇಲೆ ಭಾರತೀಯ ಸೇನೆ ನಡೆಸಿದ್ದ ಸೀಮಿತ ದಾಳಿ ಕುರಿತಂತೆ ಹೇಳಿಕೆ ನೀಡಿ ಸಾಕಷ್ಟು ವಿರೋಧಕ್ಕೆ ಕಾರಣವಾಗಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಮೇಲೆ ಮಸಿ ದಾಳಿ ನಡೆದಿರುವುದಾಗಿ ಮಂಗಳವಾರ ತಿಳಿದುಬಂದಿದೆ.
ರಾಜಸ್ತಾನದ ಬಿಕನೇರ್ ನಗರದಲ್ಲಿ ಕೇಜ್ರಿವಾಲ್ ಅವರ ಮೇಲೆ ಮಸಿ ನಡೆದಿದ್ದು, ಪೊಲೀಸರು ಹಾಗೂ ಮಾಧ್ಯಮ ಪ್ರತಿನಿಧಿಗಳ ಎದುರಿನಲ್ಲಿಯೇ ಇಬ್ಬರು ದುಷ್ಕರ್ಮಿಗಳು ಮಸಿ ದಾಳಿ ನಡೆಸಿದ್ದಾರೆಂದು ಹೇಳಲಾಗುತ್ತಿದೆ. ಅಲ್ಲದೆ. ಪಾಕಿಸ್ತಾನ ಪರವಾಗಿ ಹೇಳಿಕೆ ನೀಡಿದ್ದ ಹಿನ್ನೆಲೆಯಲ್ಲಿ ಕೇಜ್ರಿವಾಲ್ ಅವರಿಗೆ ಕಪ್ಪು ಬಾವುಟವನ್ನು ಪ್ರದರ್ಶಿಸಿದ್ದಾರೆಂದು ತಿಳಿದುಬಂದಿದೆ.
ಇನ್ನು ಮಸಿ ದಾಳಿ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಕೇಜ್ರಿವಾಲ್ ಅವರು, ಮಸಿ ದಾಳಿ ನಡೆಸಿದವರಿದೆ ದೇವರು ಒಳ್ಳೆಯದು ಮಾಡಲಿ. ಚೆನ್ನಾಗಿರಲಿ ಎಂದು ಆಶಿಸುತ್ತೇನೆಂದು ಹೇಳಿದ್ದಾರೆ.
ಇದೇ ವೇಳೆ ತಮ್ಮ ಹೇಳಿಕೆ ಕುರಿತಂತೆ ಸ್ಪಷ್ಟನೆ ನೀಡಿರುವ ಅವರು, ನನ್ನ ಹೇಳಿಕೆಗೆ ಬಿಜೆಪಿ ಯಾಕೆ ಹೆದರುತ್ತಿದೆ. ಸೀಮಿತ ದಾಳಿಯೇ ನಡೆದಿಲ್ಲ ಎಂದು ಭಾರತದ ವಿರುದ್ಧ ತಪ್ಪು ಪ್ರಚಾರ ಮಾಡುತ್ತಿರುವ ಪಾಕಿಸ್ತಾನಕ್ಕೆ ಸರಿಯಾದ ಉತ್ತರ ನೀಡಿ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಹೇಳಿದ್ದೆ ಅಷ್ಟೆ. ಸೀಮಿತ ದಾಳಿ ನಡೆದಿರುವ ವಿಚಾರ ಎಲ್ಲರಿಗೂ ತಿಳಿದಿರುವ ವಿಚಾರ ಎಂದು ಹೇಳಿದ್ದಾರೆ.
Comments are closed.