ರಾಷ್ಟ್ರೀಯ

ಭೋಪಾಲ್‌ ಜೈಲಿನಿಂದ ಉಗ್ರರು ಪರಾರಿಯಾಗುವ ವೇಳೆ 80 ಮಂದಿ ಕಾವಲು ಸಿಬ್ಬಂದಿ ನಾಪತ್ತೆಯಾಗಿದ್ದುದು ಬೆಳಕಿಗೆ !

Pinterest LinkedIn Tumblr

bopal

ಭೋಪಾಲ್‌ : ಎಂಟು ಮಂದಿ ಸಿಮಿ ಶಂಕಿತ ಉಗ್ರರು ಭೋಪಾಲ್‌ ಸೆಂಟ್ರಲ್‌ ಜೈಲಿನಲ್ಲಿ ಕಾವಲು ಸಿಬಂದಿಯನ್ನು ಕೊಂದು ಕಾರಾಗೃಹದ ಗೋಡೆ ಹಾರಿ ಪರಾರಿಯಾದ ಸಂದರ್ಭದಲ್ಲಿ ಕಾರಗೃಹದಲ್ಲಿ ಕರ್ತವ್ಯನಿರತರಾಗಿರಬೇಕಿದ್ದ ಸುಮಾರು 80 ಕಾವಲು ಸಿಬಂದಿ ನಾಪತ್ತೆಯಾಗಿದ್ದುದು ಈಗ ತಡವಾಗಿ ಬೆಳಕಿಗೆ ಬಂದಿದೆ.

ಜೈಲಿನಲ್ಲಿ ಕರ್ತವ್ಯ ನಿರ್ವಹಿಸಿಕೊಂಡಿರಬೇಕಿದ್ದ ಈ 80 ಮಂದಿ ಕಾವಲು ಸಿಬಂದಿಗಳನ್ನು ಬೇರೆ ಬೇರೆ ಕಾರ್ಯಾಲಯಗಳಲ್ಲಿ, ಇಲ್ಲವೇ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರ ನಿವಾಸದಲ್ಲಿ, ಜೈಲು ಸಚಿವೆ ಕುಸುಮ್‌ ಮೆಹದಲೆ ಅವರ ಬಂಗ್ಲೆಯಲ್ಲಿ ಅಥವಾ ಹಿರಿಯ ಜೈಲು ಅಧಿಕಾರಿಗಳ ಮನೆಯಲ್ಲಿ ಅಥವಾ ಜೈಲಿನ ಪ್ರಧಾನ ಕಾರ್ಯಾಲಯದಲ್ಲಿ ನಿಯೋಜಿಸಲಾಗಿತ್ತು ಎಂಬ ವಿಷಯ ಈಗ ಬಹಿರಂಗವಾಗಿದೆ.

ಮಧ್ಯಪ್ರದೇಶದ ಅತ್ಯಂತ ಬಿಗಿ ಭದ್ರತೆಯ ಜೈಲುಗಳಲ್ಲಿ ಒಂದಾಗಿರುವ ಭೋಪಾಲದ ಕೇಂದ್ರ ಕಾರಾಗೃಹದಲ್ಲಿ 3,300 ಕೈದಿಗಳು ಇದ್ದಾರೆ. ಆದರೆ ಇವರನ್ನು ಕಾಯಲು ಇರುವ ಪೊಲೀಸ್‌ ಸಿಬಂದಿಗಳ ಸಂಖ್ಯೆ ಕೇವಲ 139.

ಈ ವಿಷಯವನ್ನು ಜೈಲು ಸಚಿವೆ ಮೆಹದಲೆ ಅವರ ಗಮನಕ್ಕೆ ಮಾಧ್ಯಮದವರು ತಂದಾಗ ಅದಕ್ಕೆ ಅವರು, “ನೀವು ಹೇಳುತ್ತಿರುವುದರಲ್ಲಿ ಅತಿಶಯವಿದೆ ಎಂದು ನನಗೆ ಅನ್ನಿಸುತ್ತಿದೆ. ನನ್ನ ಕಾರ್ಯಾಲಯದಲ್ಲಿ ನನಗಿರುವ ಒಬ್ಬ ಡ್ರೈವರ್‌ ಮತ್ತು ಇಬ್ಬರು ಸಿಬಂದಿ. ಉಳಿದವರ ಬಗ್ಗೆ ನನಗೆ ಗೊತ್ತಿಲ್ಲ; ಹಾಗಿದ್ದರೂ ನೀವು ಹೇಳುವ ರೀತಿಯಲ್ಲಿ ವಿಷಯ ಇಲ್ಲವೆಂದೇ ನನಗನ್ನಿಸುತ್ತಿದೆ. ಆದರೂ ನಾನು ಆ ಬಗ್ಗೆ ತನಿಖೆ ಮಾಡಿಸುತ್ತೇನೆ’ ಎಂದು ಹೇಳಿದರು.

ಮಧ್ಯಪ್ರದೇಶ ರಾಜಧಾನಿಯಾಗಿರುವ ಭೋಪಾಲದ ಹೊರವಲಯದಲ್ಲಿರುವ ಈ ಕೇಂದ್ರ ಕಾರಾಗೃಹಕ್ಕೆ ನಿಗಿದಯಾಗಿರುವ ಕಾವಲು ಪೊಲೀಸರ ಸಂಖ್ಯೆ 250. ಈ ಪೈಕಿ 31 ಹುದ್ದೆಗಳು ಭರ್ತಿಯಾಗದೆ ಖಾಲಿ ಉಳಿದಿವೆ. ಇರುವ ಸಿಬಂದಿಗಳ ಪೈಕಿ 70 ಮಂದಿ ತರಬೇತಿ ಪಡೆಯುತ್ತಿರುವವರಾಗಿದ್ದಾರೆ.

ಎಂಟು ಮಂದಿ ಸಿಮಿ ಶಂಕಿತ ಉಗ್ರರು ಜೈಲಿನಲ್ಲಿ ತಮಗೆ ಕೊಟ್ಟಿರುವ ಪ್ಲೇಟು, ತಟ್ಟೆ, ಟಂಗ್‌ ಕ್ಲೀನರ್‌ಗಳನ್ನು ಹರಿತಗೊಳಿಸಿ ಅದರಿಂದಲೇ ತಮ್ಮ ಕೋಣೆಯ ಬೀಗದ ಚಾಬಿ ತಯಾರಿಸಿ, ಕಾವಲು ಸಿಬಂದಿಯ ಕತ್ತು ಸೀಳಿ, ತಮಗೆ ಕೊಡಲಾಗಿದ್ದ ಹೊದಿಕೆಗಳನ್ನೇ ಒಂದಕ್ಕೊಂದು ಬಿಗಿದು 30 ಅಡಿ ಎತ್ತರದ ಜೈಲಿನ ಗೋಡೆಯನ್ನು ಏರಿ ಪರಾರಿಯಾಗಿರುವ ಸಿನಿಮೀಯ ರೀತಿಯ ಘಟನೆಯನ್ನು ನೋಡಿದರೆ ಈ ಕೇಂದ್ರ ಕಾರಾಗೃಹದ ಭದ್ರತೆಯ ಬಗ್ಗೆ ಅಚ್ಚರಿ ಮೂಡುತ್ತದೆ ಎಂದು ಮೂಲಗಳು ಹೇಳಿವೆ.

ಜೈಲಿನಿಂದ ಈ ರೀತಿ ಪರಾರಿಯಾದ ಉಗ್ರರು ಬಳಿಕ 10 ಕಿ.ಮೀ. ದೂರವನ್ನು ಕಾಲ್ನಡಿಗೆಯಲ್ಲಿ ಕ್ರಮಿಸಿ ಹಳ್ಳಿಯೊಂದರ ದಟ್ಟಾರಣ್ಯದಲ್ಲಿ ಅವಿತುಕೊಂಡಿದ್ದರು. ಆ ಬಳಿಕ ಪೊಲೀಸ್‌ ಎನ್‌ಕೌಂಟರ್‌ನಲ್ಲಿ ಎಲ್ಲರೂ ಹತರಾಗಿದ್ದರು. ಇದೀಗ ನಕಲಿ ಎನ್‌ಕೌಂಟರ್‌ ಎಂಬ ಕಳಂಕಕ್ಕೆ ಗುರಿಯಾಗಿದ್ದು ಮಧ್ಯಪ್ರದೇಶ ಸರಕಾರ ಈ ಬಗ್ಗೆ ನ್ಯಾಯಾಂಗ ತನಿಖೆಗೆ ಆದೇಶಿಸಿದೆ.

Comments are closed.