ನವದೆಹಲಿ: ಹುತಾತ್ಮ ಯೋಧ ಮನ್‌ದೀಪ್ ಸಿಂಗ್ ಹತ್ಯೆಗೆ ಪ್ರತೀಕಾರವಾಗಿ ಭಾರತೀಯ ಸೇನೆ ಅಕ್ಟೋಬರ್ 29 ರಂದು ಪಾಕಿಸ್ತಾನದ ವಿರುದ್ಧ ಭರ್ಜರಿ ಕಾರ್ಯಾಚರಣೆ ನಡೆಸಿ 4 ಪಾಕ್ ಸೇನಾ ನೆಲೆ ಧ್ವಂಸಗೊಳಿಸಿದ್ದು ಕನಿಷ್ಠ 40 ಪಾಕ್ ಸೈನಿಕರನ್ನು ಬಲಿ ಪಡೆದಿದ್ದಾರೆ ಎಂದು ಸಿಎನ್ಎನ್-ನ್ಯೂಸ್18 ವರದಿ ಮಾಡಿದೆ.
ಅಕ್ಟೋಬರ್ 28 ರಂದು ಯೋಧ ಮನ್‌ದೀಪ್ ಸಿಂಗ್ ರನ್ನು ಹತ್ಯೆ ಮಾಡಿ ಆತನ ದೇಹವನ್ನು ತುಂಡು ತುಂಡಾಗಿ ಕತ್ತರಿಸಿದ್ದ ಪಾಕಿಸ್ತಾನಕ್ಕೆ ಮರು ದಿನವೇ ಭಾರತೀಯ ಸೇನೆ ಕಾರ್ಯಾಚರಣೆ 4 ಸೇನಾ ನೆಲೆಗಳನ್ನು ಧ್ವಂಸಗೊಳಿಸುವ ಮೂಲಕ ತಕ್ಕ ಪಾಠ ಕಲಿಸಿದೆ.
ಜಮ್ಮು ಮತ್ತು ಕಾಶ್ಮೀರದ ಕುಪ್ವಾರ ಜಿಲ್ಲೆಯ ಮಚ್ಚಿಲ್ ಸೆಕ್ಟರ್ ನಲ್ಲಿ ಪಾಕ್ ಸೇನೆ ಕುಮ್ಮಕ್ಕಿನಿಂದ ಉಗ್ರರು ಯೋಧ ಮನ್‌ದೀಪ್ ಸಿಂಗ್ ಹತ್ಯೆಗೈದು ನಂತರ ದೇಹವನ್ನು ತುಂಡರಿಸಿದ್ದರು. ನಂತರ ಪಾಕ್ ಸೈನಿಕರ ಸಹಾಯದೊಂದಿಗೆ ಉಗ್ರರು ಗಡಿ ದಾಟಿ ಪರಾರಿಯಾಗಿದ್ದರು.
ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಭಾರತೀಯ ಸೇನೆ ನಡೆಸಿದ ಸೀಮಿತ ದಾಳಿ ಬಳಿಕ ಭಾರತ ಗಡಿ ನುಸುಳಲು ಉಗ್ರರು ಭಾರಿ ಪ್ರಯತ್ನಗಳನ್ನು ನಡೆಸಿದ್ದು ಇಲ್ಲಿಯವರೆಗೂ ಸುಮಾರು 18 ಉಗ್ರರ ಯತ್ನವನ್ನು ವಿಫಲಗೊಳಿಸಿದ್ದಾರೆ.
Comments are closed.