ನವದೆಹಲಿ: ದೇಶ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿರುವ 25 ಎನ್‌ಜಿಒ ಗಳ ವಿದೇಶಿ ದೇಣಿಗೆ ಪರವಾನಗಿಯನ್ನು ನವೀಕರಿಸಲು ಕೇಂದ್ರ ಗೃಹ ಸಚಿವಾಲಯ ನಿರಾಕರಿಸಿದೆ.
ಪರವಾನಗಿ ನವೀಕರಣಕ್ಕಾಗಿ ಅರ್ಜಿ ಸಲ್ಲಿಸಲು ನೀಡಲಾಗಿದ್ದ ಗಡುವು ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಅರ್ಜಿ ಸಲ್ಲಿಸದ 11, 319 ಎನ್ ಜಿ ಒ ಗಳ ಪರವಾನಗಿಯನ್ನು ರದ್ದುಗೊಳಿಸಲಾಗಿದ್ದರೆ, ಸೂಕ್ತ ದಾಖಲೆಗಳನ್ನು ನೀಡದ ಕಾರಣ ಎಫ್ ಸಿಆರ್ ಎ ಪರವಾನಗಿ ನವೀಕರಣಕ್ಕಾಗಿ ಅರ್ಜಿ ಸಲ್ಲಿಸಿದ್ದ 1,736 ಎನ್ ಜಿಒ ಗಳ ಅರ್ಜಿಗಳನ್ನು ತಿರಸ್ಕರಿಸಲಾಗಿದೆ.
ಕೇಂದ್ರ ಗೃಹ ಸಚಿವಾಲಯದ ಈ ಕಠಿಣ ಕ್ರಮದಿಂದಾಗಿ ಈ ವರೆಗೂ ವಿದೇಶಗಳಿಂದ ದೇಣಿಗೆ ಪಡೆಯುತ್ತಿದ್ದ ಎನ್ ಜಿಒ ಗಳ ಸಂಖ್ಯೆ 33,158 ರಿಂದ 20,000 ಕ್ಕೆ ಇಳಿಕೆಯಾಗಿದೆ. ಇನ್ನು ತಡೆಹಿಡಿಯಲಾಗಿರುವ 1,736 ಎನ್ ಜಿಒ ಗಳ ಪರವಾನಗಿಗಳನ್ನು ನವೀಕರಣಗೊಳಿಸುವ ವಿಚಾರವನ್ನು ಆ ಎನ್ ಜಿ ಒ ಗಳು ಸಮರ್ಪಕ ದಾಖಲೆ ನೀಡಿದ ಬಳಿಕ (ನವೆಂಬರ್ 8 ರ ವೇಳೆಗೆ) ಅಂತಿಮಗೊಳಿಸಲಾಗುತ್ತದೆ.
ಇನ್ನು ದೇಶ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿ ವಿದೇಶಿ ದೇಣಿಗೆ ಪರವಾನಗಿ ಕಳೆದುಕೊಂಡಿರುವ 25 ಎನ್ ಜಿ ಒ ಗಳ ಗುರುತಿನ ಬಗ್ಗೆ ಗೃಹ ಸಚಿವಾಲಯ ಈ ವರೆಗೂ ಹೆಚ್ಚಿನ ಮಾಹಿತಿ ಬಿಡುಗಡೆ ಮಾಡಿಲ್ಲ. ಇದು ದೇಶವಿರೋಧಿ ಚಟುವಟಿಕೆಗಳಲ್ಲಿ ತೊಡಗಿವೆ ಎನ್ನಲಾದ ಎನ್ ಜಿಒಗಳ ಕಥೆಯಾದರೆ, ಇನ್ನು ಪರವಾನಗಿ ನವೀಕರಣೆಕ್ಕೆ ಅರ್ಜಿಯೇ ಸಲ್ಲಿಸಿದ ಎನ್ ಜಿಒ ಗಳ ದೊಡ್ಡ ಪಟ್ಟಿಯೇ ಇದೆ.
ಅರ್ಜಿ ಸಲ್ಲಿಸದ 11, 319 ಎನ್ ಜಿ ಒ ಗಳ ಪೈಕಿ ಆಕ್ಸ್ ಫಾಮ್ ಇಂಡಿಯಾ ಟ್ರಸ್ಟ್, ಅದಾನಿ ಫೌಂಡೇಶನ್, ಇಂದಿರಾಗಾಂಧಿ ನ್ಯಾಷನಲ್ ಸೆಂಟರ್ ಫಾರ್ ಆರ್ಟ್ಸ್(ಐಜಿಎನ್ ಸಿಎ), ಸಂಜಯ್ ಗಾಂಧಿ ಮೆಮೊರಿಯಲ್ ಟ್ರಸ್ಟ್, ಅಮರನಾಥ್ ಜಿ ದೇವಾಲಯ ಮಂಡಳಿಯ ಮುಖ್ಯಕಾರ್ಯನಿರ್ವಹಣಾಧಿಕಾರಿಯ ಕಚೇರಿ, ಇಂಡಿಯನ್ ಮೆಡಿಕಲ್ ಅಸೋಸಿಯೇಷ, ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾನಿಲಯ(ಐಜಿಎನ್ಒಯು), ಮುಂಬೈ ಮೂಲದ ಜಸ್ಲೋಕ್ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರ ಸೇರಿದಂತೆ ಪ್ರತಿಷ್ಠಿತ ಸಂಸ್ಥೆಗಳ ಹೆಸರುಗಳಿವೆ.
ಗೃಹ ಇಲಾಖೆ ಹಿರಿಯ ಅಧಿಕಾರಿ ನೀಡಿರುವ ಮಾಹಿತಿ ಪ್ರಕಾರ ವಿದೇಶಿ ದೇಣಿಗೆ ಪಡೆಯುವ ಪರವಾನಗಿ ಅಡಿಯಲ್ಲಿ ಪರವಾನಗಿ ಪಡೆಯಲು ಒಟ್ಟು 33,138 ಎನ್ ಜಿ ಒ ಗಳು ನೋಂದಣಿ ಮಾಡಿಸಿಕೊಂಡಿದ್ದವು ಈ ಪೈಕಿ ಪ್ರಸಕ್ತ ವರ್ಷದಲ್ಲಿ 27,810 ಎನ್ ಜಿ ಒ ಗಳದ್ದು ಪರವಾನಗಿ ನವೀಕರಣಗೊಳ್ಳಬೇಕಿತ್ತು. ಅಕ್ಟೋಬರ್ 31 ವರೆಗೆ ಪರವಾನಗಿಯ ಸಿಂಧುತ್ವವವನ್ನು ವಿಸ್ತಣೆ ಮಾಡಿ ನವೀಕರಣಕ್ಕಾಗಿ ಜೂ.30 ರೊಳಗೆ ಅರ್ಜಿ ಸಲ್ಲಿಸಬೇಕೆಂದು ಸರ್ಕಾರ ಸೂಚನೆ ನೀಡಿತ್ತು.
27,810 ಎನ್ ಜಿ ಒ ಗಳ ಪೈಕಿ ಕೇವಲ 16,491 ಎನ್ ಜಿ ಒ ಗಳು ಮಾತ್ರವೇ ನವೀಕರಣಕ್ಕಾಗಿ ಅರ್ಜಿ ಸಲ್ಲಿಸಿದ್ದರೆ ಉಳಿದ 11,319 ಸಂಸ್ಥೆಗಳು ಅರ್ಜಿ ಸಲ್ಲಿಸಿಲ್ಲ. 1,736 ಎನ್ ಜಿಒ ಗಳ ಅರ್ಜಿಗಳನ್ನು ಸೂಕ್ತ ಮಾಹಿತಿ ಇಲ್ಲದ ಕಾರಣಕ್ಕಾಗಿ ತಿರಸ್ಕರಿಸಲಾಗಿದ್ದರೆ 25 ಎನ್ ಜಿ ಒ ಗಳು ಸೂಕ್ತ ಮಾಹಿತಿ ನೀಡಿದ್ದರೂ ದೇಶವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ಕಾರಣದಿಂದಾಗಿ ಪರವಾನಗಿಯನ್ನು ರದ್ದುಗೊಳಿಸಲಾಗಿದೆ ಎಂದು ಕೇಂದ್ರ ಗೃಹ ಇಲಾಖೆ ಮಾಹಿತಿ ನೀಡಿದೆ.
Comments are closed.