ಮುಂಬೈ: 500 ಮತ್ತು 1000 ರು.ಗಳ ನೋಟ್ ಗಳ ಮೇಲಿನ ನಿಷೇಧದ ಪರಿಣಾಮ ಚಿನ್ನ ಬೆಳ್ಳಿ ಮಾರಾಟದ ಮೇಲೂ ಭಾರಿ ಪರಿಣಾಮ ಬೀರಿದ್ದು, ನೋಟ್ ಗಳ ಮೇಲೆ ನಿಷೇಧ ಹೇರಿದ ಕೆಲವೇ ಗಂಟೆಗಳಲ್ಲಿ ಬೆಳ್ಳಿ ಬೆಲೆಯಲ್ಲಿ ಬರೊಬ್ಬರಿ 2000 ರು ಏರಿಕೆಯಾಗಿದೆ ಎಂದು ಹೇಳಲಾಗುತ್ತಿದೆ.
ನಿನ್ನೆ ಪ್ರಧಾನಿ ನರೇಂದ್ರ ಮೋದಿ ಅವರು 500 ಮತ್ತು 1000 ರು. ಮುಖಬೆಲೆ ನೋಟ್ ಗಳ ಮೇಲೆ ನಿಷೇಧ ಹೇರುತ್ತಲೇ ಇತ್ತ ಷೇರುಮಾರುಕಟ್ಟೆ ಹಾಗೂ ಚಿನಿವಾರ ಪೇಟೆಯಲ್ಲಿ ತಲ್ಲಣ ಶುರುವಾಗಿದ್ದು, ಅದರಂತೆ ಬೆಳ್ಳಿ ಬೆಲೆಯಲ್ಲಿ ಭಾರಿ ಪ್ರಮಾಣದ ಏರಿಕೆಯಾಗಿದೆ ಎಂದು ಹೇಳಲಾಗುತ್ತಿದೆ. ಮೂಲಗಳ ಪ್ರಕಾರ 1 ಕೆಜಿ ಬೆಳ್ಳಿ ಬೆಲೆಯಲ್ಲಿ ಶೇ.35ರಷ್ಟು ಏರಿಕೆಯಾಗಿದ್ದು, 2 ಸಾವಿರ ರು ಏರಿಕೆ ಮೂಲಕ 43.500 (ಬೆಂಗಳೂರು ಬೆಲೆ ಮಾತ್ರ)ಕ್ಕೇರಿಕೆಯಾಗಿದೆ. ಚಿನ್ನದಬೆಲೆಯಲ್ಲೂ ಕೂಡ ಶೇ.35ರಷ್ಟು ಏರಿಕೆಯಾಗಿದ್ದು, ಬೆಂಗಳೂರಿನಲ್ಲಿ ಚಿನ್ನದರ ಪ್ರತೀ 10 ಗ್ರಾಂ ಗೆ 31, 016ಕ್ಕೆ ಏರಿಕೆಯಾಗಿದೆ ಎಂದು ತಿಳಿದುಬಂದಿದೆ.
ಈ ಹಿಂದೆ ಚಿನ್ನದ ಬೇಡಿಕೆಯಲ್ಲಿ ಭಾರಿ ಪ್ರಮಾಣದ ಕುಸಿತವಾಗಿತ್ತಾದರೂ, ಭಾರತದಲ್ಲಿ 500 ರು ಮತ್ತು 1000 ರು.ಗಳ ನೋಟ್ ಗಳ ಮೇಲೆ ನಿಷೇಧ ಹೇರಿರುವುದರಿಂದ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಭಾರಿ ಏರಿಕೆ ಕಂಡುಬಂದಿದೆ. ಇದು ಮಾತ್ರವಲ್ಲದೇ ಅತ್ತ ಅಮೆರಿಕ ಅಧ್ಯಕ್ಷೀಯ ಚುನಾವಣೆ ಫಲಿತಾಂಶ ಕೂಡ ಬೆಲೆ ಏರಿಕೆ ಪರಿಣಾಮ ಬೀರುತ್ತಿದ್ದು, ಹಿಲರಿ ಹಾಗೂ ಟ್ರಂಪ್ ನಡುವಿನ ತೀವ್ರ ಪೈಪೋಟಿ ಕೂಡ ಬೆಲೆ ಏರಿಕೆಗೆ ಕಾರಣ ಎಂದು ಹೇಳಲಾಗುತ್ತಿದೆ.
Comments are closed.