ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಪಹರ್‍ಗಂಜ್‍ನಲ್ಲಿ 100 ರೂ. ಮುಖಬೆಲೆಯ ಒಟ್ಟು 70 ಲಕ್ಷ ರೂಪಾಯಿಯನ್ನು ಅಕ್ರಮವಾಗಿ ಹೊಂದಿದ್ದ ಆರೋಪದ ಮೇಲೆ ವೈದ್ಯರೊಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮಕ್ಕಳ ತಜ್ಞರಾದ ನಲ್ಲಾಲ್ ಎಂಬವರು ನೋಟಿನ ಬಂಡಲ್‍ಗಳನ್ನು ಕಾರ್‍ನಲ್ಲಿ ತುಂಬಿಸುತ್ತಿದ್ದುದನ್ನು ನೋಡಿದ ಸ್ಥಳೀಯರೊಬ್ಬರು ಪೊಲೀಸ್ ಕಂಟ್ರೋಲ್ ರೂಮ್‍ಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ನಲ್ಲಾಲ್ ಅವರನ್ನು ವಶಕ್ಕೆ ಪಡೆದಿದ್ದು, 100 ರೂ. ನೋಟುಗಳಲ್ಲಿ ಸುಮಾರು 69 ಲಕ್ಷದ 86 ಸಾವಿರ ರೂಪಾಯಿ ಹಣವನ್ನು ಹೊತ್ತೊಯ್ಯುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ನಲ್ಲಾಲ್ ಈ ಬಗ್ಗೆ ಪೊಲೀಸರಿಗೆ ಹೇಳಿಕೆ ನೀಡಿದ್ದು, ನನ್ನ ಉದ್ಯಮಿ ಗೆಳೆಯ ನನ್ನ ಬಳಿ ಇಟ್ಟುಕೊಳ್ಳಲು ತನ್ನ ಹಣವನ್ನು ನೀಡಿದ್ದ. ಅದನ್ನ ರಾಜೌರಿ ಗಾರ್ಡನ್‍ನಲ್ಲಿರುವ ನನ್ನ ಮನೆಗೆ ಕೊಂಡೊಯ್ಯುತ್ತಿದ್ದೆ ಎಂದು ಹೇಳಿದ್ದಾರೆ. ಸದ್ಯಕ್ಕೆ ಈ ಬಗ್ಗೆ ಆದಾಯ ತೆರಿಗೆ ಇಲಖೆಗೆ ಮಾಹಿತಿ ನೀಡಿದ್ದು, ತನಿಖೆ ಆರಂಭಿಸಿದ್ದಾರೆ ಎಂದು ಪೊಲಿಸರು ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಸರ್ಕಾರ 500 ಹಾಗೂ 1000 ರೂ. ಮುಖಬೆಲೆಯ ನೋಟುಗಳ ಮೇಲೆ ನಿಷೇಧ ಹೇರಿದ ಬೆನ್ನಲ್ಲೇ ಕಾಳಧನಿಕರು ತಮ್ಮ ಅಕ್ರಮ ಸಂಪಾದನೆಯನ್ನು ಉಳಿಸಿಕೊಳ್ಳಲು ಹಲವಾರು ರೀತಿಯ ತಂತ್ರ ರೂಪಿಸುತ್ತಿದ್ದಾರೆ. ದೇಶದ ಹಲವೆಡೆ ಹಣ ವಿನಿಮಯ ಮಾಡಿಕೊಳ್ಳಲು ಅಕ್ರಮವಾಗಿ ಸಾಗಾಟ ಮಾಡಲಾದ ಹಣವನ್ನ ಪೊಲೀಸರು ಸೀಜ್ ಮಾಡುತ್ತಿದ್ದಾರೆ.
Comments are closed.