ನವೆಂಬರ್ 8ರಂದು ಕೇಂದ್ರ ಸರ್ಕಾರ ಹಳೆಯ 500 ಹಾಗೂ 1000 ರೂ. ನೋಟಿನ ಮೇಲೆ ನಿಷೇಧ ಹೇರಿದ ನಂತರ 2 ಸಾವಿರ ರೂ. ಮುಖಬೆಲೆಯ ಹೊಸ ನೋಟನ್ನು ಬಿಡುಗಡೆ ಮಾಡಲಾಗಿದೆ. 500 ರೂ. ನೊಟನ್ನು ಕೂಡ ಹೊಸ ರೂಪದಲ್ಲಿ ಬಿಡುಗಡೆಗೊಳಿಸಿದ್ದಾರೆ. ಇದೇ ರೀತಿ 1 ಸಾವಿರ ರೂ. ನೋಟನ್ನು ಕೂಡ ಹೊಸ ವಿನ್ಯಾಸದೊಂದಿಗೆ ಬಿಡುಗಡೆ ಮಾಡಲಾಗುತ್ತದೆ ಎಂಬ ಸುದ್ದಿ ಹಬ್ಬಿತ್ತು. ಆದ್ರೆ ಊಹಾಪೋಹಗಳಿಗೆ ತೆರೆ ಎಳೆದ ಸಚಿವ ಅರುಣ್ ಜೇಟ್ಲಿ, ಸದ್ಯಕ್ಕೆ 1 ಸಾವಿರ ರೂ. ನೋಟನ್ನ ಚಲಾವಣೆಗೆ ತರುವುದಿಲ್ಲ ಎಂದು ಹೇಳಿದ್ದಾರೆ. ಅಲ್ಲದೆ ಇಂದು ದೇಶದಾದ್ಯಂತ 22,500 ಎಟಿಎಂಗಳ ತಂತ್ರಾಂಶ ಸರಿಪಡಿಸುವ ಕಾರ್ಯ ನಡೆಯುತ್ತದೆ ಎಂದು ಅವರು ತಿಳಿಸಿದ್ರು.
ಬ್ಯಾಂಕ್‍ನಲ್ಲಿ ಹಳೆಯ ನೋಟುಗಳ ವಿನಿಮಯದ ಮಿತಿಯನ್ನು ಕೇಂದ್ರ ಸರ್ಕಾರ ಇಂದಿನಿಂದ 4500 ರೂ.ಗಳಿಂದ 2 ಸಾವಿರ ರೂ.ಗೆ ಇಳಿಸಿದೆ. ಮದುವೆ ಸಮಾರಂಭಕ್ಕೆ ಸಂಬಂಧಿಸಿ ಒಂದು ಕುಟುಂಬದ ಒಬ್ಬ ಖಾತೆದಾರ, ತಂದೆ ಅಥವಾ ತಾಯಿ, ಕೆವೈಸಿ ನಿಯಮಗಳಿಗೆ ಬದ್ಧವಾಗಿರುವ ತಮ್ಮ ಖಾತೆಗಳಿಂದ ಗರಿಷ್ಠ 2.50 ಲಕ್ಷ ರೂ.ಗಳನ್ನು ಹಿಂಪಡೆಯಲು ಅವಕಾಶ ನೀಡಲಾಗಿದೆ.
ಅಲ್ಲದೆ ರೈತರು ತಮ್ಮ ಖಾತೆಗೆ ಜಮಾವಣೆಯಾದ ಕೃಷಿ ಸಾಲದ ಹಣದಲ್ಲಿ ವಾರಕ್ಕೆ 25 ಸಾವಿರ ರೂವರೆಗೆ ಹಣ ಡ್ರಾ ಮಾಡಿಕೊಳ್ಳಬಹುದು. ಎಪಿಎಂಸಿ ಮಾರುಕಟ್ಟೆಯಲ್ಲಿ ನೊಂದಾಯಿಸಿಕೊಂಡಿರುವ ಹೋಲ್‍ಸೇಲ್ ವ್ಯಾಪಾರಿಗಳು ವಾರಕ್ಕೆ 50 ಸಾವಿರ ರೂ.ವರೆಗೆ ಹಣ ಡ್ರಾ ಮಾಡಿಕೊಳ್ಳಬಹದು ಎಂದು ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಶಕ್ತಿಕಾಂತ್ ದಾಸ್ ಹೇಳಿದ್ದಾರೆ.
Comments are closed.